
ಉಡುಪಿ, ಡಿಸೆಂಬರ್ 23: ಜನರ ಭಕ್ತಿಯನ್ನು ಬಂಡವಾಳ ಮಾಡಿಕೊಳ್ಳಲು ವಂಚಕರು ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಅದೇ ರೀತಿ, ಕೊಲ್ಲೂರು ಮೂಕಾಂಬಿಕಾ ದೇಗುಲದ (Kollur Mookambika Temple) ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ಭಕ್ತರ ಹಣ ಲಪಟಾಯಿಸುತ್ತಿದ್ದ ರಾಜಸ್ಥಾನದ ತಿಜಾರಿ ಜಿಲ್ಲೆಯ ನಾಸಿರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಸಿರ್ ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರದ ಭಕ್ತರಿಗೆ, ವಂಚಿಸಲು ಮಾಡಿಕೊಂಡ ತಯಾರಿ ನೋಡಿದರೆ ನೀವು ಬೆಚ್ಚಿ ಬೀಳುತ್ತಿರಿ! ಈತ ಕೊಲ್ಲೂರು ದೇಗುಲದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಆರಂಭಿಸಿ ಅಸಲಿ ಖಾತೆಗೆ ಸಡ್ಡು ಹೊಡೆಯುವ ರೀತಿಯಲ್ಲಿ ನಿರ್ವಹಿಸುತ್ತಿದ್ದ. ರೂಮ್ ಬುಕಿಂಗ್, ಹರಕೆ ಬುಕಿಂಗ್ ಎಲ್ಲವೂ ಈ ನಕಲಿ ವೆಬ್ಸೈಟ್ನಲ್ಲಿ ಲೀಲಾಜಾಲವಾಗಿ ನಡೆಯುತ್ತಿತ್ತು. ಈ ನಕಲಿ ಅಕೌಂಟ್ ಮೂಲಕ ರೂಮ್ ಬುಕ್ ಮಾಡಿಕೊಂಡ ಭಕ್ತರು ಕ್ಷೇತ್ರಕ್ಕೆ ಬಂದಾಗ, ಅಸಲಿಯತ್ತು ಬಯಲಿಗೆ ಬಂದಿತ್ತು. ತಕ್ಷಣ ದೇವಾಲಯದ ಸಿಇಒ ಕೊಲ್ಲೂರು ಠಾಣೆಯಲ್ಲಿ ದೂರು ನೀಡಿದ್ದರು. ನಂತರ ತನಿಖೆ ನಡೆಸಿದ ಪೊಲೀಸರು ರಾಜಸ್ಥಾನದಿಂದ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.
ಹೆಚ್ಚಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನಡೆಸುವ ಈ ರೀತಯ ವಂಚನೆಗಳು ಬಯಲಾಗುವುದು ಅಪರೂಪ. ಒಂದು ವೇಳೆ, ವಂಚನೆ ಬಯಲಾದರೂ ವಂಚಕರ ಬಂಧನವಾಗುವುದು ವಿರಳ. ಆದರೆ ಈ ವಿಚಾರದಲ್ಲಿ ಉಡುಪಿ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ರಾಜಸ್ಥಾನದ ತಿಜಾರಿ ಎಂಬ ಜಿಲ್ಲೆ ಸೈಬರ್ ಅಪರಾಧಿಗಳ ತವರೂರು ಎಂದೇ ಕುಖ್ಯಾತವಾಗಿದೆ. ಬಹುತೇಕ ಸೈಬರ್ ಆರೋಪಿಗಳೇ ತುಂಬಿರುವ ಆ ಜಿಲ್ಲೆಗೆ ಹೋಗಿ ಆರೋಪಿಗಳನ್ನು ಹಿಡಿದು ತರುವುದು ಸುಲಭದ ಮಾತಲ್ಲ. ಅಲ್ಲಿ ಪೊಲೀಸರು ಕೂಡ ಸಹಕರಿಸುವುದಿಲ್ಲ ಎನ್ನಲಾಗಿದೆ. ಆದರೆ, ಇದೊಂದು ಪ್ರತಿಷ್ಠಿತ ಧಾರ್ಮಿಕ ಕೇಂದ್ರದ ವಿಚಾರವಾದ ಕಾರಣ ಸ್ಥಳೀಯ ಪೊಲೀಸರಿಗೆ ಮನದಟ್ಟು ಮಾಡಿ ಉಡುಪಿ ಪೊಲೀಸರು ಆರೋಪಿ ನಾಸಿರ್ನನ್ನು ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ: ಭಕ್ತರೇ ಎಚ್ಚರ: ಕೊಲ್ಲೂರು ಮೂಕಾಂಬಿಕಾ ದೇಗುಲದ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ವಂಚಿಸ್ತಿದ್ದಾರೆ ಸೈಬರ್ ವಂಚಕರು
ಸರಕಾರಿ ಯೋಜನೆಗಳ ಹೆಸರಲ್ಲಿ ವಂಚನೆ ಮಾಡುವ ಅನೇಕ ಮಂದಿ ಈ ಜಿಲ್ಲೆಯಲ್ಲಿ ಇದ್ದು, ಅವರಿಂದಲೇ ಪ್ರೇರಣೆ ಪಡೆದು ತಾನು ಈ ಸಂಚು ಹೂಡಿರುವುದಾಗಿ ನಾಸಿರ್ ಒಪ್ಪಿಕೊಂಡಿದ್ದಾನೆ. ಪದವಿ ಕಲಿಯುತ್ತಿರುವ ಈತ ವಿದ್ಯಾರ್ಥಿ ಹಂತದಲ್ಲೇ ಪೊಲೀಸರ ಅತಿಥಿಯಾಗಿದ್ದಾನೆ.