ಬೆಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲು ಆರಂಭಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮನವಿ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಸೇವೆ ಆರಂಭಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಮನವಿ ಮಾಡಿದ್ದಾರೆ. ಈ ರೈಲು ಹಾಸನ, ಮಂಗಳೂರು, ಉಡುಪಿ, ಕಾರವಾರ ಮಾರ್ಗವಾಗಿ ಸಂಚರಿಸಿದರೆ ಕರಾವಳಿ ಭಾಗದ ಪ್ರವಾಸೋದ್ಯಮ, ಆರ್ಥಿಕತೆ ಮತ್ತು ಕೈಗಾರಿಕೆಗೆ ಮಹತ್ವದ ಉತ್ತೇಜನ ನೀಡಲಿದೆ. ಸಾರ್ವಜನಿಕರಿಂದಲೂ ಈ ಮಾರ್ಗಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದು ತಿಳಿಸಿದ್ದಾರೆ

ಬೆಂಗಳೂರು, ಡಿಸೆಂಬರ್ 23: ಬೆಂಗಳೂರು-ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವಂತೆ ಆಗ್ರಹಿಸಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಹಾಸನ, ಮಂಗಳೂರು, ಉಡುಪಿ, ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ಗೆ ರೈಲು ಸಂಚಾರ ಆರಂಭಿಸಿದಲ್ಲಿ ಪ್ರವಾಸೋದ್ಯಮ, ಆರ್ಥಿಕ, ಕೈಗಾರಿಕೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಡಿಕೆ ಬರೆದ ಪತ್ರದಲ್ಲೇನಿದೆ?
ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳ ಮಾರ್ಗವಾಗಿ ಗೋವಾ ಸಂಪರ್ಕಿಸುವ ಉತ್ತಮ ಹೈ-ಸ್ಪೀಡ್ ರೈಲು ಸಂಚಾರಕ್ಕೆ ಸಾರ್ವಜನಿಕ ವಲಯದಿಂದ ಬೇಡಿಕೆ ಇದೆ. ಘಾಟ್ ವಿಭಾಗದಲ್ಲಿ ವಿದ್ಯುತೀಕರಣ ಪೂರ್ಣಗೊಂಡ ನಂತರ, ಈ ಮಾರ್ಗವು ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸಿದ್ಧವಾಗಲಿದೆ. ಹೀಗಾಗಿ ಹಾಸನ, ಮಂಗಳೂರ ಜಂಕ್ಷನ್, ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಸಂಚರಿಸುವ ಬೆಂಗಳೂರು ಮತ್ತು ಮಡಗಾಂವ್ (ಗೋವಾ) ಸಂಪರ್ಕಿಸುವ ವಂದೇ ಭಾರತ ಎಕ್ಸ್‌ಪ್ರೆಸ್ ಸೇವೆಯನ್ನು ಆರಂಭಿಸುವಂತೆ ಮನವಿ ಮಾಡುತ್ತೇನೆ. ಈ ಮಾರ್ಗವು ಪ್ರವಾಸಿ, ಯಾತ್ರಿಕ, ಶೈಕ್ಷಣಿಕ ಮತ್ತು ವೃತ್ತಿಪರ ಪ್ರಯಾಣಿಕರನ್ನು ಒಳಗೊಂಡಿದೆ ಎಂದು ಹೆಚ್ಡಿಕೆ ತಿಳಿಸಿದ್ದಾರೆ.
ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್ ಏನೇಲ್ಲ ವಿಶೇಷತೆ ಹೊಂದಿದೆ ನೋಡಿ
‘ಕರಾವಳಿ ಭಾಗಕ್ಕೆ ದೊಡ್ಡ ಶಕ್ತಿಯಾಗಲಿದೆ’
ಬೆಂಗಳೂರು & ಕರ್ನಾಟಕದ ಕರಾವಳಿ ನಗರಗಳ ಮೂಲಕ ಗೋವಾದ ಮಡಗಾಂವ್ ಸಂಪರ್ಕಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೌಲಭ್ಯ ಕಲ್ಪಿಸುವ ಬಗ್ಗೆ ಕೇಂದ್ರದ ರೈಲ್ವೆ ಸಚಿವರಾದ ಶ್ರೀ @AshwiniVaishnaw ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ.
ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರ ಮಹತ್ವಾಕಾಂಕ್ಷೆಯ ವಂದೇ ಭಾರತ್ ರೈಲು ಕಲ್ಪನೆ… https://t.co/oTXl0yUXrn
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) December 23, 2025
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿಯೂ ಮಾಹಿತಿ ಹಂಚಿಕೊಂಡಿರುವ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ವಂದೇ ಭಾರತ್ ರೈಲು ಕಲ್ಪನೆ ಭಾರತೀಯ ರೈಲ್ವೆಯಲ್ಲಿ ಪರಿವರ್ತನಾತ್ಮಕ ಕ್ರಾಂತಿಯನ್ನೇ ಉಂಟು ಮಾಡಿದೆ. ಬೆಂಗಳೂರು ಮತ್ತು ನಡುವಿನ ವಂದೇ ಭಾರತ್ ರೈಲು ರಾಜ್ಯಕ್ಕೆ, ಅದರಲ್ಲಿಯೂ ಕರಾವಳಿ ಭಾಗಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂಬುದು ನನ್ನ ವಿಶ್ವಾಸ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:35 pm, Tue, 23 December 25




