ಬೆಂಗಳೂರು: ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಕಾಲೇಜು ನಿರ್ಮಾಣ ಮಾಡಲು ವಕ್ಫ್ ಮಂಡಳಿ ಮುಂದಾಗಿದೆ. ಹೀಗೆ ನಿರ್ಮಿಸುವ ಪ್ರತಿ ಕಾಲೇಜಿಗೆ ₹ 2.50 ಕೋಟಿ ಅನುದಾನ ಮತ್ತು ಅಗತ್ಯ ಪ್ರಮಾಣದ ಭೂಮಿಯನ್ನು ವಕ್ಫ್ ಮಂಡಳಿಯೇ ಒದಗಿಸಲಿದೆ. ಮುಂದಿನ ತಿಂಗಳು ಮುಸ್ಲಿಂ ವಿದ್ಯಾರ್ಥಿನಿಯರ ಕಾಲೇಜು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದು, ಉದ್ಘಾಟನಾ ಸಮಾರಂಭದ ಆಹ್ವಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ನೀಡಲಾಗಿದೆ. ‘ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ಕಣ್ಣೂರಿನಲ್ಲಿ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕರ್ನಾಟಕ ಸೇರಿದಂತೆ ರಾಜ್ಯದ ಹತ್ತು ಕಡೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಸ್ಥಾಪಿಸಲಾಗುವುದು’ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಅದಿ ಹೇಳಿದರು.
‘ಬಾಲಕಿಯರ ಶಿಕ್ಷಣಕ್ಕಾಗಿ ಕ್ರಮ ತೆಗೆದುಕೊಳ್ಳಬೇಕೆಂದು ನಾವು ಈ ಮೊದಲೇ ಚಿಂತನೆ ನಡೆಸಿದ್ದೆವು. ಹಿಜಾಬ್ ವಿವಾದಕ್ಕೂ ನಮ್ಮ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ. ರಾಜ್ಯದ ಬೇರೆಲ್ಲಾ ಶಾಲಾ-ಕಾಲೇಜುಗಳ ರೀತಿಯಲ್ಲಿಯೂ ಈ ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸುತ್ತವೆ. ರಾಜ್ಯದ ಹಲವು ಜಿಲ್ಲೆಗಳಿಂದ ಈ ಸಂಬಂಧ ಬೇಡಿಕೆ ಬಂದಿದೆ. ಎಲ್ಲವನ್ನೂ ಪರಿಶೀಲಿಸುತ್ತೇವೆ’ ಎಂದು ಅವರು ತಿಳಿಸಿದರು.
‘ದಯವಿಟ್ಟು ಹೆಣ್ಣುಮಕ್ಕಳ ಶಿಕ್ಷಣವನ್ನು ಹಿಜಾಬ್ ನೆರಳಿನಲ್ಲಿ ನೋಡಬೇಡಿ. ರಾಜ್ಯದಲ್ಲಿ ಮೊದಲಿನಿಂದಲೇ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿಯೇ ಶಾಲೆ-ಕಾಲೇಜುಗಳಿಗೆ ಹೋಗುತ್ತಿದ್ದರು. ಕೆಲವರು ಹೋಗುತ್ತಿರಲಿಲ್ಲ. ಈಗಲೂ ಕೆಲವೆಡೆ ಹೋಗುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ. ಹಿಜಾಬ್ ಕಾರಣಕ್ಕೆ ಶಿಕ್ಷಣ ಸಂಸ್ಥೆಗಳಿಂದ ಹೊರ ಬಂದ ಹೆಣ್ಣುಮಕ್ಕಳಿಗೂ ನಾವು ಆರಂಭಿಸಲಿರುವ ಶಾಲಾ-ಕಾಲೇಜುಗಳಲ್ಲಿ ಪ್ರವೇಶಾವಕಾಶ ಇರುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.
‘ಹಿಜಾಬ್ಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ನ್ಯಾಯಾಲಯದ ಆದೇಶಗಳು ಸರ್ಕಾರಿ ಪಿಯು ಕಾಲೇಜುಗಳಿಗೆ ಮಾತ್ರವೇ ಅನ್ವಯವಾಗುತ್ತವೆ. ಇಸ್ಲಾಮಿಕ್ ಷರಿಯತ್ ನಿಯಮಗಳ ಪ್ರಕಾರ ಹಿಜಾಬ್ ಧರಿಸಿಯೇ ಹೆಣ್ಣುಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಬೇಕಾಗುತ್ತದೆ’ ಎಂದು ಅವರು ತಿಳಿಸಿದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:38 am, Wed, 30 November 22