ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಎಲ್ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಗೈರಾಗುವ ಸಾಧ್ಯತೆ
2024 ರ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಮತ್ತು ಜನವರಿ 24 ರಿಂದ ದೇವಾಲಯವು ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಅಯೋಧ್ಯೆ, ಡಿಸೆಂಬರ್ 19: ಅಯೋಧ್ಯೆ ರಾಮ ಮಂದಿರ (Ayodhya Ram Mandir) ಆಂದೋಲನವನ್ನು 90ರ ದಶಕದಲ್ಲಿ ಆರಂಭಿಸಿದ ಬಿಜೆಪಿಯ ಹಿರಿಯರಾದ ಲಾಲ್ ಕೃಷ್ಣ ಅಡ್ವಾಣಿ (LK Advani) ಮತ್ತು ಮುರಳಿ ಮನೋಹರ ಜೋಶಿ (Murli Manohar Joshi) ಅವರು ಅಯೋಧ್ಯೆಯಲ್ಲಿ ಜನವರಿಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಹಾಜರಾಗುವುದು ಅನುಮಾನ ಎನ್ನಲಾಗಿದೆ. ವಯಸ್ಸು ಮತ್ತು ಆರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಹಾಜರಾಗದಂತೆ ದೇವಸ್ಥಾನದ ಟ್ರಸ್ಟ್ ಅವರಿಗೆ ಮನವಿ ಮಾಡಿದೆ ಎನ್ನಲಾಗಿದೆ.
ಇಬ್ಬರೂ ಬಹಳ ಹಿರಿಯರು ಮತ್ತು ಅವರ ವಯಸ್ಸನ್ನು ಪರಿಗಣಿಸಿ, ಅವರನ್ನು ಬರದಂತೆ ವಿನಂತಿಸಲಾಯಿತು. ನಮ್ಮ ವಿನಂತಿಯನ್ನು ಇಬ್ಬರೂ ಒಪ್ಪಿಕೊಂಡರು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಜನವರಿ 22 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರಲಿದ್ದಾರೆ.
ಜನವರಿ 15 ರೊಳಗೆ ಸಿದ್ಧತೆಗಳು ಪೂರ್ಣಗೊಳ್ಳಲಿವೆ ಮತ್ತು “ಪ್ರಾಣ ಪ್ರತಿಷ್ಠೆ” ಪೂಜೆಯು ಜನವರಿ 16 ರಂದು ಪ್ರಾರಂಭವಾಗಲಿದೆ. ಇದು ಜನವರಿ 22 ರವರೆಗೆ ನಡೆಯಲಿದೆ ಎಂದು ರೈ ತಿಳಿಸಿದ್ದಾರೆ. ಆದರೆ, ಆರೋಗ್ಯ ಮತ್ತು ವಯಸ್ಸಿನ ಕಾಳಜಿಯಿಂದಾಗಿ, ಅಡ್ವಾಣಿ (96), ಮತ್ತು ಜೋಶಿ (ಅವರು ಮುಂದಿನ ತಿಂಗಳು 90 ವರ್ಷಕ್ಕೆ ಕಾಲಿಡುತ್ತಾರೆ) ಅವರು ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಗಣ್ಯರು
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರನ್ನು ಖುದ್ದು ಆಹ್ವಾನಿಸಲು ಮೂವರು ಸದಸ್ಯರ ತಂಡ ರಚಿಸಲಾಗಿದೆ. ಸಮಾರಂಭದಲ್ಲಿ ಆರು ಪ್ರಾಚೀನ ಮಠಗಳ ಶಂಕರಾಚಾರ್ಯರು, ಸರಿಸುಮಾರು 150 ಋಷಿಗಳು, 4,000 ಸಂತರು ಮತ್ತು 2,200 ಇತರ ಗಣ್ಯ ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ರೈ ಹೇಳಿದ್ದಾರೆ.
ವಾರಣಾಸಿಯ ಕಾಶಿ ವಿಶ್ವನಾಥ ಮತ್ತು ಜಮ್ಮುವಿನ ವೈಷ್ಣೋದೇವಿ ದೇಗುಲದಂತಹ ಪ್ರಮುಖ ದೇವಾಲಯಗಳ ಮುಖ್ಯಸ್ಥರಿಗೆ ಆಮಂತ್ರಣಗಳನ್ನು ನೀಡಲಾಗಿದೆ. ಇದಲ್ಲದೆ, ವಿವಿಧ ಧಾರ್ಮಿಕ ಮತ್ತು ಸಾಂವಿಧಾನಿಕ ಸಂಸ್ಥೆಗಳ ಪ್ರತಿನಿಧಿಗಳನ್ನು ಸಹ ಆಹ್ವಾನಿಸಲಾಗಿದೆ.
ಆಧ್ಯಾತ್ಮಿಕ ನಾಯಕ ದಲೈ ಲಾಮಾ, ಕೇರಳದ ಮಾತಾ ಅಮೃತಾನಂದಮಯಿ ಮತ್ತು ಯೋಗ ಗುರು ಬಾಬಾ ರಾಮ್‌ದೇವ್ ಸೇರಿದಂತೆ ಇತರ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ನಟರಾದ ರಜನಿಕಾಂತ್, ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ರಾಮಾಯಣದ ನಟ ಅರುಣ್ ಗೋವಿಲ್, ಚಲನಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್, ಮತ್ತು ಪ್ರಮುಖ ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಖ್ಯಾತ ಚಿತ್ರಕಲಾವಿದ ವಾಸುದೇವ್ ಕಾಮತ್, ಇಸ್ರೋ ನಿರ್ದೇಶಕ ನೀಲೇಶ್ ದೇಸಾಯಿ ಸಹ ಭಾಗವಹಿಸುವ ನಿರೀಕ್ಷೆಯಿದೆ.
ಸಾರ್ವಜನಿಕರಿಗೆ ಯಾವಾಗ ಮುಕ್ತವಾಗಲಿದೆ ರಾಮಮಂದಿರ?
ಜನವರಿ 24 ರಿಂದ ಮುಂದಿನ 48 ದಿನಗಳವರೆಗೆ ಹಿಂದೂ ಆಚರಣೆಗಳು ಮತ್ತು ಸಂಪ್ರದಾಯಗಳ ಪ್ರಕಾರ ‘ಮಂಡಲ ಪೂಜೆ’ ನಿಗದಿಪಡಿಸಲಾಗಿದೆ. ಜನವರಿ 23 ರಂದು ಭಕ್ತಾದಿಗಳಿಗೆ ದೇವಾಲಯವು ತೆರೆಯಲಿದೆ. ಅಯೋಧ್ಯೆಯ ಮೂರು ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಮಠಗಳು, ದೇವಾಲಯಗಳು ಮತ್ತು ಭಕ್ತರಿಗೆ ಮನೆಗಳು ನೀಡುವ 600 ಕೊಠಡಿಗಳೊಂದಿಗೆ ಸಾಕಷ್ಟು ವಸತಿ ಸೌಕರ್ಯ ಒದಗಿಸುವ ಬಗ್ಗೆ ರೈ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಮೊದಲ ಮಹಡಿಯ ನಿರ್ಮಾಣದ ಫೋಟೋ ಇಲ್ಲಿದೆ
ರಾಮ ಜನ್ಮಭೂಮಿ ಸಂಕೀರ್ಣದೊಳಗೆ ‘ರಾಮ್ ಕಥಾ ಕುಂಜ್’ ಕಾರಿಡಾರ್ ಅನ್ನು ನಿರ್ಮಿಸಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಯೋಧ್ಯೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರಿಡಾರ್ ಭಗವಾನ್ ರಾಮನ ಜೀವನದ 108 ಮಹತ್ವದ ಘಟನೆಗಳನ್ನು ವಿವರಿಸುವ ಕೋಷ್ಟಕವನ್ನು ಪ್ರದರ್ಶಿಸಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:11 am, Tue, 19 December 23