ಉಡುಪಿ, ಡಿಸೆಂಬರ್ 24: ನಾಡಿನ ಕಂಬಳ ಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರಾವಳಿಯ ಪ್ರತಿ ಕಂಬಳಕ್ಕೂ 5 ಲಕ್ಷ ರೂಪಾಯಿ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಬೇಡಿಕೆ ಇಟ್ಟಿದ್ದರೂ ಕೂಡ ಸರ್ಕಾರ ಕಳೆದ ವರ್ಷ ಕಂಬಳಕ್ಕೆ ಅನುದಾನ ನೀಡಿರಲಿಲ್ಲ. ಈ ಬಗ್ಗೆ ಕಂಬಳಪ್ರಿಯರು ಬೇಸರ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲೂ ಕರಾವಳಿಯ ಶಾಸಕರು ಬೇಡಿಕೆ ಸಲ್ಲಿಸಿದ್ದರು. ಸ್ವತಃ ಸ್ಪೀಕರ್ ಯುಟಿ ಖಾದರ್ ಕಂಬಳ ಪರ ಬ್ಯಾಟಿಂಗ್ ಮಾಡಿದ್ದರು. ಸರ್ಕಾರ ನೆರವು ಕೊಡದಿದ್ದರೆ ನಾವೇ ಹಣ ಸಂಗ್ರಹಿಸಿ ಕಂಬಳ ಮಾಡಲು ಗೊತ್ತು ಎಂದು ಚಾಟಿ ಬೀಸಿದ್ದರು.
ಯುಟಿ ಖಾದರ್ ಚಾಟಿ ಬೀಸಿದ ಬೆನ್ನಲ್ಲೇ ಕಂಬಳಕ್ಕೆ ಅನುದಾನ ಬಿಡುಗಡೆಗೆ ಸರ್ಕಾರ ಆದೇಶ ಮಾಡಿದೆ. ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಪ್ರವಾಸೋದ್ಯಮ ಸಚಿವ ಹೆಚ್ಕೆ ಪಾಟೀಲ್ ಆದೇಶ ಹೊರಡಿಸಿದ್ದಾರೆ. 2024- 25 ನೇ ಸಾಲಿನ 24 ಜೋಡು ಕರೆ ಕಂಬಳಗಳಿಗೆ ತಲಾ 5 ಲಕ್ಷ ರೂ. ಘೋಷಣೆಯಾಗಿದೆ.
ಕಂಬಳಕ್ಕೆ ಬೆಂಬಲವಾಗಿ ನಿಂತ ರಾಜ್ಯ ಸರ್ಕಾರಕ್ಕೆ ಕಂಬಳ ಸಮಿತಿ ಅಭಿನಂದನೆ ಸಲ್ಲಿಸಿದೆ. ಅದರೆ, ಪ್ರಮುಖ ಬೇಡಿಕೆ ಈಡೇರಿದ ಬೆನ್ನಲ್ಲೇ ಬಾಕಿ ಉಳಿದ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಕೇಳಿ ಬಂದಿದೆ.
ಕರವಾಳಿಯಲ್ಲಿ ಒಟ್ಟು 25 ಕಂಬಳಗಳು ನಡೆಯುತ್ತವೆ. ಪ್ರತಿ ಕಂಬಳವನ್ನು ನೇರವಾಗಿ ಒಂದು ಲಕ್ಷ ಜನ ವೀಕ್ಷಿಸುತ್ತಾರೆ. 2020 – 21ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ 10 ಕಂಬಳಗಳಿಗೆ ತಲಾ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ನಡೆಯುವ 53 ಸಾಂಪ್ರದಾಯಿಕ ಕಂಬಳಗಳಿಗೂ ಅನುದಾನ ಕೋರಲಾಗಿತ್ತು.
ಕಳೆದ ವರ್ಷ 50 ಲಕ್ಷ ರೂ. ಘೋಷಿಸಿದ್ದ ಸರ್ಕಾರ ನಂತರ ಅನುದಾನ ನೀಡಿರಲಿಲ್ಲ. ಹಾಗಾಗಿ ಘೋಷಣೆಯಾದ 50 ಲಕ್ಷ ರೂ. ಹಣ ತುರ್ತಾಗಿ ಬಿಡುಗಡೆ ಮಾಡುವಂತೆ ಕಂಬಳ ಸಮಿತಿ ಒತ್ತಾಯಿಸಿದೆ. ಅದಲ್ಲದೆ ಸಾಂಪ್ರದಾಯಿಕ ಕಂಬಳಗಳಿಗೂ 50 ಲಕ್ಷ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಜ 17 ರಿಂದ 23ರವರೆಗೆ ಕರ್ನಾಟಕ ಕ್ರೀಡಾಕೂಟ-2025: ಲಾಂಛನ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಕರಾವಳಿಯ ನಂತರ ಬೆಂಗಳೂರಿನಲ್ಲೂ ಕಂಬಳ ಸದ್ದು ಮಾಡಿದೆ. ಆದರೆ, ತುಳುನಾಡ ಜನಪದೀಯ ಹಿನ್ನಲೆಯ ಕಂಬಳ ಉಳಿದು ಬೆಳೆಯ ಬೇಕಾದರೆ ಕಂಬಳ ಪ್ರೀಯರ ಪ್ರೋತ್ಸಾಹ ಜೊತೆಗೆ ಜೊತೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನೆರವು ಕೂಡ ಅಗತ್ಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ