ಉಡುಪಿ, ಸೆಪ್ಟೆಂಬರ್ 22: ತಿರುಪತಿ ತಿಮ್ಮಪ್ಪನ ಲಡ್ಡು (tirupati laddu) ಪ್ರಸಾದ ವಿವಾದ ತೀವ್ರಗೊಂಡಿದೆ. ಇದು ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಕೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥಶ್ರೀ ಪ್ರತಿಕ್ರಿಯಿಸಿದ್ದು, ತಿರುಪತಿಯ ಶ್ರೀನಿವಾಸ ದೇವರು ಗೋರಕ್ಷಣೆಗೆ ಅವತರಿಸಿದವರು. ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದೀರಿ ಎಂದು ಕಿಡಿಕಾರಿದ್ದಾರೆ.
ಅಯೋಧ್ಯೆಯಿಂದ ಮಾತನಾಡಿದ ಅವರು, ಲಡ್ಡು ಪ್ರಸಾದಕ್ಕೆ ಹಸುವಿನ ತುಪ್ಪದ ಬದಲು ಕೃತಕ ತುಪ್ಪ ಹಾಕಿದ್ದಾರೆ. ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಮಿಶ್ರಣದಿಂದ ಲಡ್ಡು ಪ್ರಸಾದ ತಯಾರಿಸಿದ್ದಾರೆ. ಇದು ಸನಾತನ ಹಿಂದೂ ಸಮಾಜಕ್ಕೆ ಬಗೆದಿರುವ ದೊಡ್ಡ ಅಪಚಾರ. ಆಂಧ್ರದ ಹಿಂದಿನ ಸರ್ಕಾರ ಈ ಕೃತ್ಯ ನಡೆಸಿರುವುದು ಖಂಡನಾರ್ಹ. ಇದು ದೇವರಿಗೆ ಬಗೆದಿರುವ ಅಪಚಾರ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದ ಬಳಸದಿರಲು ನಿರ್ಧರಿಸಿದ ಕರ್ನಾಟಕದ ಅರ್ಚಕರು!
ಇದೊಂದು ಅಪರಾಧ, ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಿನ ಹಲ್ಲೆ. ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನ ದೇವಾಲಯಕ್ಕೆ ಬಳಸಿದ್ದೀರಿ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸರ್ಕಾರದ ಹಿಡಿತದಲ್ಲಿ ಇರಬಾರದು. ಬದಲಿಗೆ ಶ್ರದ್ಧಾ ಕೇಂದ್ರಗಳು ಹಿಂದೂ ಸಮಾಜದ ಕೈಯಲ್ಲಿರಬೇಕು. ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ತಡ ಮಾಡದೆ ಸರ್ಕಾರದ ಸ್ವಾಧೀನದಿಂದ ಶ್ರದ್ಧಾ ಕೇಂದ್ರ ಮುಕ್ತಗೊಳಿಸಿ. ತಿರುಪತಿ ದೇವಾಲಯದ ಆಡಳಿತವನ್ನು ಹಿಂದೂಗಳ ಸಂಸ್ಥೆಗೆ ನೀಡಿ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ, ತಿರುಮಲ ಕ್ಷೇತ್ರದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ನಡೆದಿರುವುದು ಖಂಡನೀಯ. ಇದು ಅಕ್ಷಮ್ಯ ಅಪರಾಧ. ಹಿಂದೂ ಧರ್ಮೀಯರ ಪ್ರಮುಖ ಶ್ರದ್ಧಾ ಕೇಂದ್ರ ತಿರುಪತಿ. ಶ್ರೀ ವೆಂಕಟೇಶ್ವರ ದೇವರ ಪರಮ ಪಾವನವಾದ ನೈವೇದ್ಯ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬೆರೆಸಿ ದೊಡ್ಡ ಅಪಚಾರ ಮಾಡಲಾಗಿದೆ. ಈ ಮೂಲಕ ಬಹುದೊಡ್ಡ ಧಾರ್ಮಿಕ ಸಮಾಜವನ್ನು ಘಾಸಿಗೊಳಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ವಿವಿಧ ಕಂಪನಿಗಳಲ್ಲಿ ತಯಾರಾಗುವ ತುಪ್ಪ ಪರೀಕ್ಷಿಸಲು ನಿರ್ಧರಿಸಿದ ಸರ್ಕಾರ
ದೇವಸ್ಥಾನ ಮತ್ತು ಮಠ ಮಂದಿರಗಳ ಮೇಲೆ ನಿರಂತರ ನಡೆಯುತ್ತಿರುವ ಆಕ್ರಮಣ ತಡೆಯಬೇಕು. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕು. ರಾಜಕೀಯ ಪಕ್ಷಗಳ ಕಪಿಮುಷ್ಠಿಯಿಂದ ದೇವಸ್ಥಾನ ಹಾಗೂ ಮಠ ಮಂದಿರವನ್ನು ಮುಕ್ತಗೊಳಿಸಬೇಕು. ಸನಾತನ ಧರ್ಮದ ರಕ್ಷಣೆಗಾಗಿ ರಾಷ್ಟ್ರಮಟ್ಟದಲ್ಲಿ ಸಂತರ, ಪೀಠಾಧಿಪತಿಗಳ ನೇತೃತ್ವದ ಮಾರ್ಗದರ್ಶಕ ಮಂಡಳಿ ರಚಿಸಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಇರಬಾರದು. ಸರ್ಕಾರದ ಕಪಿಮುಷ್ಠಿಯಿಂದ ದೇವಾಲಯಗಳನ್ನು ಮುಕ್ತಗೊಳಿಸಿ. ಮಠ ಮಂದಿರಗಳನ್ನು ಸ್ವಾಯತ್ತಗೊಳಿಸಲು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಶ್ರೀ ವಿದ್ಯೇಶ ತೀರ್ಥರು ಮಾತನಾಡಿ, ನಮಗೆ ಸಂವಿಧಾನ ಧರ್ಮ ಪಾಲಿಸುವ ಅವಕಾಶ ಕೊಟ್ಟಿದೆ. ಅವಕಾಶ ನಿಜವಾಗಿಯೂ ಕೊಟ್ಟಿದ್ದರೆ ನಮ್ಮ ದೇವಾಲಯಗಳನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಿ. ಸಂವಿಧಾನ ನೀಡಿದ ಅಧಿಕಾರವನ್ನು ಹತ್ತಿಕ್ಕಬೇಡಿ. ಲಡ್ಡಿನಲ್ಲಿ ಕಲಬೆರಕೆ ಮಾಡಿರುವುದರಿಂದ ಬೇಸರವಾಗಿದೆ. ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ರಾಜಕೀಯ ಸರಕಾರದ ಹಸ್ತಕ್ಷೇಪ ಇರಬಾರದು. ಸಂತರು, ಮಠಾಧಿಪತಿಗಳ ಪ್ರತ್ಯೇಕ ವ್ಯವಸ್ಥೆ ಇರಲಿ. ಅನ್ಯ ಧರ್ಮೀಯರ ಸಂಸ್ಥೆಗಳಲ್ಲಿ ಹಿಂದುಗಳು ಹಸ್ತಕ್ಷೇಪ ಮಾಡುವುದಿಲ್ಲ. ಹಿಂದುಗಳ ಕ್ಷೇತ್ರಕ್ಕೆ ಅನ್ಯ ಧರ್ಮೀಯರ ಹಸ್ತಕ್ಷೇಪ ಯಾಕೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.