ಗಗನಕ್ಕೇರಿದ ಮೀನಿನ ದರ; ಧಾರಾಕಾರ ಮಳೆಗೆ ಪೂರೈಕೆ ಸ್ಥಗಿತ, ಕಂಗಾಲಾದ ಮೀನುಗಾರರು
ಕಳೆದ ಮಂಗಳವಾರ ಉಡುಪಿಯಲ್ಲಿ ಜವಾಬು ಚಂಡಮಾರುತದ ಪರಿಣಾಮವಾಗಿ ಧಾರಾಕಾರ ಮಳೆ ಸುರಿದಿತ್ತು. ಈಗ ಕೂಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಮೀನಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದ್ದರೂ ಮೀನುಗಾರರಿಗೆ ಮಾರುಕಟ್ಟೆಗೆ ಮೀನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಉಡುಪಿ: ಜಿಲ್ಲೆಯಲ್ಲಿ ಮೀನು ಎಂದರೆ ಸಾಕು ಕೆಲವರು ತಾಮುಂದು ನಾ ಮುಂದು ಎಂದು ಮಾರುಕಟ್ಟೆಗೆ ಆಗಮಿಸುತ್ತಾರೆ. ಅದರಲ್ಲೂ ತಾಜಾ ಮೀನು ಸಿಗುತ್ತದೆ ಎಂದರೆ ಮತ್ತಷ್ಟು ಖುಷಿ. ಆದರೆ ನವರಾತ್ರಿ ಸಂದರ್ಭದಲ್ಲಿ ಭರಪೂರ ಮೀನು ಸಿಕ್ಕಿದರೂ ಮಾರುಕಟ್ಟೆಯಲ್ಲಿ ಬೆಲೆ ಇರಲಿಲ್ಲ. ಈಗ ನವರಾತ್ರಿ ಮುಗಿದಿದ್ದು, ಮೀನಿನ ದರ ಗಗನಕ್ಕೇರಿದೆ. ಇದಕ್ಕೆ ಕಾರಣ ಈಗ ಮೀನು ಸಿಗುತ್ತಿಲ್ಲ ಹಾಗಾಗಿ ಬೆಲೆ ಹೆಚ್ಚಳವಾಗಿದೆ. ಅಷ್ಟಕ್ಕೂ ನವರಾತ್ರಿಗೂ ಮೀನಿನ ದರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ.
700 ರಿಂದ 800 ರೂಪಾಯಿ ಬೆಲೆಬಾಳುವ ಅಂಜಲ್ ಮೀನುಗಳು ನವರಾತ್ರಿ ಸಮಯದಲ್ಲಿ ಕೇವಲ ಇನ್ನೂರು ರೂಪಾಯಿಗೆ ಮಾರಾಟವಾಗುತ್ತವೆ. ಇನ್ನೂ ನೂರು ರೂಪಾಯಿಗೆ 4 ಅಥವಾ 5 ಸಿಗುತ್ತಿದ್ದ ಬಂಗುಡೆ ಮೀನುಗಳು ನವರಾತ್ರಿ ದಿನಗಳಲ್ಲಿ 15 ರಷ್ಟು ಸಿಗುತ್ತಿದ್ದವು. ಕಾರಣ ಏನಪ್ಪಾ ಅಂದರೆ ನವರಾತ್ರಿಯಲ್ಲಿ ಶೇ.90 ಹಿಂದುಗಳು ಮಾಂಸಾಹಾರವನ್ನು ತ್ಯಜಿಸಿ ಸಾತ್ವಿಕ ಆಹಾರ ಸ್ವೀಕರಿಸಿ ವೃತ ಆಚರಿಸುತ್ತಾರೆ. ಈ ವೇಳೆ ಕೋಳಿ ಮತ್ತು ಮೀನು ವ್ಯಾಪಾರ ಸಂಪೂರ್ಣವಾಗಿ ನೆಲಕಚ್ಚಿ ಹೋಗುತ್ತವೆ.
ಈ ವರ್ಷ ನವರಾತ್ರಿ ಸಂದರ್ಭದಲ್ಲಿ ಮೀನುಗಾರಿಕೆ ಉತ್ತಮವಾಗಿ ನಡೆದು ರಾಶಿರಾಶಿ ಮೀನು ಸಿಕ್ಕಿದರೂ ಹಬ್ಬದ ಕಾರಣದಿಂದಾಗಿ ಮೀನಿಗೆ ಸರಿಯಾಗಿ ಬೆಲೆ ಸಿಗಲಿಲ್ಲ. ಆದರೆ ನವರಾತ್ರಿ ಸಂದರ್ಭದಲ್ಲಿ ನಡೆದ ಅಷ್ಟು ನಷ್ಟವನ್ನು ಮೀನುಗಾರರು ಸರಿದೂಗಿಸಿ ಕೊಳ್ಳುವುದು ನವರಾತ್ರಿ ಮುಗಿದ ಬಳಿಕ. ನವರಾತ್ರಿಯ ನಂತರ ಜನರು ಮುಗಿಬಿದ್ದು ಮೀನು ಖರೀದಿಗೆ ಬರುತ್ತಾರೆ. ಈ ವೇಳೆ ಮೀನಿನ ಬೆಲೆ ಗಗನಕ್ಕೇರುತ್ತದೆ. ಈ ಬಾರಿ ನವರಾತ್ರಿಯ ನಂತರ ಮೀನಿನ ಬೆಲೆ ಏನೋ ಗಗನಕ್ಕೇರಿದೆ ಆದರೆ ಮೀನುಗಾರರಿಗೆ ಮಾತ್ರ ಮೀನುಗಾರಿಕೆ ನಡೆಸಲು ಚಂಡಮಾರುತ ಅವಕಾಶ ನೀಡುತ್ತಿಲ್ಲ ಎನ್ನುವುದು ಮೀನುಗಾರರ ಮಾತು.
ಕಳೆದ ಮಂಗಳವಾರ ಉಡುಪಿಯಲ್ಲಿ ಜವಾಬು ಚಂಡಮಾರುತದ ಪರಿಣಾಮವಾಗಿ ಧಾರಾಕಾರ ಮಳೆ ಸುರಿದಿತ್ತು. ಈಗ ಕೂಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಮೀನಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದ್ದರೂ ಮೀನುಗಾರರಿಗೆ ಮಾರುಕಟ್ಟೆಗೆ ಮೀನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿನ್ನೆ ಉಡುಪಿಯ ಬಹುತೇಕ ಮಾರುಕಟ್ಟೆಗಳಲ್ಲಿ ಮಧ್ಯಾಹ್ನಕ್ಕೂ ಮೊದಲೇ ವ್ಯಾಪಾರ ವಹಿವಾಟುಗಳು ಮುಗಿದಿದ್ದವು. ಇದ್ದ ಅಲ್ಪಸ್ವಲ್ಪ ಮೀನುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ ಮೀನು ವ್ಯಾಪಾರಿಗಳು ಸಾಧ್ಯವಾದಷ್ಟು ಲಾಭ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ 9 ದಿವಸ ಕಷ್ಟಪಟ್ಟು ಮೀನು ಬಿಟ್ಟು, ಪಲ್ಯ, ತರಕಾರಿ ಊಟ ಮಾಡಿದ ಮತ್ಸ್ಯ ಪ್ರಿಯರು ಬಹಳ ಆಸೆ ಇಟ್ಟುಕೊಂಡು ಮಾರುಕಟ್ಟೆಗೆ ಬಂದು ಮೀನು ಸಿಗದೇ ನಿರಾಸೆಯಿಂದ ವಾಪಾಸ್ ಹೋಗುವಂತಾಗಿದೆ. ವಾತಾವರಣ ತಿಳಿಯಾಗಿ ಮೀನುಗಾರರು ಮತ್ತೆ ಕಡಲಿಗೆ ಇಳಿದರೆ ಮೀನು ಮಾರುಕಟ್ಟೆಗಳಲ್ಲಿ ವ್ಯವಹಾರ ಮತ್ತೆ ಸಹಜ ಸ್ಥಿತಿಗೆ ಮರಳಬಹುದು.
ವರದಿ: ಹರೀಶ್ ಪಾಲೇಚ್ಚಾರ್
ಇದನ್ನೂ ಓದಿ: ಮಲ್ಪೆ ಬಂದರಿನಲ್ಲಿ ಅಪರೂಪದ ಮೀನು ಪತ್ತೆ; ನೆಮ್ಮೀನ್ಗೆ ಕೇರಳದಲ್ಲಿ ಭಾರೀ ಬೇಡಿಕೆ!
Published On - 9:01 am, Wed, 20 October 21