ಇಂದು ಶ್ರೀಕೃಷ್ಣನೂರಿಗೆ ಸಿದ್ದರಾಮಯ್ಯ ಭೇಟಿ, ಕಪ್ಪುಪಟ್ಟಿ ಪ್ರದರ್ಶಿಸಲು ಬಿಜೆಪಿ, ಹಿಂದೂಪರ ಸಂಘಟನೆಗಳು ಪ್ಲ್ಯಾನ್
ಖಾಸಗಿ ಕಾಲೇಜಿನ ಟಾಯ್ಲೆಟ್ನಲ್ಲಿ ವಿಡಿಯೋ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಇಂದು ಉಡುಪಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ. ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಭೇಟಿಯಾಗಿದ್ದು, ಸಿದ್ದರಾಮಯ್ಯಗೆ ಪ್ರತಿಭಟನೆಯ ಬಿಸಿ ತಟ್ಟುವ ಎಲ್ಲಾ ಲಕ್ಷಣಗಳು ಗೋಚರಿಸಿದೆ.
ಉಡುಪಿ, (ಆಗಸ್ಟ್ 01): ಕಳೆದ 1 ವಾರದಿಂದ ಉಡುಪಿ (Udupi)ವಿವಾದದ ಕೇಂದ್ರ ಬಿಂದುವಾಗಿದೆ. ಖಾಸಗಿ ಕಾಲೇಜಿನ ಟಾಯ್ಲೆಟ್ನಲ್ಲಿ ವಿಡಿಯೋ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಇಂದು ಉಡುಪಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿ ನೀಡುತ್ತಿದ್ದಾರೆ. ಸರ್ಕಾರ ರಚನೆಯಾದ ಬಳಿಕವೂ ಇದೇ ಮೊದಲ ಭೇಟಿಯಾಗಿದ್ದು, ಸಿದ್ದರಾಮಯ್ಯಗೆ ಪ್ರತಿಭಟನೆಯ ಬಿಸಿ ತಟ್ಟುವ ಎಲ್ಲಾ ಲಕ್ಷಣಗಳು ಗೋಚರಿಸಿದೆ. ಹೌದು.. ಉಡುಪಿಯ ಖಾಸಗಿ ಕಾಲೇಜಿನ ಟಾಯ್ಲೆಟ್ನಲ್ಲಿ ಹಿಂದೂ ಯುವತಿಯ ವಿಡಿಯೋ ಚಿತ್ರೀಕರಣ ವಿವಾದ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇದೇ ವಿಚಾರ ಧಗಧಗಿಸುತ್ತಿದೆ. ಇದೇ ಹೊತ್ತಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಉಡುಪಿಗೆ ಭೇಟಿ ನೀಡುತ್ತಿದ್ದಾರೆ. ಸಿಎಂ ಭೇಟಿ ವೇಳೆಯೇ ಕಪ್ಪು ಪಟ್ಟಿ ಪ್ರದರ್ಶಿಸಿ, ಪ್ರತಿಭಟನೆ ನಡೆಸಲು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಪ್ಲ್ಯಾನ್ ಮಾಡಿವೆ.
ಇಂದು ಬೆಳಗ್ಗೆ 11.30ಕ್ಕೆ ಪಡುಬಿದ್ರೆಗೆ ಭೇಟಿ ನೀಡಲಿರುವ ಸಿಎಂ ಸಿದ್ದರಾಮಯ್ಯ, ಕಡಲ ಕೊರೆತದಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಜಿಲ್ಲಾ ಪಂಚಾಯತ್ನಲ್ಲಿ ಕೆಡಿಪಿ ಸಭೆ ನಡೆಸಲಿದ್ದಾರೆ. ಈ ವೇಳೆ ಪ್ರತಿಭಟನೆ ನಡೆಸಿ, ಸಿಎಂಗೆ ಕಪ್ಪುಪಟ್ಟಿ ಪ್ರದರ್ಶನ ಮಾಡಬೇಕು ಎನ್ನುವುದು ಬಿಜೆಪಿಯ ಪ್ಲ್ಯಾನ್ ಆಗಿದೆ.
ಇನ್ನು ವಿಡಿಯೋ ವಿವಾದಕ್ಕೆ ಕಾಲೇಜಿನ ಆಡಳಿತ ಮಂಡಳಿಯೇ ನೇರ ಹೊಣೆ, ಮತ್ತು ಆಡಳಿತಾಧಿಕಾರಿಯ ಬೇಜವಾಬ್ದಾರಿಯೂ ಪ್ರಕರಣ ಇಷ್ಟು ದೊಡ್ಡದಾಗಲು ಕಾರಣ ಎನ್ನುವ ರೀತಿಯಲ್ಲಿ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಳು. ಈ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಬೆದರಿಕೆ ಕರೆಗಳು ಬರುತ್ತಿವೆಯಂತೆ ಜಿಗರ್ ಕೋಬ್ರಾ ಎನ್ನುವ ಪ್ರೊಫೈಲ್ ಮೂಲಕ ಸಾಕಷ್ಟು ಬೆದರಿಕೆ, ಅಶ್ಲೀಲ ಕಾಮೆಂಟ್ಗಳು ಬರ್ತಿವೆ ಅಂತ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆರೋಪಿಸಿದ್ದಾರೆ.
ಸಿಎಂ ಉಡುಪಿ ಜಿಲ್ಲಾ ಪ್ರವಾಸದ ವೇಳಾಪಟ್ಟಿ
ಇಂದು (ಆಗಸ್ಟ್ -1) ಬೆಳಗ್ಗೆ 9.55 ಕ್ಕೆ ಬೆಂಗಳೂರು ಏರ್ಪೋರ್ಟ್ನಿಂದ ಹೊರಟು ಮಂಗಳೂರು ವಿಮಾನ ನಿಲ್ದಾಣಕ್ಕೆ 11 ಗಂಟೆಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ 12.30ಕ್ಕೆ ಉಡುಪಿ ತಲುಪಲಿದ್ದಾರೆ. 12.30 ರಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಉಡುಪಿಯಿಂದ ಹೊರಟು ಸಂಜೆ 4.15ಕ್ಕೆ ಮಂಗಳೂರಿಗೆ ತೆರಳಲಿದ್ದಾರೆ. 4.15ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ. ಬಳಿಕ 9.50 ಕ್ಕೆ ಮಂಗಳೂರು ಏರ್ಪೋರ್ಟ್ ನಿಂದ ಹೊರಟು 10.45 ಕ್ಕೆ ಬೆಂಗಳೂರು ಏರ್ಪೋರ್ಟ್ ವಾಪಸ್ ಆಗಲಿದ್ದಾರೆ.
ಸದ್ಯ ಉಡುಪಿ ಜಿಲ್ಲೆಯಲ್ಲಿ ಖಾಸಗಿ ಕಾಲೇಜಿನ ವಿವಾದ ದಿನೇ ದಿನೇ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಿಎಂ ಉಡುಪಿಗೆ ಭೇಟಿ ನೀಡುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಇನ್ನಷ್ಟು ಉಡುಪಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ