ಉಡುಪಿ: ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರ ಹತ್ಯೆ: ದುಷ್ಕರ್ಮಿ ಪರಾರಿ
Udupi News: ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ನಡೆದಿರುವಂತಹ ಘಟನೆ ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ನಡೆದಿದೆ. ತಾಯಿ, ಮೂವರು ಮಕ್ಕಳನ್ನು ಕೊಲೆಗೈದು ದುಷ್ಕರ್ಮಿ ಪರಾರಿ ಆಗಿದ್ದಾನೆ. ಘಟನಾ ಸ್ಥಳಕ್ಕೆ ಮಲ್ಪೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಉಡುಪಿ, ನವೆಂಬರ್ 12: ಚಾಕುವಿನಿಂದ ಇರಿದು (stabbing) ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ನಡೆದಿರುವಂತಹ ಘಟನೆ ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ನಡೆದಿದೆ. ತಾಯಿ, ಮೂವರು ಮಕ್ಕಳನ್ನು ಕೊಲೆಗೈದು ದುಷ್ಕರ್ಮಿ ಪರಾರಿ ಆಗಿದ್ದಾನೆ. ಹಸೀನಾ(46), ಅಫ್ನಾನ್(23), ಅಯ್ನಾಝ್(21) ಆಸೀಂ(12) ಮೃತರು. ಘಟನಾ ಸ್ಥಳಕ್ಕೆ ಮಲ್ಪೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇಂದು ಮುಂಜಾನೆ 8.30 ರ ವೇಳೆಯಲ್ಲಿ ಘಟನೆ ನಡೆದಿದೆ. ಮಾಸ್ಕ್ ಹಾಕಿಕೊಂಡು ಬಂದು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಮೊದಲು ಮಹಿಳೆ ಹಾಗೂ ಮಕ್ಕಳಾದ ಹಸಿನಾ, ಅಫಫಾನ್, ಐನಾಜ್ಗೆ ಚಾಕುವಿನಿಂದ ಇರಿಯಲಾಗಿದೆ. ಸದ್ದು ಕೇಳಿ ಆಟವಾಡುತ್ತಿದ್ದ ಆಸೀಮ್ ಹೊರ ಬರುತ್ತಿದ್ದಂತೆ ಇರಿದು ಕೊಂದಿದ್ದಾರೆ.
ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ಭರವಸೆ: ಗೃಹ ಸಚಿವರ ಆಪ್ತನೆಂದು ಹೇಳಿ ಲಕ್ಷಾಂತರ ರೂ ವಂಚನೆ
ಬೊಬ್ಬೆ ಕೇಳಿ ಹೊರಗಡೆ ಬಂದ ಪಕ್ಕದ ಮನೆ ಯುವತಿಯನ್ನು ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮನೆಯೊಳಗಿದ್ದ ಅತ್ತೆಗೂ ತೀವ್ರ ತರದ ಗಾಯಗಳಾಗಿವೆ. ಪತಿ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸ್ಥಳಕ್ಕೆ ಎಸ್.ಪಿ ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಉಡುಪಿ ಎಸ್ಪಿ ಡಾ.ಅರುಣ್ ಹೇಳಿದ್ದಿಷ್ಟು
ಉಡುಪಿ ಎಸ್ಪಿ ಡಾ.ಅರುಣ್ ಹೇಳಿಕೆ ನೀಡಿದ್ದು, ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಲೆ ಮಾಡಲಾಗಿದೆ. ಇನ್ನೊಬ್ಬರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಹಸೀನಾ ಮತ್ತವರ ಮೂವರು ಮಕ್ಕಳನ್ನು ಕೊಲೆ ಮಾಡಲಾಗಿದೆ. ನಾವು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದೇವೆ. ತನಿಖೆ ಮಾಡಿ ಶೀಘ್ರ ಇದರ ಹಿಂದಿನ ಕಾರಣ ಪತ್ತೆ ಹಚ್ಚುತ್ತೇವೆ.
ಮನೆಯೊಳಗೆ ಯಾವುದೇ ಸೊತ್ತುಗಳು ಕಳವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ನಮಗೆ ಮಾಹಿತಿ ಬಂತು. ತಕ್ಷಣ ಬಂದು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದೇವೆ. ಕೊಲೆಗೆ ಏನು ಕಾರಣ ಎಂದು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಯುವಕನ ಬರ್ಬರ ಹತ್ಯೆ
ಬೀದರ್: ಬೈಕ್ ಅಡ್ಡ ಗಟ್ಟಿ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಬೀದರ್ ತಾಲೂಕಿನ ಅಲಿಯಂಬರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಮೀತ್ ಮಾನಾಜಿ (35) ಕೊಲೆಯಾದ ಯುವಕ. ರಾತ್ರಿ 9:30 ಸುಮಾರಿಗೆ ಬೈಕ್ ತಡೆದು ಕೊಲೆ ಮಾಡಲಾಗಿದೆ. ಮೃತ ಯುವಕ ಅಮೀತ್, ಬೀದರ್ ತಾಲೂಕಿನ ವಿಳಾಸಪೂರ ನಿವಾಸಿ. ಜನವಾಡ ಪೋಲಿಸರಿಂದ ಪರಿಶೀಲನೆ ಮಾಡಿದ್ದು, ಜನವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಯುವಕ ಸಾವು
ಬೆಂಗಳೂರು: ಬಹುಮಹಡಿ ಕಟ್ಟಡದಿಂದ ಬಿದ್ದು ಯುವಕ ಸಾವನ್ನಪ್ಪಿರುವಂತಹ ಘಟನೆ ರಾಜರಾಜೇಶ್ವರಿ ನಗರದ ಹಲಗೇವಡೆರಹಳ್ಳಿಯಲ್ಲಿ ತಡರಾತ್ರಿ ನಡೆದಿದೆ. ಶಿವಮೊಗ್ಗ ಮೂಲದ ಮದನ್ ಶೆಟ್ಟಿ(25) ಮೃತ ದುರ್ದೈವಿ. ಸ್ನೇಹಿತರ ನಡುವೆ ಗಲಾಟೆ ಬಳಿಕ ಮದನ್ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಸ್ನೇಹಿತನ ಫೋನ್ ನಂಬರ್ ಬರೆದಿಟ್ಟಿದ್ದಾನೆ.
ಇದನ್ನೂ ಓದಿ: ಕೆಲಸ ಮುಗಿಸಿ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ: ಏಕಾಏಕಿ ಎರಗಿ ದೊಚಿದ ಖದೀಮರು
ಮದನ್ ಜೊತೆ ಬಾಡಿಗೆ ಮನೆಯಲ್ಲಿದ್ದ ತೇಜು, ಇನ್ನೊಬ್ಬ ಸ್ನೇಹಿತ. ತಾನು ವಾಸವಿದ್ದ ಕಟ್ಟಡದ 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಮೃತ ಮದನ್ ಮಲ್ಲೇಶ್ವರಂ ಅರಣ್ಯ ಭವನದಲ್ಲಿ ಚಾಲಕನಾಗಿದ್ದ. ಸ್ಥಳಕ್ಕೆ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:47 am, Sun, 12 November 23