ಉಡುಪಿ ಮಾಜಿ ಶಾಸಕರ ಪತ್ನಿ ಆತ್ನಹತ್ಯೆ ಕೇಸ್​; 15 ವರ್ಷಗಳ ಬಳಿಕ ಓರ್ವ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 11, 2023 | 4:26 PM

15 ವರ್ಷಗಳ ಹಿಂದೆ ನಡೆದ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್‌ ಎಂಬುವವರಿಗೆ ಉಡುಪಿ ಕೋರ್ಟ್​ ಒಂದು ವರ್ಷ ಶಿಕ್ಷೆ ವಿಧಿಸಿದೆ.

ಉಡುಪಿ ಮಾಜಿ ಶಾಸಕರ ಪತ್ನಿ ಆತ್ನಹತ್ಯೆ ಕೇಸ್​; 15 ವರ್ಷಗಳ ಬಳಿಕ ಓರ್ವ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​
ಪ್ರಾತಿನಿಧಿಕ ಚಿತ್ರ
Follow us on

ಉಡುಪಿ, ನ.11: 15 ವರ್ಷಗಳ ಹಿಂದೆ ನಡೆದ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್(Raghupathi Bhat) ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ(Fake Documents) ಸೃಷ್ಠಿಸಿರುವ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್‌ಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.

ಘಟನೆ ವಿವರ

ಹೌದು, 2008ರ ಜೂ.10ರಂದು ಪದ್ಮಪ್ರಿಯ ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಅಂದು ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಅತುಲ್ ರಾವ್‌, ಮನೆಯಿಂದ ಪದ್ಮಪ್ರಿಯ ಅವರನ್ನು ಆಕೆಯ ಕಾರಿನಲ್ಲಿಯೇ ಕರೆದು ಕೊಂಡು ಹೋಗಿ ಕುಂಜಾರುಗಿರಿಯ ದಾರಿ ಮಧ್ಯೆ ಕಾರನ್ನು ಬಿಟ್ಟು, ಅದರ ಒಳಗೆ ಬಳೆಯ ಚೂರು, ರಕ್ತದ ಕಲೆಗಳನ್ನು ಮಾಡಿ ಅಪಹರಣದ ನಾಟಕ ಮಾಡಿದ್ದರೆಂದು ದೂರಲಾಗಿತ್ತು. ಆದರೆ, ಅತುಲ್ ಕಾರನ್ನು ಅಲ್ಲೇ ಬಿಟ್ಟು ತನ್ನ ಕಾರಿನಲ್ಲಿ ಪದ್ಮಪ್ರಿಯ ಅವರನ್ನು ಕುಮಟಾದವರೆಗೆ ಕರೆದುಕೊಂಡು ಹೋಗಿದ್ದನು. ಕುಮಟಾಕ್ಕೆ ಬೆಂಗಳೂರಿನ ಚಾಲಕನೋರ್ವನನ್ನು ಕರೆಸಿ, ತನ್ನ ಕಾರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದನು. ಇತ್ತ ಪದ್ಮಪ್ರಿಯ ಅವರನ್ನು ಅತುಲ್ ರಾವ್‌ ಬಾಡಿಗೆ ಕಾರಿನಲ್ಲಿ ಕುಮಟಾದಿಂದ ಗೋವಾ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದನು. ಅತುಲ್ ತನ್ನ ಪತ್ನಿ ಮೀರಾ ಅವರ ಡ್ರೈವಿಂಗ್ ಲೈಸನ್ಸ್‌ಗೆ ಪದ್ಮಪ್ರಿಯ ಅವರ ಫೋಟೋ ಅಂಟಿಸಿ, ಮೀರಾ ಹೆಸರಿನಲ್ಲಿ ಪದ್ಮಪ್ರಿಯ ಅವರನ್ನು ಗೋವಾ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಕರೆದುಕೊಂಡು ಹೋಗಿದ್ದನು.

ಇದನ್ನೂ ಓದಿ:ಅಪಾರ್ಟ್ಮೆಂಟ್​ನಲ್ಲಿ ಕತ್ತುಕೊಯ್ದ ಸ್ಥಿತಿಯಲ್ಲಿ ಬ್ಯಾಂಕ್ ಮ್ಯಾನೇಜರ್​ ಪತ್ತೆ; ಆತ್ಮಹತ್ಯೆ ಶಂಕೆ

ಈ ಘಟನೆ ನಡೆಯುವ ಮೊದಲು ದೆಹಲಿಗೆ ಹೋಗಿದ್ದ ಅತುಲ್ ರಾವ್‌, ಅಲ್ಲಿ ಮನೆ ಬಾಡಿಗೆ ಪಡೆದುಕೊಂಡಿದ್ದನು. ಅದಕ್ಕೆ ಬೆಂಗಳೂರಿನ ನಕಲಿ ವಿಳಾಸ ನೀಡಿ ಬಾಡಿಗೆ ಕರಾರು ಪತ್ರಕ್ಕೆ ನೀಡಿದ್ದನು. ಇದು ಅಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಣಿಯಾಗಿತ್ತು. ಆ ಬಾಡಿಗೆ ಕರಾರು ಪತ್ರದಿಂದಲೇ ಅತುಲ್ ರಾವ್‌ ಅಲ್ಲಿ ಬ್ಯಾಂಕ್ ಖಾತೆ ತೆರೆದಿದ್ದನು.  ಇನ್ನು ಈ ಅತುಲ್ ರಾವ್‌ ಎಸ್​ಎಸ್​ಎಲ್​ಸಿ ವಿದ್ಯಾರ್ಹತೆ ಹೊಂದಿದ್ದು, ಪಿಡುಬ್ಲ್ಯುಡಿ ಇಲಾಖೆಯಲ್ಲಿ ಕರ್ಕ್ ಆಗಿದ್ದ. ಆದರೆ, ತನ್ನ ವಿದ್ಯಾರ್ಹತೆಯನ್ನು ಬಿಇ ಮತ್ತು ಇಂಟಲ್ ಕಂಪೆನಿಯಲ್ಲಿ ಇಂಜಿನಿಯರ್ ಎಂಬುದಾಗಿ ಉಲ್ಲೇಖ ಮಾಡಿದ್ದನು ಎಂದು ದೂರಲಾಗಿದೆ.

ದೆಹಲಿಯಲ್ಲಿ ಬಾಡಿಗೆ ರೂಮಿಗೆ ಓಡಾಟ ನಡೆಸುತ್ತಿದ್ದಾಗ ಲಾಡ್ಜ್‌ನಲ್ಲಿಯೂ ಬೆಂಗಳೂರಿನ ನಕಲಿ ವಿಳಾಸವನ್ನು ನೀಡುತ್ತಿದ್ದನು. ಜೂ.10ರಂದು ದೆಹಲಿ ಹೋಗಿದ್ದ ಅತುಲ್, ಮರುದಿನ ಬೆಂಗಳೂರಿಗೆ ಬಂದು ಲಾಡ್ಜ್ ಮಾಡಿದ್ದನು. ಅಲ್ಲಿಂದ ಜೂ.12ಕ್ಕೆ ಹೊರಟು ಮರುದಿನ ಉಡುಪಿಗೆ ತಲುಪಿ, ರಘುಪತಿ ಭಟ್ ಜೊತೆ ಪದ್ಮಪ್ರಿಯ ಅವರನ್ನು ಹುಡುಕುವ ನಾಟಕ ಮಾಡಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿ: ನಿಖಿಲ್​ ಸಾವಿಗೆ ಕೇಶ್ವಾಪುರ ಠಾಣೆ ಪೊಲೀಸರು ಕಾರಣ; ಕ್ರಮಕೈಗೊಳ್ಳದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕುಟುಂಬಸ್ಥರ ಎಚ್ಚರಿಕೆ

ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು

ಈ ಬಗ್ಗೆ ರಘುಪತಿ ಭಟ್ 2008ರ ಜೂ.19ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಮಣಿಪಾಲ ಪೊಲೀಸರು ತನಿಖೆ ನಡೆಸಿ, ಬಳಿಕ ಸಿಓಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಆರೋಪಿ ವಿರುದ್ಧ ಸಿಓಡಿ ಪೊಲೀಸರು 2008ರ ಆ.22ರಂದು ಪ್ರಾರಂಭಿಕ ಮತ್ತು 2009ರ ಜು.29ರಂದು ಅಂತಿಮ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದರಲ್ಲಿ ಮೋಸ, ವಂಚನೆ, ನಕಲಿ ದಾಖಲೆ ಸೃಷ್ಠಿ, ನಕಲಿ ದಾಖಲೆಯನ್ನು ನೈಜ ದಾಖಲೆ ಎಂಬುದಾಗಿ ಬಿಂಬಿಸಿ ಹಾಜರು ಪಡಿಸಿ ದುರುಪಯೋಗ ಪಡಿಸಿರುವ ಬಗ್ಗೆ ಆರೋಪ ಮಾಡಲಾಗಿತ್ತು.

ಇದರಲ್ಲಿ ರಘುಪತಿ ಭಟ್ ನೀಡಿರುವ ದೂರಿನಲ್ಲಿ ತಿಳಿಸಿರುವ ಪದ್ಮಪ್ರಿಯಾಳ ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಸಾಕ್ಷ್ಯದ ಕೊರತೆ ಹಿನ್ನೆಲೆಯಲ್ಲಿ ಸಿಓಡಿ ಅಧಿಕಾರಿಗಳು ಕೈಬಿಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್, ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಐಪಿಸಿ 468ಕಾಯಿದೆಯಡಿ ಒಂದು ವರ್ಷ ಜೈಲುಶಿಕ್ಷೆ ಮತ್ತು 5000ರೂ. ದಂಡ, ಐಪಿಸಿ 417, 465, 471 ಕಾಯಿದೆಯಡಿ ತಲಾ ಆರು ತಿಂಗಳು ಸಜೆ ಹಾಗೂ 5000ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Sat, 11 November 23