ಉಡುಪಿ: ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ 16 ಸಿಬ್ಬಂದಿಯನ್ನು ಕೆಲಸದಿಂದಲೇ ತೆಗೆದು ಹಾಕಲಾಗಿದೆ. ಉಡುಪಿಯ ಬಿ.ಆರ್.ಶೆಟ್ಟಿ ಆಸ್ಪತ್ರೆ ಸಿಬ್ಬಂದಿ ಈಗ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ.
ಕೆಲ ದಿನಗಳ ಹಿಂದೆ ಬಿ.ಆರ್.ಶೆಟ್ಟಿ ಆಸ್ಪತ್ರೆ ಸಿಬ್ಬಂದಿ ತಮಗೆ ಸರಕಾರದಿಂದ ಬರುತ್ತಿರುವ ಸಂಬಳವನ್ನಾದರೂ ಸರಿಯಾಗಿ ನೀಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಪ್ರಮುಖ 16 ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿದ್ದಾರೆ. 16 ಸಿಬ್ಬಂದಿಗೆ ನೋಟೀಸ್ ನೀಡದೆ ಕೆಲಸದಿಂದ ವಜಾ ಮಾಡಿದ್ದಾರೆ. ಹೀಗಾಗಿ ಕೆಲಸದಿಂದ ತೆಗೆದುಹಾಕಲು ಕಾರಣ ತಿಳಿಸಲು ಪಟ್ಟು ಹಿಡಿದು ಬಿ.ಆರ್.ಶೆಟ್ಟಿ ಆಸ್ಪತ್ರೆಯ ಮುಂದೆ ಸಿಬ್ಬಂದಿ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಲಸ ಕಳೆದುಕೊಂಡವರ ಬೆಂಬಲಕ್ಕೆ ಇತರ ಸಿಬ್ಬಂದಿ ಸಾಥ್ ನೀಡಿದ್ದು ಆಸ್ಪತ್ರೆಯ ಮೇಲಧಿಕಾರಿಗಳಿಗೆ ಮುತ್ತಿಗೆ ಹಾಕಿ ಉತ್ತರ ನೀಡಿ ಎಂದು ಆಗ್ರಹಿಸಿದ್ದಾರೆ. ಉಡುಪಿ ನಗರ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಶಾಸಕ ರಘುಪತಿ ಭಟ್ ಆಸ್ಪತ್ರೆ ಸಿಬ್ಬಂದಿಯನ್ನು ಮಾತುಕತೆಗೆ ಕರೆದಿದ್ದಾರೆ. ಆದ್ರೆ ಪಟ್ಟು ಬಿಡದೆ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಸಂಬಳಕ್ಕೆ ಸಂಕಷ್ಟ
ಸರ್ಕಾರದ ಹೆರಿಗೆ ಆಸ್ಪತ್ರೆಯನ್ನು ತಾನು ನಡೆಸುತ್ತೇನೆ ಎಂದು ಅಬುದಾಬಿಯ ಉದ್ಯಮಿ ಬಿ.ಆರ್. ಶೆಟ್ಟಿ ತಾನೇ ಮುಂದೆ ಬಂದಿದ್ದರು. ಹೀಗಾಗಿ 200 ಬೆಡ್ನ ಉಚಿತ ಹೆರಿಗೆಯ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ನಿರ್ವಹಣೆ ಮಾಡುವುದು ಮತ್ತು ಇದಕ್ಕೆ ಬದಲಾಗಿ 400 ಬೆಡ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ನೂರಾರು ಕೋಟಿ ಮೌಲ್ಯದ ಸರ್ಕಾರದ 4.7 ಎಕರೆ ಭೂಮಿಯನ್ನು ಬಿ.ಆರ್. ಶೆಟ್ಟಿ ಅವರಿಗೆ ಕೊಡುವುದು ಎಂದು ಎಂಓಯು ಆಗಿತ್ತು. ಆದರೆ ಶೆಟ್ಟರ ಸಾಮ್ರಾಜ್ಯ ಮುಳುಗಿದೆ. ಆಸ್ಪತ್ರೆ ನಡೆಸಲು ಸಾಧ್ಯವಿಲ್ಲ ಎಂದು ಅವರು ಈಗ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸೆಂಟ್ರಲ್ ಎಸಿ ಅಳವಡಿಸಿರುವ ಈ ಬಹುಮಹಡಿ ಕಟ್ಟಡವನ್ನು ಆರೋಗ್ಯ ಇಲಾಖೆಯಿಂದ ನಿರ್ವಹಿಸುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಈ ಆಸ್ಪತ್ರೆಯ 250 ಸಿಬ್ಬಂದಿಗಳಿಗೆ ಈ ಸಂಬಳ ಕೊಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಸರ್ಕಾರದ ನಿರ್ವಹಣೆಯಲ್ಲಿ 70 ಬೆಡ್ನ ಹೆರಿಗೆ ಆಸ್ಪತ್ರೆ ಸುಸಜ್ಜಿತವಾಗಿಯೇ ನಡೆಯುತ್ತಿತ್ತು. ಆದರೆ ತನ್ನ ತಂದೆ-ತಾಯಿಯ ಹೆಸರಲ್ಲಿ ತವರು ಜಿಲ್ಲೆಯಲ್ಲಿ ಆಸ್ಪತ್ರೆ ಮಾಡುವ ಶೆಟ್ಟರ ಕನಸಿಗೆ ಸರ್ಕಾರ ತನ್ನ ಆಸ್ತಿಯನ್ನೇ ಮಾರಿಕೊಂಡಿತ್ತು. ಕೂಸಮ್ಮ ಶಂಭು ಶೆಟ್ಟರ ಹೆಸರಲ್ಲಿ 200 ಬೆಡ್ನ ಆಸ್ಪತ್ರೆಯೂ ನಿರ್ಮಾಣ ಆಗಿತ್ತು ಮತ್ತು ಕೇವಲ ಎರಡುವರೆ ವರ್ಷದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವಾತಾವರಣದಲ್ಲಿ 10 ಸಾವಿರ ಬಡ ಮಹಿಳೆಯರ ಹೆರಿಗೆ ನಡೆಯಿತು. ಆದರೆ ಈಗ ಬಿ.ಆರ್. ಎಸ್ ಗ್ರೂಪ್ ಹಿಂದಕ್ಕೆ ಸರಿದಿದೆ. ತಿಂಗಳಿಗೆ 15 ಲಕ್ಷ ಕರೆಂಟ್ ಬಿಲ್ ಸೇರಿದಂತೆ 25 ಲಕ್ಷ ನಿರ್ವಹಣಾ ವೆಚ್ಚ ಬರುವ ಆಸ್ಪತ್ರೆಯನ್ನು ಸರ್ಕಾರದಿಂದಲೂ ನಿರ್ವಹಿಸಲು ಸಾಧ್ಯವಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಇದನ್ನೂ ಓದಿ: ಮುಚ್ಚುವ ಹಂತಕ್ಕೆ ತಲುಪಿದೆ ಉತ್ತರ ಕನ್ನಡದ ಡಯಾಲಿಸೀಸ್ ಕೇಂದ್ರ; ಕಿಡ್ನಿ ವೈಫಲ್ಯವಾದವರ ನೆರವಿಗೆ ನಿಲ್ಲುವಂತೆ ಜನರ ಮನವಿ