ಉಡುಪಿ: ಜಿಲ್ಲೆಯ ಶಿರ್ವ ಸಮೀಪದ ಕಲ್ಲೊಟ್ಟಿ ಗ್ರಾಮದ ನಾಗಬನವೊಂದರಲ್ಲಿ ಒಂದು ವಿಭಿನ್ನ ಪತಂಗ ಪತ್ತೆಯಾಗಿದೆ. ಹಾವಿನ ತಲೆಯಂತೆ ಹೋಲುವ ಮತ್ತು ಪ್ರಪಂಚದಲ್ಲಿ ಅತ್ಯಂತ ಬೃಹತ್ ಗಾತ್ರದ ಪತಂಗಗಳಲ್ಲಿ ಒಂದಾದ ಇದರ ಹೆಸರು ಅಟ್ಲಾಸ್ ಮಾತ್.
ಕರಾವಳಿ ಜಿಲ್ಲೆಯಲ್ಲಿ ಅಪರೂಪವಾಗಿ ಕಾಣಸಿಗುವ ಈ ಪತಂಗದ ವೈಜ್ಞಾನಿಕ ಹೆಸರು ಌಟಕಸ್ ಅಟ್ಲಾಸ್. ಸುಮಾರು 24 ಸೆಂಟಿಮೀಟರ್ ವಿಸ್ತೀರ್ಣ ಹೊಂದಿರುವ ಈ ಅಟ್ಲಾಸ್ ಮಾತ್ನ ತುಸು ದೂರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಥೇಟ್ ಹಾವಿನ ತೆಲೆಯಂತೆ ಹೋಲುತ್ತದೆ.
ಅಪರೂಪದ ಅಲ್ಪಾಯುಷಿ ಪತಂಗ ಕ್ಯಾಮರಾದಲ್ಲಿ ಸೆರೆ
ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ!
ಇದರ ಜೊತೆಗೆ ವಿಶೇಷವೆಂದರೆ ಈ ಪತಂಗಕ್ಕೆ ಬಾಯಿ ಹಾಗೂ ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ. ಹಾಗಾಗಿ ಕೋಶದಿಂದ ಹೊರಬಂದ ಪತಂಗ ಏನ್ನನೂ ತಿನ್ನುವುದಿಲ್ಲ. ಇದಕ್ಕೆ ಬೇಕಾದ ಎಲ್ಲಾ ಪೌಷ್ಟಿಕಾಂಶವನ್ನು ಹುಳು ಆಗಿರುವಾಗಲೇ ಎಲೆಗಳನ್ನು ತಿಂದು ಸಂಪಾದಿಸಿಕೊಳ್ಳುತ್ತದೆ. ಹೀಗಾಗಿ ಅಟ್ಲಾಸ್ ಮಾತ್ ತನ್ನ ಶಕ್ತಿಯನ್ನು ಸಂರಕ್ಷಿಸಲು ಅತ್ಯಂತ ಕಡಿಮೆ ಹಾರಾಟ ಮಾಡಿ ಹೆಚ್ಚಾಗಿ ಎಲೆಯ ಮೇಲೇ ವಿಶ್ರಾಂತಿ ಮಾಡುತ್ತಾ ಕಂಡುಬರುತ್ತೆ. ದಿನ ಕಳೆದಂತೆ ತುಂಬಾ ಬಲಹೀನವಾಗುವ ಈ ಪತಂಗ ಅಂತಿಮವಾಗಿ ಹಕ್ಕಿ, ಓತಿ ಮತ್ತು ಇರುವೆಗಳ ಕೈಯಲ್ಲಿ ಸಿಲುಕಿ ಆಹಾರವಾಗಿ ಬಿಡುತ್ತೆ ಎಂದು ತಜ್ಞರು ತಿಳಿಸಿದ್ದಾರೆ. -ಹರೀಶ್ ಪಾಲೆಚ್ಚಾರ್
Published On - 7:13 pm, Tue, 16 June 20