ಉಡುಪಿ, ಜುಲೈ 27: ಉಡುಪಿಯ ನೇತ್ರ ಕಾಲೇಜು ಶೌಚಾಲಯದಲ್ಲಿ(Udupi College) ವಿಡಿಯೋ ಚಿತ್ರೀಕರಣ ವಿವಾದ ಸದ್ಯ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಷ್ಟ್ರೀಯ ಮಹಿಳಾ ಆಯೋಗದ ತಂಡ ಉಡುಪಿಗೆ ಭೇಟಿ ನೀಡಲಿದೆ. ಇನ್ನು ಮತ್ತೊಂದೆಡೆ ಬೆಂಗಳೂರು, ಉಡುಪಿಯಲ್ಲಿ ಈ ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನೆಗೆ(Protest) ನಡೆಸುತ್ತಿದೆ. ಬೆಂಗಳೂರಿನಲ್ಲಿ ಪ್ರತಿಭಟನಾನಿರತ ಕಾರ್ಯಕರ್ತರನ್ನು ವಶಕ್ಕೆ ಪಡೆದು ಸದಾಶಿವನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.
ಉಡುಪಿಯಲ್ಲಿ ಮಳೆಯ ನಡುವೆಯೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆ ನಡೆಸುತ್ತಿದ್ದು ಪ್ರಕರಣದ ವಿಚಾರವಾಗಿ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಸಂತ್ರಸ್ತೆ ವಿಧ್ಯಾರ್ಥಿನಿಗೆ ನ್ಯಾಯ ಒದಗಿಸಿ ಕೊಡಬೇಕು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರುವಂತೆ ಪಟ್ಟು ಹಿಡಿದಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ಸದಾಶಿವನಗರದಲ್ಲಿರುವ ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿಭಟನಾನಿರತ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಸದಾಶಿವನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಮತ್ತೊಂದೆಡೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಸೇರಿದಂತೆ ಮಹಿಳಾ ಬಿಜೆಪಿ ಕಾರ್ಯಕರ್ತರು, ಶಾಸಕ ಡಾ. ಅಶ್ವಥ್ ನಾರಾಯಣ, ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಸಚಿವ ಡಾ.ಜಿ.ಪರಮೇಶ್ವರ್ ಮನೆ ಸುತ್ತಮುತ್ತ ಪೊಲೀಸ್ ಭದ್ರತೆ
ಬೆಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸುತ್ತಿದ್ದು ಗೃಹ ಸಚಿವ ಪರಮೇಶ್ವರ್ ಮನೆಗೆ ಮುತ್ತಿಗೆ ಹಾಕುತ್ತಿರುವ ಹಿನ್ನೆಲೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನೆ ಸುತ್ತಮುತ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಸದಾಶಿವನಗರದ ನಿವಾಸದ ರಸ್ತೆಗೆ ಬ್ಯಾರಿಕೇಟ್ ಹಾಕಿದ್ದು ನಿವಾಸಕ್ಕೆ ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಕೇಸ್: ಪೊಲೀಸರು ಕಾನೂನಿನಂತೆ ನಡೆದುಕೊಂಡಿದ್ದಾರೆ ಎಂದ ಖುಷ್ಬೂ ಸುಂದರ್
ಇನ್ನು ಉಡುಪಿಯಲ್ಲಿ ವಿಡಿಯೋ ಚಿತ್ರೀಕರಣ ಮಕ್ಕಳ ಆಟ ಅಂತಾ ಹೇಳಿಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಸ್ನೇಹಿತರ ಮಧ್ಯೆ ಘಟನೆಗಳು ನಡೆಯುತ್ತೆ, ಅದು ಅಲ್ಲಿಗೆ ಮುಗಿಯುತ್ತೆ ಎಂದು ಹೇಳಿದ್ದು ಎಂದಿದ್ದಾರೆ. ಪ್ರಕರಣದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಹೆಚ್ಚಿನ ಕ್ರಮ ತೆಗೆದುಕೊಳ್ಳುತ್ತಾರೆ. ನಾವು ಇದಕ್ಕೆ ಮಧ್ಯಪ್ರವೇಶಿಸಲ್ಲ, ಅವರೇ ದೂರು ದಾಖಲಿಸುತ್ತಾರೆ. ಇದನ್ನ ಹೆಚ್ಚಿನ ರೀತಿಲಿ ಬಿಂಬಿಸುವುದು, ಪೊಲೀಸರ ಮೇಲೆ ಬೊಟ್ಟು ತೋರಿಸುವುದು ಮಾಡಬಾರದು. ಈಗಾಗಲೇ ಸಸ್ಪೆಂಡ್ ಮಾಡಿದ್ದಾರೆ, ಹೆಚ್ಚಿನ ಕ್ರಮ ಅವರಿಗೆ ಬಿಟ್ಟಿದ್ದು. ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಎಲ್ಲವೂ ಹೊರಬರಲಿದೆ ಎಂದರು.
ಉಡುಪಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:07 pm, Thu, 27 July 23