ಉಡುಪಿ: “ಕಾಂತಾರ” (kantara) ಈ ಒಂದು ಸಿನಿಮಾ ಸದ್ಯ ಅಂತಾರಾಷ್ಟೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ತೋರಿಸಿರುವ ಭೂತಾರಾಧನೆಯ ಕುರಿತಾಗಿ ಹಲವರು ಪರ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿಯೂ ನಟ ಚೇತನ್ (Chetan) ದೇವದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಉಡುಪಿಯಲ್ಲಿ ಹಿರಿಯ ದೈವಾರಾಧಕ ಕುಮಾರ ಪಂಪದ ಪ್ರತಿಕ್ರಿಯಿಸಿದ್ದು, ನೀಡಿದ್ದು, ನಟರಿಗೆ ನಟನೆ ಮಾಡಲು ಗೊತ್ತಿದೆ. ನಾವು ದೈವಾರಾಧಕರು ನಮಗೆ ನಟಿಸಲು ಗೊತ್ತಿಲ್ಲ. ತಲೆಮಾರುಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆ ಕುರಿತ ಹಿನ್ನೆಲೆ ದಾಖಲೆ ನಮ್ಮಲ್ಲಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತಾಡೋದು ತಪ್ಪು. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು. ನಮ್ಮ ನೆಲ, ಕುಲ ಆಚರಣೆ ಬಗ್ಗೆ ಮಾತಾಡುವ ಜ್ಞಾನ ಅವರಿಗೆ ಇಲ್ಲ ಎಂದು ತಿರುಗೇಟು ನೀಡಿದರು.
ನಾವು ನಂಬಿಕೊಂಡ ಸತ್ಯದ ಮೂಲಕ ಚೇತನ್ಗೆ ಪ್ರತಿಕ್ರಿಯೆ ಕೊಡುತ್ತೇವೆ. ನಟ ಚೇತನ್ ಬಹಳ ದೊಡ್ಡ ಜ್ಞಾನಿ ಆಗಿರಬಹುದು.
ನಮ್ಮ ನೆಲ, ನಮ್ಮ ಕುಲ, ನಮ್ಮ ಆಚರಣೆಯ ಬಗ್ಗೆ ಮಾತನಾಡುವ ಜ್ಞಾನ ಅವರಿಗೆ ಇಲ್ಲ. ವ್ಯಕ್ತಿಗತವಾಗಿ ಅವರಿಗೆ ನಾವು ಉತ್ತರ ಕೊಡುವುದಿಲ್ಲ. ಸಂಸ್ಕೃತಿಯ ಅವಹೇಳನ ಆದಾಗೆಲ್ಲ ಪಂಜುರ್ಲಿ ದೈವದ ಮುಂದೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಕುಮಾರ ಪಂಪದ ಹೇಳಿದರು. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುವುದಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ರಿಷಬ್ ಶೆಟ್ಟಿ ಅವರು ಹೇಳಿರುವುದು ನಿಜವಲ್ಲ ಎಂದು ಚೇತನ್ ಅಭಿಪ್ರಾಯಪಟ್ಟಿದ್ದರು. ಈ ಸಂಬಂಧ ಹಿಂದೂ ಜಾಗರಣಾ ವೇದಿಕೆಯವರು ಕಾರ್ಕಳ ಪೊಲೀಸರ ಬಳಿ ದೂರು ದಾಖಲು ಮಾಡಿದ್ದಾರೆ.
ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಲ್ಲ ಎಂಬ ಹೇಳಿಕೆ; ನಟ ಚೇತನ್ ವಿರುದ್ಧ ದೂರು ದಾಖಲು
ಕನ್ನಡ ಚಿತ್ರರಂಗದಿಂದ ನಟ ಚೇತನ್ ಬಹಿಷ್ಕರಿಸುವಂತೆ ಒತ್ತಾಯ
‘ಕಾಂತಾರ’ ಚಿತ್ರದ ಕುರಿತು ಹೇಳಿಕೆ ವಿಚಾರವಾಗಿ ಕನ್ನಡ ಚಿತ್ರರಂಗದಿಂದ ನಟ ಚೇತನ್ ಬಹಿಷ್ಕರಿಸುವಂತೆ ಫಿಲ್ಮ್ ಚೇಂಬರ್ ಅಧ್ಯಕ್ಷರಿಗೆ ರಾಷ್ಟ್ರೀಯ ಕೇಸರಿ ಒಕ್ಕೂಟ ಮನವಿ ಮಾಡಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ಗೆ ಮನವಿ ಮಾಡಿದ್ದು, ನಾಳೆ ನಡೆಯುವ ಪದಾಧಿಕಾರಿಗಳ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುವುದು. ನಟ ಚೇತನ್ರನ್ನು ಫಿಲ್ಮ್ ಚೇಂಬರ್ಗೆ ಕರೆಸಿ ಬುದ್ಧಿವಾದ ಹೇಳುತ್ತೇವೆ ಎಂದು ಹಿಂದೂ ಕಾರ್ಯಕರ್ತರಿಗೆ ಬಾ.ಮಾ.ಹರೀಶ್ ಭರವಸೆ ನೀಡಿದರು.
ಧರ್ಮದ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ: ಆರಗ
ಇನ್ನು ಗೃಹ ಸಚಿವ ಆರಗ ಜ್ಙಾನೇಂದ್ರ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ಇದು ಸಿನಿಮಾಗೆ ಸಂಬಂಧಿಸಿದ ವಿಚಾರ. ಧರ್ಮದ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ. ಇಂತಹ ಮಾತನ್ನ ಬಿಟ್ಟು ಸಿನಿಮಾ ಬಗ್ಗೆ ವಿಮರ್ಶೆ ಮಾಡಲಿ ಎಂದು ಹೇಳಿದರು. ನಟ ಚೇತನ್ ಹೇಳಿಕೆ ನಾನು ಒಪ್ಪುವುದಿಲ್ಲ. ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ, ಮಾತಾಡಿಕೊಂಡು ಇರಲಿ. ‘ಕಾಂತಾರ’ ಸಿನಿಮಾ ನೋಡಿದ್ದೇನೆ, ತುಂಬಾ ಚೆನ್ನಾಗಿದೆ. ಸಿನಿಮಾದಲ್ಲಿ ಮಲೆನಾಡು ಭಾಗದ ಸೊಗಡನ್ನು ತೋರಿಸಿದ್ದಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:16 pm, Thu, 20 October 22