ಭೂತಾರಾಧನೆ ಮೂಢನಂಬಿಕೆ ಎಂದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಿರುದ್ಧ ಹಿಂದೂ ಜಾಗರಣ ವೇದಿಕೆ ದೂರು
ತುಳುನಾಡಿನ ಭೂತಾರಾಧನೆ ಮೂಢನಂಬಿಕೆ ಎಂದಿರುವ ಬಿ.ಟಿ ಲಲಿತಾ ನಾಯಕ್ ವಿರುದ್ಧ ಉಡುಪಿ ನಗರ ಠಾಣೆಗೆ ಹಿಂದೂ ಜಾಗರಣ ವೇದಿಕೆ ದೂರು ನೀಡಿದೆ.
ಉಡುಪಿ: ತುಳುನಾಡಿನ ಭೂತಾರಾಧನೆ ಮೂಢನಂಬಿಕೆ ಎಂದು ಸಾಹಿತಿ, ಚಿಂತಕಿ, ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ (BT Lalitha Nayak) ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿಚಾರವಾಗಿ ಉಡುಪಿ ನಗರ ಠಾಣೆಗೆ ಹಿಂದೂ ಜಾಗರಣ ವೇದಿಕೆ ಬಿ.ಟಿ.ಲಲಿತಾ ನಾಯಕ್ ವಿರುದ್ಧ (complaint) ದೂರು ನೀಡಿದೆ. ತುಳುನಾಡಿನ ಕೋಟ್ಯಾಂತರ ಜನರ ಭಾವನೆಗೆ ಧಕ್ಕೆಯಾಗಿದೆ. ದೈವಾರಾಧಕರನ್ನು ಬಿ.ಟಿ ಲಲಿತಾ ನಾಯಕ್ ಹಿಯಾಳಿಸಿದ್ದಾರೆ. ದೈವಾರಾಧನೆಯ ಬಗ್ಗೆ ಬಹಳ ಕೀಳಾಗಿ ಮಾತನಾಡಿದ್ದು, ಇದು ನನ್ನ ಮನಸ್ಸಿಗೆ ಧಕ್ಕೆಯಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಉಮೇಶ್ ಪಕ್ಕಲು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅವರ ಹೇಳಿಕೆಯಿಂದ ಧಾರ್ಮಿಕ ನಂಬಿಕೆ ಮತ್ತು ಭಾವನೆಗೆ ಘಾಸಿಯಾಗಿದೆ. ಮೂರು ವರ್ಷ ಶಿಕ್ಷೆ, ದಂಡ ವಿಧಿಸಬೇಕು. ಭಾರತೀಯ ದಂಡಸಂಹಿತೆ ಪ್ರಕಾರ ಧಾರ್ಮಿಕ ಭಾವನೆಗೆ ಧಕ್ಕೆ ನಿಯಮದಡಿ (295 ಎ) ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ದೈವ ನರ್ತಕರ ಮಾಸಾಶನಕ್ಕೆ ಬಿ.ಟಿ.ಲಲಿತಾ ನಾಯಕ್ ವಿರೋಧ
ರಾಜ್ಯ ಸರ್ಕಾರ ದೈವ ನರ್ತಕರಿಗೆ ಮಾಸಾಶನ ನೀಡಬಾರದು. ಯಾರೋ ನೋವಿನಿಂದ ಕೂಗಿದವರನ್ನು ದೇವರು ಎಂದರು. ಈಗಿರುವ ಎಲ್ಲಾ ದೇವರು ಮನುಷ್ಯರೇ. ಇದೊಂದು ಸುಳ್ಳು ಸತ್ಯವನ್ನು ಜನರ ಮುಂದೆ ಇಡುವ ಕೆಲಸ ಮಾಡಬೇಕು. 2 ಸಾವಿರ ರೂ. ಮಾಸಾಶನ ನೀಡುವ ಬದಲು ಉದ್ಯೋಗ ನೀಡಿ. ಮಾನವ ಶ್ರಮವನ್ನು ಸರ್ಕಾರ ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ದೇವರು ಅಂತಾ ಕುಣಿದಾಗ, ಅದಕ್ಕೆ ಎರಡು ಸಾವಿರ ಕೊಟ್ಟರೆ ಅದು ಸಾಲಲ್ಲ ಮುಂದೆ ಆತ ಮೌಡ್ಯವನ್ನು ಬಿತ್ತುತ್ತಾನೆ. ಸಾರ್ವಜನಿಕ ಹಣವನ್ನು ಪೋಲು ಮಾಡಬಾರದು. ಅರ್ಚಕರು ಹಾಗೂ ಮೌಲ್ವಿಗಳಿಗೂ ಮಾಸಾಶನ ನೀಡಬಾರದು ಎಂದು ಈ ಹಿಂದೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದರು.
ಬಿ.ಟಿ.ಲಲಿತಾ ನಾಯಕ್ ಅವರಿಗೆ ಕೊಲೆ ಬೆದರಿಕೆ ಪತ್ರ
ಬಿ.ಟಿ.ಲಲಿತಾ ನಾಯಕ್ರವರ ಸಂಜಯನಗರ ನಿವಾಸದ ವಿಳಾಸಕ್ಕೆ ಕೊಲೆ ಬೆದರಿಕೆ ಪತ್ರ ಬರೆಯಲಾಗಿತ್ತು. ಬೆದರಿಕೆ ಪತ್ರ ಹಿನ್ನೆಲೆ ಲಲಿತಾ ನಾಯಕ್ ನಿವಾಸಕ್ಕೆ ಸಂಜಯ ನಗರ ಪೊಲೀಸರ ಭೇಟಿ ನೀಡಿ, ಪತ್ರದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. 2015 ರಲ್ಲೂ ಕೂಡ ಇದೇ ರೀತಿ ಬೆದರಿಕೆ ಪತ್ರ ಬರೆಯಲಾಗಿತ್ತು. ಚಿಕ್ಕಮಗಳೂರಿನಿಂದ ಬೆದರಿಕೆ ಪತ್ರ ಬಂದಿದ್ದು, ಆಗ ಬಿ.ಟಿ.ಲಲಿತಾ ನಾಯಕ್ ಸಂಜಯ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಆರೋಪಿ ಪತ್ತೆಯಾಗಿರಲಿಲ್ಲ. ಹೀಗಾಗಿ ಕೋರ್ಟ್ಗೆ ಆರೋಪಿ ಸಿಕ್ಕಿಲ್ಲ ಎಂದು ಸಂಜಯ್ ನಗರ ಪೊಲೀಸರು ಸಿ ರಿಪೋರ್ಟ್ ಸಲ್ಲಿಕೆ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:16 pm, Sat, 12 November 22