ದೇಶವನ್ನು ಹಿಂದೂ ರಾಷ್ಟ್ರವೆನ್ನುವುದು ತಪ್ಪೆಂದರೆ, ರಾಜ್ಯವನ್ನು ಕರ್ನಾಟಕವೆಂದು ಕರೆಯುವುದು ತಪ್ಪಾಗುತ್ತದೆ: ಪೇಜಾವರ ಶ್ರೀ
ಶ್ರೀರಾಮಮಂದಿರ ಉಳಿಯಬೇಕಾದರೆ ಭಾರತ ಹಿಂದೂ ರಾಷ್ಟ್ರ ಆಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಸಮರ್ಥಿಸಿಕೊಂಡ ಶ್ರೀಗಳು, ಕನ್ನಡಿಗರೇ ಬಹುಸಂಖ್ಯಾತರಿರುವ ರಾಜ್ಯವನ್ನು ಕರ್ನಾಟಕ ಎಂದು ಕರೆಯಬಹುದಾದರೆ, ಹಿಂದೂಗಳು ಬಹುಸಂಖ್ಯಾತರಿರುವ ಭಾರತವನ್ನು ಹಿಂದೂ ರಾಷ್ಟ್ರ ಎಂದು ಯಾಕೆ ಕರೆಯಬಾರದು ಎಂದು ಪ್ರಶ್ನಿಸಿದ್ದಾರೆ.
ಉಡುಪಿ, ಡಿ.19: ಶ್ರೀರಾಮಮಂದಿರ ಉಳಿಯಬೇಕಾದರೆ ಭಾರತ ಹಿಂದೂ ರಾಷ್ಟ್ರ ಆಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Tirtha Swamiji) ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಸಮರ್ಥಿಸಿಕೊಂಡ ಶ್ರೀಗಳು, ಕನ್ನಡಿಗರೇ ಬಹುಸಂಖ್ಯಾತರಿರುವ ರಾಜ್ಯವನ್ನು ಕರ್ನಾಟಕ ಎಂದು ಕರೆಯಬಹುದಾದರೆ, ಹಿಂದೂಗಳು ಬಹುಸಂಖ್ಯಾತರಿರುವ ಭಾರತವನ್ನು ಹಿಂದೂ ರಾಷ್ಟ್ರ (Hindu Nation) ಎಂದು ಯಾಕೆ ಕರೆಯಬಾರದು ಎಂದು ಪ್ರಶ್ನಿಸಿದ್ದಾರೆ.
ಅಯೋಧ್ಯತೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಹತ್ತಿರದಲ್ಲಿ ಇರುವಾಗಲೇ ಹಿಂದೂ ರಾಷ್ಟ್ರದ ವಿಚಾರ ಚರ್ಚೆಯಾಗುತ್ತಿರುವ ಬಗ್ಗೆ ಟಿವಿ9 ಜೊತೆ ರಾಮಜನ್ಮಭೂಮಿ ಟ್ರಸ್ಟ್ ಸದಸ್ಯ ಪೇಜಾವರ ಶ್ರೀ ಮಾತನಾಡಿದರು.
ಕರ್ನಾಟಕ ಕನ್ನಡ ಭಾಷಿಗರು ಬಹುಸಂಖ್ಯಾತರಾಗಿರುವ ರಾಜ್ಯ. ಕನ್ನಡ ಭಾಷೆ ಹುಟ್ಟಿ ಬೆಳೆದ ನೆಲ. ಇಲ್ಲಿ ಕನ್ನಡಿಗರು ಮಾತ್ರ ಅಲ್ಲ, ಎಲ್ಲಾ ಭಾಷಿಗರು ಇದ್ದಾರೆ ಎಂದ ಮಾತ್ರಕ್ಕೆ ಇದನ್ನು ಕರ್ನಾಟಕ ರಾಜ್ಯ ಹೇಳಬೇಕಾ ಅಥವಾ ಬೇಡವಾ? ಕನ್ನಡ ಭಾಷೆ ಹುಟ್ಟಿದ ನೆಲೆ ಎಂದ ಮಾತ್ರಕ್ಕೆ ಇದನ್ನು ಮೈಸೂರು ರಾಜ್ಯ ಇದ್ದದ್ದನ್ನು ತೆಗೆದು ಕರ್ನಾಟಕ ರಾಜ್ಯ ಕರೆಯಲಾಗಿತ್ತು ಎಂದರು.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಎಲ್ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಗೈರಾಗುವ ಸಾಧ್ಯತೆ
ಅಲ್ಲದೆ, ಕನ್ನಡ ಭಾಷಿಗರು ಬಹುಸಂಖ್ಯಾತರಿರುವ ರಾಜ್ಯವನ್ನು ಕರ್ನಾಟಕ ಎಂದು ಕರೆಯುದಾದರೆ, ಹಿಂದೂ ಸಂಸ್ಕೃತಿ ಹುಟ್ಟಿದ ನೆಲ, ಹಿಂದೂಗಳು ಬಹುಸಂಖ್ಯಾತರಾಗಿರುವ ದೇಶ ಹಿಂದೂಗಳಾದ ನಾವು ಹಿಂದೂ ರಾಷ್ಟ್ರ ಕರೆಯುದರಲ್ಲಿ ತಪ್ಪೇನಿದೆ. ಇದನ್ನು ತಪ್ಪು ಅಂತ ಹೇಳುವುದಾದರೆ ಕರ್ನಾಟಕ ರಾಜ್ಯವನ್ನು ಕರ್ನಾಟಕ ಹೇಳುವುದು ತಪ್ಪು ಎಂದು ಆಗುತ್ತದೆ ಎಂದರು.
ಮೋಕ್ಷದಾಯಕ ಕ್ಷೇತ್ರಗಳು ವಿಮೋಚನೆಗೊಳ್ಳಬೇಕು: ಪೇಜಾವರ ಶ್ರೀ
ಮುಸ್ಲಿಮರಿಗೆ ಮೆಕ್ಕ, ಕ್ರಿಶ್ಚಿಯನ್ನರಿಗೆ ಜೆರುಸುಲೆಂ ಇರುವಂತೆ, ಹಿಂದೂಗಳು ನಿತ್ಯಪಠಿಸುವ ಮೋಕ್ಷದಾಯಕ ಕ್ಷೇತ್ರಗಳು ವಿಮೋಚನೆಗೊಳ್ಳಬೇಕು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಧಾರ್ಮಿಕ ಕ್ಷೇತ್ರಗಳು ಕೂಡ ವಿಮೋಚನೆಗೊಳ್ಳಬೇಕಿತ್ತು. ಆದರೆ ನಮ್ಮ ಧಾರ್ಮಿಕ ಕ್ಷೇತ್ರಗಳು ಹಾಗೆಯೇ ಬಾಕಿ ಉಳಿದಿವೆ. ಸ್ವಾತಂತ್ರ್ಯ ದೊರಕಿ 75 ವರ್ಷದ ಮೇಲಾದರೂ ವಿಮೋಚನೆಗೊಳ್ಳಲಿ ಎಂದರು.
ನಮ್ಮ ಶ್ರದ್ಧಾ ಕೇಂದ್ರ ಮತ್ತೆ ನಮಗೆ ಮರಳಿ ಸಿಗಬೇಕು. ಅಯೋಧ್ಯೆಗೆ ವಿಚಾರದಲ್ಲಿ ಬಂದಿರುವ ತೀರ್ಪಿನಂತೆ ಕಾಶಿ ಮಥುರ ವಿಚಾರದಲ್ಲೂ ನ್ಯಾಯಾಲಯ ಅನುವು ಮಾಡಿಕೊಟ್ಟಿದೆ. ನ್ಯಾಯಾಲಯದ ಈ ನಡೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಗುರಿ ಮುಟ್ಟುವ ತನಕ ಈ ಕೆಲಸ ನಿಲ್ಲದಿರಲಿ. ನಾವ್ಯಾರು ಬಲತ್ಕಾರವಾಗಿ ಕ್ಷೇತ್ರವನ್ನು ತೆಗೆದುಕೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನಬದ್ಧವಾಗಿ ನಡೆದುಕೊಂಡಿದ್ದೇವೆ. ಎಲ್ಲರೂ ಇದನ್ನು ಬೆಂಬಲಿಸಬೇಕೆ ಹೊರತು ವಿರೋಧಿಸಬಾರದು ಎಂದರು.
ರಾಮಮಂದಿರ ನಿರ್ಮಾಣದಲ್ಲಿ ಕರ್ನಾಟಕದ ಪಾತ್ರ ವಿಚಾರವಾಗಿ ಮಾತನಾಡಿದ ಪೇಜಾವರ ಶ್ರೀ, ಕರ್ನಾಟಕ ರಾಜ್ಯದಿಂದಲೂ ಅನೇಕ ಸೇವೆಗಳು ಸಲ್ಲುತ್ತಿವೆ. ಮಂದಿರದ ವೇದಿಕೆ ನಿರ್ಮಾಣಕ್ಕೆ ಕರ್ನಾಟಕದ ಕಲ್ಲುಗಳು ಬಳಕೆಯಾಗಿವೆ. ಅನೇಕ ಇಂಜಿನಿಯರ್ಗಳು ಸಹಾಯಕರು ಕರ್ನಾಟಕದವರು ಇದ್ದಾರೆ. ಕರ್ನಾಟಕದವರು ಬೃಹತ್ ಗಾತ್ರದ ಗಂಟೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ ಎಂದರು.
ಶ್ರೀಗಳ ಅಭಿಪ್ರಾಯ ಸಿದ್ದರಾಮಯ್ಯ ವಿರೋಧಿಸುವುದು ಸರಿಯಲ್ಲ: ಪ್ರಮೋದ್ ಮಧ್ವರಾಜ್
ಪೇಜಾವರ ಶ್ರೀಗಳ ಹಿಂದೂ ರಾಷ್ಟ್ರದ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದರು. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಈ ದೇಶದಲ್ಲಿ ಬಹುಸಂಖ್ಯಾತರು ಹಿಂದೂಗಳೇ ಇದ್ದಾರೆ. ಪೇಜಾವರ ಶ್ರೀಗಳು ಹಿಂದೂ ಸಮಾಜದ ಮಾರ್ಗದರ್ಶಕರು. ಸಂವಿಧಾನದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ. ಶ್ರೀಗಳ ಅಭಿಪ್ರಾಯಕ್ಕೆ ಸಿದ್ದರಾಮಯ್ಯ ವಿರೋಧಿಸುವುದು ಸರಿಯಲ್ಲ. ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಹಾಗಾದರೆ ಸಿದ್ದರಾಮಯ್ಯ ಹೇಳಿದ್ದೇನು? ಶ್ರೀರಾಮಮಂದಿರ ಉಳಿಯಬೇಕಾದರೆ ಹಿಂದೂ ರಾಷ್ಟ್ರ ಆಗಬೇಕು’ ಎಂಬ ಉಡುಪಿ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಈ ದೇಶ ಹಿಂದೂ ರಾಷ್ಟ್ರ ಆಗಬೇಕೆಂಬುದು ಬಿಜೆಪಿಯವರ ಸಿದ್ಧಾಂತ. ನಮ್ಮ ದೇಶ ಹಿಂದೂಗಳ ರಾಷ್ಟ್ರ ಅಲ್ಲ, ಇದು ಬಹುತ್ವದ ದೇಶವಾಗಿದೆ. ಕೇವಲ ಹಿಂದೂ ರಾಷ್ಟ್ರವನ್ನು ಮಾಡಲು ಆಗುವುದಿಲ್ಲ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:08 pm, Tue, 19 December 23