Lok Sabha Elections: ಐವರು ಸಚಿವರ ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್! ಇಲ್ಲಿದೆ ಸಂಭಾವ್ಯರ ಪಟ್ಟಿ
ಲೋಕಸಭೆ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ ಸಮಾಲೋಚನೆ ನಡೆಸುತ್ತಿದೆ. ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದು, ಕರ್ನಾಟಕದ ಐವರು ಸಚಿವರ ಮಕ್ಕಳಿಗೆ ಟಿಕೆಟ್ ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದೆ. ಯಾವೆಲ್ಲ ಸಚಿವರ ಮಕ್ಕಳಿಗೆ ಟಿಕೆಟ್ ಘೋಷಣೆ ಆಗುವ ಸಾಧ್ಯತೆ ಇದೆ ಎಂಬ ಪಟ್ಟಿ ಇಲ್ಲಿದೆ.
ಬೆಂಗಳೂರು, ಮಾರ್ಚ್ 20: ಐವರು ಸಚಿವರ ಮಕ್ಕಳೂ ಸೇರಿದಂತೆ ಕರ್ನಾಟಕದ 16 ಲೋಕಸಭಾ ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆಗೆ (Lok Sabha Elections) ಅಭ್ಯರ್ಥಿಗಳನ್ನು ಕಾಂಗ್ರೆಸ್ (Congress) ಕೇಂದ್ರ ಚುನಾವಣಾ ಸಮಿತಿ ಮಂಗಳವಾರ ಅಂತಿಮಗೊಳಿಸಿದೆ. ಉಳಿದ ಐದು ಸ್ಥಾನಗಳ ಬಗ್ಗೆ ನಿರ್ಧರಿಸಲು ಇಂದು ಮತ್ತೊಮ್ಮೆ ಸಭೆ ನಡೆಯಲಿದ್ದು, ಬಹುತೇಕ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಮೊದಲ ಪಟ್ಟಿಯಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿರುವ ಕಾಂಗ್ರೆಸ್, ಉಳಿದ ಕೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಮಂಗಳವಾರ ಹೈವೋಲ್ಟೇಜ್ ಮೀಟಿಂಗ್ ನಡೆಸಿತ್ತು. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಗುಜರಾತ್, ತೆಲಂಗಾಣ, ತಮಿಳುನಾಡು ಸೇರಿದಂತೆ ಕರ್ನಾಟಕದ (Karnataka) ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗಿದೆ. ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಘೋಷಣೆ ಮಾಡುವುದಾಗಿ ಹೇಳಿದ್ದಾರೆ.
ಯಾವೆಲ್ಲ ಸಚಿವರ ಮಕ್ಕಳಿಗೆ ಟಿಕೆಟ್?
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ (ಬೆಂಗಳೂರು ದಕ್ಷಿಣ), ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (ಚಿಕ್ಕೋಡಿ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ (ಬೆಳಗಾವಿ), ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ (ಬಾಗಲಕೋಟೆ), ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ (ಬೀದರ್) ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತಗೊಂಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಮಿತಿಯು ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಏಕೆಂದರೆ ಈ ಕ್ಷೇತ್ರಗಳಲ್ಲಿ ಅನೇಕ ಅಭ್ಯರ್ಥಿಗಳು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷರ ತವರಲ್ಲಿ ಖರ್ಗೆ ಅಳಿಯ ಕಣಕ್ಕೆ
ಎಐಸಿಸಿ ಅಧ್ಯಕ್ಷರ ತವರಾಗಿರುವ ಕಲಬುರಗಿಯಲ್ಲಿ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದೆ. ದಾವಣಗೆರೆಗೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಅವರ ಪತಿ ಎಸ್‌ಎಸ್ ಮಲ್ಲಿಕಾರ್ಜುನ್ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದಾರೆ.
ಸದ್ಯ ಅಂತಿಮಗೊಳಿಸಿರುವ ಪಟ್ಟಿಯೇ ಬಹುತೇಕ ಫೈನಲ್ ಎನ್ನಲಾಗುತ್ತಿದ್ದರೂ ಕೊನೇ ಕ್ಷಣದಲ್ಲಿ ಕೆಲವು ಬದಲಾವಣೆ ಆಗುವ ಸಾಧ್ಯತೆ ಇದೆ. ಯಾಕೆಂದರೆ, ಬಿಜೆಪಿಯಲ್ಲಿ ಅಸಮಾಧಾನಗೊಂಡಿರೋ ಡಿವಿ ಸದಾನಂದ ಗೌಡ, ಮಾಧುಸ್ವಾಮಿಯನ್ನೂ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಹೀಗಾಗಿ, ಇವರು ಬಂದರೆ ಯಾರಿಗೆ ಯಾವ ಕ್ಷೇತ್ರ ಸಿಗಲಿದೆ ಎಂಬುದು ಕೂಡ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಕುಟುಂಬ ರಾಜಕಾರಣದ ಕರಿ ನೆರಳು: ಕಾರ್ಯಕರ್ತರ ಬಿಟ್ಟು ಕುಡಿಗಳಿಗೇ ಆದ್ಯತೆ ನೀಡುತ್ತಿರುವ ನಾಯಕರಿವರು
ಕರ್ನಾಟಕದ ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದೆ. ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್, ತುಮಕೂರಿನಿಂದ ಎಸ್ಪಿ ಮುದ್ದಹನುಮೇಗೌಡ, ಮಂಡ್ಯದಿಂದ ವೆಂಕಟರಾಮೇಗೌಡ (ಸ್ಟಾರ್ ಚಂದ್ರು), ಹಾಸನದಿಂದ ಶ್ರೇಯಸ್ ಪಟೇಲ್, ಬೆಂಗಳೂರು ಗ್ರಾಮಾಂತರದಿಂದ ಡಿಕೆ ಸುರೇಶ್, ವಿಜಯಪುರದಿಂದ ಎಚ್ಆರ್ ಅಲ್ಗೂರ್ ಹಾಗೂ ಹಾವೇರಿಯಿಂದ ಆನಂದ್ ಸ್ವಾಮಿ ಗಡ್ಡ ದೇವರಮಠ ಅವರನ್ನು ಕಣಕ್ಕಿಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 am, Wed, 20 March 24