ಉಡುಪಿ, ಸೆಪ್ಟೆಂಬರ್ 19: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಚ್ಚರಿಪೇಟೆಯ ಖಾಸಗಿ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ ಮಾಡಿರುವುದಕ್ಕೆ ಹಿಂದೂ ಮಕ್ಕಳ ಪೋಷಕರಿಂದ ಆಕ್ಷೇಪ ವ್ಯಕ್ತವಾಗಿದೆ. ಸಚ್ಚರಿಪೇಟೆಯ ಲಯನ್ಸ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪ್ರವಾದಿ ಜನ್ಮದಿನಾಚರಣೆ ಪ್ರಯುಕ್ತ ಈದ್ ಮಿಲಾದ್ ಆಚರಿಸಲಾಗಿತ್ತು. ಬಿಜೆಪಿ ಮುಖಂಡರೊಬ್ಬರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಕಾರ್ಯಕ್ರಮದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಹಿಂದೂ ಶಾಲೆಯ ಮಕ್ಕಳ ಪೋಷಕರಿಂದ ಕಾರ್ಯಕ್ರಮದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಮಧ್ಯೆ, ಘಟನೆ ಬಗ್ಗೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇನು ಅರಬ್ಸ್ತಾನ ಅಂದುಕೊಂಡಿದ್ದಾರೆಯೋ? ಶಾಲೆಗಳಲ್ಲಿ ಈದ್ ಮಿಲಾದ್ ಆಚರಣೆ ಮಾಡಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಈದ್ ಮಿಲಾದ್ ಆಚರಣೆ ಮಾಡಿದ್ದಲ್ಲದೆ, ಅರಬ್ ರಾಷ್ಟ್ರದ ಉಡುಪು ಧರಿಸಿ ಕುಣಿದಿದ್ದಾರೆ. ಹಿಂದೂ ಮಕ್ಕಳ ಮೇಲೆ ಪ್ರಭಾವ ಬೀರುವಂತೆ ಮಾಡಿದ್ದಾರೆ. ಕೂಡಲೇ ಉಡುಪಿ ಡಿಡಿಪಿಐ ಮಧ್ಯಪ್ರವೇಶಿಸಬೇಕು. ಶಾಲೆಯನ್ನು ಸೀಜ್ ಮಾಡಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲು ನಿಲ್ದಾಣದ ಬಳಿ ಅಕ್ರಮವಾಗಿ 1,42,798 ರೂ. ಮೌಲ್ಯದ ಗೋವಾ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಸೆಪ್ಟೆಂಬರ್ 17ರಂದು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಸಬ್ ಇನ್ಸ್ಪೆಕ್ಟರ್ ಶುಭದಾ ಸಿ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮದ್ಯ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಉಡುಪಿ: ಮತ್ತೋರ್ವರ ಜೀವ ಉಳಿಸಲು ಯಕೃತ್ ದಾನ ಮಾಡಲು ಹೋಗಿ ಮಹಿಳೆ ಸಾವು
ಆರೋಪಿಯನ್ನು ಅನಂತ್ ದೇವದಾಸ್ ಪ್ರಭು ಎಂದು ಗುರುತಿಸಲಾಗಿದ್ದು, ದ್ವಿಚಕ್ರ ವಾಹನದಲ್ಲಿ ಸುಮಾರು 31 ಲೀ. ಗೋವಾ ಮದ್ಯ ಸಾಗಿಸುತ್ತಿದ್ದ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:05 am, Thu, 19 September 24