ಕೋರ್ಟ್​​ಗೆ ಬಿ ರಿಪೋರ್ಟ್‌ ಸಲ್ಲಿಕೆ: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಕ್ಲೀನ್ ಚಿಟ್

| Updated By: ಸಾಧು ಶ್ರೀನಾಥ್​

Updated on: Jul 20, 2022 | 5:57 PM

ks eshwarappa: ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಕ್ಕೆ ಸಾಕ್ಷ್ಯಗಳೇ ಇಲ್ಲ ಎಂದು ಅಂತಿಮ ವರದಿಯಲ್ಲಿ ಉಡುಪಿ ಪೊಲೀಸರು ಉಲ್ಲೇಖಿಸಿದ್ದಾರೆ. ಗಮನಾರ್ಹವೆಂದರೆ ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಕರೆದು ವಿಚಾರಣೆಯನ್ನೂ ನಡೆಸಿಲ್ಲ.

ಕೋರ್ಟ್​​ಗೆ ಬಿ ರಿಪೋರ್ಟ್‌ ಸಲ್ಲಿಕೆ: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಕ್ಲೀನ್ ಚಿಟ್
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
Follow us on

ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಅಂತಿಮ ವರದಿಯನ್ನು ಉಡುಪಿ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ (people’s representative court in bangalore) ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ (ks eshwarappa) ಕ್ಲೀನ್ ಚಿಟ್ (clean chit) ನೀಡಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಕ್ಕೆ ಸಾಕ್ಷ್ಯಗಳೇ ಇಲ್ಲ ಎಂದು ಅಂತಿಮ ವರದಿಯಲ್ಲಿ ಉಡುಪಿ ಪೊಲೀಸರು ಉಲ್ಲೇಖಿಸಿದ್ದಾರೆ. ಗಮನಾರ್ಹವೆಂದರೆ ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಕರೆದು ವಿಚಾರಣೆಯನ್ನೂ ನಡೆಸಿಲ್ಲ. ಆತ್ಮಹತ್ಯೆಗೆ ಕುಮ್ಮಕ್ಕು ಎಂಬುದಕ್ಕೆ ಸಾಕ್ಷ್ಯಾಧಾರಗಳೇ ಇಲ್ಲ ಎಂದು ತನಿಖೆ ನಡೆಸಿರುವ ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ.

ಏಪ್ರಿಲ್ 11ರಂದು ಉಡುಪಿಯ ಲಾಡ್ಜ್​ನಲ್ಲಿ ಸಂತೋಷ್​ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದರು. ಗುತ್ತಿಗೆದಾರ ಸಂತೋಷ್​ ಪಾಟೀಲ್ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ 40 ಪರ್ಸೆಂಟ್​ ಕಮಿಷನ್​ ಆರೋಪ ಮಾಡಿದ್ದರು. ಸಿಸಿಕ್ಯಾಮರಾ ವಿಡಿಯೋ, ಆಡಿಯೋ, ಮೊಬೈಲ್ ಸಂದೇಶ ಪರಿಗಣಿಸಲಾಗಿದೆ. ಬ್ಯಾಂಕ್​ ದಾಖಲೆ, ಗುತ್ತಿಗೆಯ ವಿವರ, ಕುಟುಂಬಸ್ಥರು, ಸ್ನೇಹಿತರ ಹೇಳಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲಾ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಿ ಕೊಲೆ ಅಥವಾ ಕೊಲೆ ಪ್ರಚೋದನೆ ಎಂಬುದಕ್ಕೆ ಸಾಕ್ಷ್ಯವಿಲ್ಲ ಎಂಬುದಾಗಿ ತಿಳಿದುಬಂದಿದೆ ಎಂದು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಪ್ರಕರಣದ ತನಿಖಾಧಿಕಾರಿ ಅಂತಿಮ ವರದಿ ಸಲ್ಲಿಸಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರಿಂದಾಗಲಿ ಅಥವಾ ಈಶ್ವರಪ್ಪ ಕಡೆಯವರಿಂದ ಬೆದರಿಕೆ ಬಂದಿದ್ದಕ್ಕೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲವೆಂದು ಅಂತಿಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಿ ರಿಪೋರ್ಟ್‌ ಸುದ್ದಿ ಕೇಳಿ ಸಂತಸವಾಗಿದೆ -ಕೆ.ಎಸ್.ಈಶ್ವರಪ್ಪ

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್‌ ಹಾಕಿರುವ ಸುದ್ದಿ ಕೇಳಿ ಸಂತಸವಾಗಿದೆ ಎಂದು ಶಿವಮೊಗ್ಗದಲ್ಲಿ ಟಿವಿ9ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ತಪ್ಪು ಮಾಡಿಲ್ಲವೆಂದು ಮನೆದೇವ್ರು ಚೌಡೇಶ್ವರಿ ಮೇಲೆ ಆಣೆ ಮಾಡಿದ್ದೆ. ಚೌಡೇಶ್ವರಿ ದೇವಿಯ ಆಶೀರ್ವಾದದಿಂದ ಕೇಸ್‌ನಲ್ಲಿ ಖುಲಾಸೆ ಆಗಿರುವೆ. ಆರೋಪದಿಂದ ಮುಕ್ತನಾಗುವ ವಿಶ್ವಾಸ ನನಗೆ ಇತ್ತು ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಮತ್ತೆ ಮಿನಿಸ್ಟರ್​ ಆಗ್ತಾರಾ?
ನನ್ನ ವಿರುದ್ಧ ಆರೋಪಿಸಿದ್ದ ವಿಪಕ್ಷಗಳಿಗೆ ಬಿ ರಿಪೋರ್ಟ್‌ ಬಂದಿದ್ದೇ ಉತ್ತರ. ಆರೋಪ ಹಿನ್ನೆಲೆಯಲ್ಲಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಪಕ್ಷದ ವರಿಷ್ಠರು ಯಾವುದೇ ಜವಾಬ್ದಾರಿ ನೀಡಿದ್ರೂ ನಿಭಾಯಿಸುವೆ. ಮುಂದಿನ ನಿರ್ಧಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಕೆ.ಎಸ್.ಈಶ್ವರಪ್ಪ ಸೂಚ್ಯವಾಗಿ ಹೇಳಿದ್ದಾರೆ.

Published On - 5:41 pm, Wed, 20 July 22