ಉಡುಪಿಯಲ್ಲಿ ಉಗ್ರ ಶಾರೀಕ್ ಹೆಜ್ಜೆ ಗುರುತು: ಮಂಗಳೂರು ಪೊಲೀಸರಿಂದ ರಥಬೀದಿ ಪರಿಶೀಲನೆ

ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಶಾರೀಕ್​ನಿಂದ ಮೊಬೈಲ್ ಪಡೆದು ಕರೆ ಮಾಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಉಡುಪಿಯಲ್ಲಿ ಉಗ್ರ ಶಾರೀಕ್ ಹೆಜ್ಜೆ ಗುರುತು: ಮಂಗಳೂರು ಪೊಲೀಸರಿಂದ ರಥಬೀದಿ ಪರಿಶೀಲನೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 27, 2022 | 10:47 AM

ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ಮೊಹಮದ್ ಶಾರೀಕ್ ಉಡುಪಿಯಲ್ಲಿಯೂ ಓಡಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಉಡುಪಿಯ ರಥಬೀದಿಯ ಹಲವೆಡೆ ಪರಿಶೀಲಿಸಿದರು. ಕಳೆದ ಅಕ್ಟೋಬರ್ 11ರಂದು ಕೃಷ್ಣಮಠ ಹಾಗೂ ರಥಬೀದಿಯಲ್ಲಿ ಶಾರೀಕ್ ಸುತ್ತಾಡಿದ್ದ ಎನ್ನಲಾಗಿದ್ದು, ರಥಬೀದಿಯಿಂದ ಮಾಡಿದ ಮೊಬೈಲ್ ಫೋನ್ ಕರೆಯೊಂದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಶಾರೀಕ್​ನಿಂದ ಮೊಬೈಲ್ ಪಡೆದು ಕರೆ ಮಾಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ರಥಬೀದಿಯಲ್ಲಿ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದರು. ಆದರೆ ಈ ಫೂಟೇಜ್​ಗಳಲ್ಲಿ ಪೊಲೀಸರಿಗೆ ಹೆಚ್ಚೇನೂ ಮಾಹಿತಿ ಸಿಗಲಿಲ್ಲ.

ನಗರ ಸಮೀಪದ ಮಂದಾರ್ತಿ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್​​ ಫೋನ್​ ಒಂದು ಸಕ್ರಿಯವಾಗಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ​ರಾಜ್ಯ ಆಂತರಿಕ ಭದ್ರತಾ ವಿಭಾಗದಿಂದ ಜಿಲ್ಲಾ ವಿಭಾಗಕ್ಕೆ ಈ ಸಂಬಂಧ ಮಾಹಿತಿ ರವಾನಿಸಲಾಗಿದೆ. ಕಳೆದ ನವೆಂಬರ್ 9ರಂದು ಉಡುಪಿಯಲ್ಲಿ ‘ತುರಾಯ್​ ಸ್ಯಾಟಲೈಟ್’ನಿಂದ ಕರೆಯೊಂದು ಬಂದಿತ್ತು. ಮಂದಾರ್ತಿ ದೇಗುಲದಿಂದ ಒಂದೂವರೆ ಕಿಮೀ ದೂರದಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯವಾಗಿತ್ತು. ಈ ಸ್ಥಳವನ್ನು ಹುಡುಕಿದಾಗ ಉಡುಪಿ ಜಿಲ್ಲೆ ಗೇರುಬೀಜ ಕಾರ್ಖಾನೆ ಬಳಿಯ ಲೊಕೇಶನ್​ ಪತ್ತೆಯಾಗಿತ್ತು.

2020ರಲ್ಲೂ ಉಡುಪಿ ಜಿಲ್ಲೆಯಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯವಾಗಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕೊಲ್ಲೂರು, ಜಡ್ಡಿನಗುಡ್ಡೆ, ಹೆರ್ಮುಂಡೆ ಭಾಗದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾದ ಬಗ್ಗೆ ಮಾಹಿತಿ ತಿಳಿದುಬಂದಿತ್ತಾದರೂ ಪೊಲೀಸರು ಪರಿಶೀಲಿಸಿದಾಗ ಯಾವುದೇ ಪುರಾವೆಗಳು ದೊರಕಿರಲಿಲ್ಲ.

ಉಗ್ರರಿಗೆ ತಂತ್ರಜ್ಞಾನವೇ ವರದಾನ

ಕರ್ನಾಟಕದಲ್ಲಿ ಶಂಕಿತ ಉಗ್ರರು ಬಾಲಬಿಚ್ಚಿದ್ದು, ಕುಕೃತ್ಯ ಎಸಗಲು ಸಜ್ಜಾಗುತ್ತಿದ್ದಾರೆ. ಇತ್ತಿಚೆಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್​ ಬ್ಲಾಸ್ಟ್​ ನಂತರ ದೇಶಾದ್ಯಂತ ಉಗ್ರ ಚಟುವಟಿಕೆಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ದೇಶದ ಯಾವುದೇ ಮೂಲೆಯಲ್ಲಿ ಕುಳಿತು ವಿವಿಧ ದೇಶದ ಉಗ್ರರೊಂದಿಗೆ ಇಲ್ಲಿಂದಲೇ ಇವರು ಸಂಪರ್ಕ ಸಾಧಿಸುತ್ತಿದ್ದರು. ಮಲೆನಾಡಿನ ಶಂಕಿತ ಉಗ್ರರ ಬಂಧನದ ವೇಳೆ ವಶಕ್ಕೆ ಪಡೆದಿದ್ದ ಮೊಬೈಲ್ ಪರಿಶೀಲನೆ ವೇಳೆ ಸ್ಫೋಟಕ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ. ಹೊರದೇಶದ ಉಗ್ರರೊಂದಿಗೆ ವಿವಿಧ ಆ್ಯಪ್ ಹಾಗೂ ಕೋಡ್​ವರ್ಡ್​​ ಮೂಲಕ ಇವರು ಚಾಟ್ ಮಾಡುತ್ತಿದ್ದರು. ಈ ಮಾಹಿತಿಯೊಂದಿಗೆ ಮೊಬೈಲ್​ನಲ್ಲಿ ಪ್ರಚೋದನಕಾರಿ ವಿಡಿಯೋಗಳು ಲಭ್ಯವಾಗಿವೆ.

ಮೊಬೈಲ್ ಪರಿಶೀಲನೆ ವೇಳೆ ಶಂಕಿತ ಉಗ್ರರು ಮತ್ತು ಉಗ್ರರ ಜೊತೆ ಸಿಗ್ನಲ್ ಮತ್ತು ವೈರ್ ಮಂತಾದ ಆ್ಯಪ್​ಗಳ ಮೂಲಕ ರೋಸ್, ಡಾಲಿ, ಪಿಂಕ್ ಇಂತಹ ಬೇರೆ ಕೋಡ್​ಗಳಲ್ಲಿ ಚಾಟಿಂಗ್ ಮಾಡಿಕೊಳ್ಳುತ್ತಿದ್ದರು. ಪ್ರತಿ ಬಾರಿ ಚಾಟಿಂಗ್ ಸಮಯದಲ್ಲಿ ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡಿ ಫೇಕ್ ವರ್ಚೂಲ್ ಐಡಿಗಳನ್ನು ತೆರೆಯುತ್ತಿದ್ದರು. ಚಾಟಿಂಗ್ ಮಾಡಿದ ನಂತರ ಇನ್​ಸ್ಟಾಲ್ ಮಾಡಿದ ಆ್ಯಪ್​ಗಳನ್ನು ಅನ್​ಇನ್​ಸ್ಟಾಲ್ ಮಾಡುತ್ತಿದ್ದರು. ಹೀಗಾಗಿ ಇವರ ಜಾಡು ಪತ್ತೆ ಮಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ವೈರ್, ಸಿಗ್ನಲ್ ಆ್ಯಪ್​ಗಳ ಸರ್ವರ್​ಗಳು ವಿದೇಶದಲ್ಲಿರುವುದರಿಂದ ಮಾಹಿತಿ ತಿಳಿಯುವುದು ಕಷ್ಟಕರವಾಗಿದೆ. ರಾಜ್ಯ ಮತ್ತು ದೇಶದ ತನಿಖಾ ದಳಗಳಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಚಾಲಾಕಿ ಉಗ್ರ ಸಂಘಟನೆಗಳು ತಂತ್ರಜ್ಞಾನ ಬಳಕೆ ಮಾಡಿಕೊಂಡು ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿವೆ ಎಂದು ಪೊಲೀಸರು ಹೇಳಿದ್ದರು.

Published On - 10:47 am, Sun, 27 November 22