ಇಡೀ ದೇಶದಾದ್ಯಂತ ಜನವರಿ 22ರಂದು ನಡೆಯುವ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯದ್ದೇ ಸುದ್ದಿ. ಜಿಲ್ಲೆಯ ಗ್ರಾಮ ಗ್ರಾಮಗಳಲ್ಲೂ ಕೂಡ ಶ್ರೀ ರಾಮನ ಮಂತ್ರಾಕ್ಷತೆ ಹಿಡಿದು ಮನೆ ಮನೆಗೆ ತೆರಳುತ್ತಿರುವ ರಾಮಭಕ್ತರು ಎಲ್ಲಿ ನೋಡಿದರೂ ಕಾಣಸಿಗುತ್ತಿದ್ದಾರೆ. ಉಡುಪಿಯ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಒಂದು ಹೆಜ್ಜೆ ಮುಂದೆ ಹೋಗಿ ಶ್ರೀರಾಮನನ್ನ ದಿನವೂ ನೆನಪಿಸುವ ಕಾರ್ಯಕ್ರಮಕ್ಕೆ ಮುಂದಾಗಿದೆ…
ಹೌದು ಇಡೀ ದೇಶವೇ ಜನವರಿ 22ರಂದು ನಡೆಯಲಿರುವ ಶ್ರೀರಾಮ ಜನ್ಮಭೂಮಿಯಲ್ಲಿನ ರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ಎದುರು ನೋಡುತ್ತಿದೆ. ಜಿಲ್ಲೆಯ ಮೂಲೆ ಮೂಲೆಗೂ ಕೂಡ ಒಂದು ಮನೆಯನ್ನು ಬಿಡದಂತೆ ರಾಮಭಕ್ತರು ಶ್ರೀರಾಮ ಮಂದಿರದ ಮಂತ್ರಾಕ್ಷತೆಯನ್ನು ಹಂಚುವ ಕಾರ್ಯದಲ್ಲಿ ತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಉಡುಪಿಯ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಮತ್ತು ಕೊಡವೂರು ಸ್ನೇಹಿತ ಯುವಕ ಸಂಘ ಜಂಟಿಯಾಗಿ ಶ್ರೀರಾಮದೇವರ ಜೀವನ ಚರಿತ್ರೆಯ ವಾಲ್ ಪೇಂಟಿಂಗ್ ಸ್ಪರ್ಧೆಯನ್ನು ಏರ್ಪಡಿಸಿದೆ.
ಉಡುಪಿ ನಗರದ ಕೊಡವೂರು ಪರಿಸರ ಸುಂದರ ಕಾಣುವ ನಿಟ್ಟಿನಲ್ಲಿ ಶ್ರೀರಾಮದೇವರ ಜೀವನ ಚರಿತ್ರೆಯ ವಿಷಯವನ್ನು ವಾಲ್ ಪೇಂಟಿಂಗ್ ಮೂಲಕ ತಿಳಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಒಂದು ಚಿತ್ರ ಬಿಡಿಸಲು 5:00 ಗಂಟೆಗಳ ಅವಕಾಶ ನೀಡಲಾಗಿದ್ದು ತೈಲವರ್ಣ, ಜಲ ವರ್ಣದಲ್ಲಿ ಯಾವುದೇ ಉಪಕರಣ ಬಳಸದೆ ಚಿತ್ರ ರಚಿಸಲು ಅವಕಾಶ ನೀಡಲಾಗಿದೆ.
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಆವರಣದಲ್ಲಿ ಈ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಪ್ರಥಮ ಬಹುಮಾನವಾಗಿ 10,000 ರೂಪಾಯಿ, ದ್ವಿತೀಯ ಬಹುಮಾನವಾಗಿ 5000, ತೃತೀಯ ಬಹುಮಾನವಾಗಿ 3000 ಹಾಗೂ ಐದು ಜನರಿಗೆ ತಲಾ ಒಂದು ಸಾವಿರ ಪ್ರೋತ್ಸಾಹ ಧನ ನೀಡುವುದಾಗಿ ಸ್ಪರ್ಧೆಯ ಆಯೋಜಕರು ತಿಳಿಸಿದ್ದಾರೆ. ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹತ್ತಾರು ಚಿತ್ರ ಕಲಾವಿದರು ಬಂದು ಶ್ರೀರಾಮನ ಚರಿತ್ರೆಯ ಚಿತ್ರಣವನ್ನು ತಮ್ಮ ಕುಂಚದಲ್ಲಿ ಮೂಡಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ – ರಾಮಮಂದಿರ ನಿರ್ಮಾಣದ ಸಂಕಲ್ಪದೊಂದಿಗೆ 16 ಲಕ್ಷಕ್ಕೂ ಹೆಚ್ಚು ಬಾರಿ ರಾಮನಾಮ ಬರೆದ ವೃದ್ಧೆ
ಒಟ್ಟಾರೆಯಾಗಿ ದೇಶದಲ್ಲಿ ಸುದ್ದಿಯಲ್ಲಿರುವ ಶ್ರೀ ರಾಮನ ಜೀವನ ಚರಿತ್ರೆಯ ಕುರಿತು ದೇವಳಕ್ಕೆ ಬರುವ ಭಕ್ತರಿಗೆ ಅರಿವು ಮೂಡಿಸುವಲ್ಲಿ ಈ ಚಿತ್ರಗಳು ಸಹಕಾರಿಯಾಗಲಿದೆ ಎಂದರೆ ತಪ್ಪಾಗಲಾರದು. ಇನ್ನು ದೇವರ ಚಿತ್ರದ ಜೊತೆಗೆ ದೇವಳದ ಪರಿಸರವೂ ಕೂಡ ಸ್ವಚ್ಛ ಸುಂದರವಾಗಿಡುವುದಕ್ಕೂ ಈ ಸ್ಫರ್ಧೆ ದಾರಿ ಮಾಡಿಕೊಟ್ಟಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ