ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಕೇಸ್: ಪೊಲೀಸರು ಕಾನೂನಿನಂತೆ ನಡೆದುಕೊಂಡಿದ್ದಾರೆ ಎಂದ ಖುಷ್ಬೂ ಸುಂದರ್
ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಪೊಲೀಸರ ಬಳಿ ಮಾಹಿತಿ ಪಡೆದುಕೊಂಡಿದ್ದು, ಪ್ರಕರಣದ ಬಗ್ಗೆ ಹೇಳಿದ್ದಿಷ್ಟು
ಉಡುಪಿ, (ಜುಲೈ 27): ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ (National Commission for Women) ಸದಸ್ಯೆ ಖುಷ್ಬೂ ಸುಂದರ್(Khushbu Sundar) ಉಡುಪಿಗೆ(Udupi) ಆಗಮಿಸಿದ್ದು ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಅವರ ಜೊತೆ ಸಭೆ ಮಾಡಿ ಮಾಹಿತಿ ಪಡೆದುಕೊಂಡರು. ಇನ್ನು ಈ ಬಗ್ಗೆ ಇಂದು(ಜುಲೈ 27) ಸುದ್ದಿಗಾರರೊಂದಿಗೆ ಮಾತನಾಡಿದ ಖುಷ್ಬೂ ಸುಂದರ್, ಇದು ಒಂದು ಸೂಕ್ಷ್ಮ ವಿಚಾರವಾಗಿದ್ದು, ಇದನ್ನು ಯಾರು ರಾಜಕೀಕರಣಗೊಳಿಸಬಾರದು. ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ತನಿಖೆ ಇನ್ನು ಮುಗಿದಿಲ್ಲ. ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಒಂದು ದಿನದಲ್ಲಿ ನಿರ್ಧಾರ ಮಾಡಲು ಆಗಲ್ಲ. ಪೊಲೀಸರು ಕಾನೂನಿನಂತೆ ನಡೆದುಕೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಉಡುಪಿಯ ಖಾಸಗಿ ಕಾಲೇಜಿನ ಟಾಯ್ಲೆಟ್‌ನಲ್ಲಿ ವಿಡಿಯೋ ಪ್ರಕರಣ: ಚುರುಕುಗೊಂಡ ತನಿಖೆ
ಕಾಲೇಜಿನವರು ಪತ್ರಿಕಾಗೋಷ್ಠಿ ಮಾಡಿ ವಿಡಿಯೋ ಡಿಲೀಟ್ ಬಗ್ಗೆ ಹೇಳಿದ್ದಾರೆ. ಆಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವವರು ಕಾನೂನು ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಯಾರು ವದಂತಿಗಳನ್ನು ಹರಡಬಾರದು. ಯುವತಿಯರ ರಕ್ಷಣೆ ನಮಗೆ ಮುಖ್ಯ. ಯುವತಿಯರು ನಮ್ಮ ಕುಟುಂಬದವರು. ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿರುವುದು ಮುಖ್ಯ. ನಾನು ಧಾರ್ಮಿಕ ಅಥವಾ ರಾಜಕೀಯ ಮಾಡಲು ಇಲ್ಲಿ ಬಂದಿಲ್ಲ, ಒಬ್ಬ ಪೋಷಕರಾಗಿ ಇದನ್ನು ಬಗೆಹರಿಸಬೇಕು. ರಾಜಕಾರಣಿಗಳು ರಾಜಕೀಯ ಪಕ್ಷಗಳು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದರು.
ವಿದ್ಯಾರ್ಥಿಗಳು ನಮ್ಮ ದೇಶದ ಭವಿಷ್ಯ ಅವರನ್ನು ರಕ್ಷಣೆ ಮಾಡಬೇಕು. ನಾವು ಎಲ್ಲರೂ ಜವಾಬ್ದಾರಿಯಾಗಿ ವರ್ತಿಸಬೇಕು. ನಾನು ಯಾರನ್ನು ದೂಷಿಷಲು ಇಲ್ಲಿಗೆ ಬಂದಿಲ್ಲ. ನಾನು ಇಲ್ಲಿ ರಾಜಕಾರಣಿಯಾಗಿ ಬಂದಿಲ್ಲ. ಒಬ್ಬ ಮಹಿಳಾ ಆಯೋಗದ ಸದಸ್ಯೆಯಾಗಿ ಬಂದಿದ್ದೇನೆ. ಸಂತ್ರಸ್ತೆ ಹಾಗೂ ಆರೋಪಿಗಳನ್ನು ಭೇಟಿ ಮಾಡುತ್ತೇನೆ. ಅವರು ಯಾವ ಕಾರಣಕ್ಕೆ ವಿಡಿಯೋ ಮಾಡಿದರ ? ಯಾರಾದರೂ ಹೇಳಿದಕ್ಕೆ ವಿಡಿಯೋ ಮಾಡಿದ್ದಾರಾ? ವಿಡಿಯೋ ತಮಾಷೆಗೆ ಮಾಡಿದ್ದ? ಈ ಬಗ್ಗೆ ಅವರಿಂದ ಮಾಹಿತಿ ಪಡೆಯುತ್ತೇನೆ. ಸದ್ಯ ಸಾಮಾಜಿಕ ಜಾಲತಾಣ ತಾಂತ್ರಿಕತೆಯಿಂದ ಪ್ರತಿಯೊಬ್ಬರು ತನಿಖಾಧಿಕಾರಿ ನ್ಯಾಯಾಧೀಶರಾಗಲು ಮುಂದಾಗಿದ್ದಾರೆ. ಇದನ್ನು ಯಾರು ಮಾಡಬೇಡಿ . ವದಂತಿಗಳನ್ನು ಯಾರು ಹರಡಬೇಡಿ. ಕಾನೂನಿಗೆ ಅದರ ಕೆಲಸ ಮಾಡಲು ಬಿಡಿ ಎಂದು ತಿಳಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:08 am, Thu, 27 July 23