ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ಪ್ರಕರಣ: ಶಿಲ್ಪಿ ಬಂಧನ

| Updated By: ವಿವೇಕ ಬಿರಾದಾರ

Updated on: Nov 11, 2024 | 11:49 AM

Parashurama Theme Park: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಕಲಿ ಪ್ರತಿಮೆ ನಿರ್ಮಿಸಿದ ಆರೋಪದ ಮೇಲೆ ಶಿಲ್ಪಿ ಕೃಷ್ಣ ನಾಯಕ್ ಅವರನ್ನು ಪುದುಚೇರಿಯಲ್ಲಿ ಬಂಧಿಸಲಾಗಿದೆ. ಹಿತ್ತಾಳೆ ಮೂರ್ತಿಯ ಬದಲು ಫೈಬರ್ ಮೂರ್ತಿ ನಿರ್ಮಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಕ್​ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಕೂಡ ಅಮಾನತುಗೊಳಿಸಲಾಗಿತ್ತು.

ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ಪ್ರಕರಣ: ಶಿಲ್ಪಿ ಬಂಧನ
ಶಿಲ್ಪಿ ಕೃಷ್ಣ ನಾಯಕ್
Follow us on

ಉಡುಪಿ, ನವೆಂಬರ್​ 11: ಕಾರ್ಕಳ (Karkala) ಪರಶುರಾಮ ಥೀಮ್ ಪಾರ್ಕ್ (Parasurama Theme Park) ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಚಿನ ಮೂರ್ತಿ ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯಕ್​ನನ್ನು (45) ಕಾರ್ಕಳ ಪೊಲೀಸರು ಪುದುಚೇರಿಯ ಮಾಹೆಯಲ್ಲಿ ಬಂಧಿಸಿದ್ದಾರೆ. ಶಿಲ್ಪಿ ಕೃಷ್ಣ ನಾಯಕ್ ನಕಲಿ ಮೂರ್ತಿ ನಿರ್ಮಿಸಿದ್ದಾರೆಂದು ನಲ್ಲೂರಿನ ಕೃಷ್ಣ ಶೆಟ್ಟಿ ಎಂಬುವುರು ದೂರು ನೀಡಿದ್ದರು. ಕೃಷ್ಣಶೆಟ್ಟಿ ಅವರ ದೂರು ಆಧರಿಸಿ ಶಿಲ್ಪಿ ಕೃಷ್ಣ ನಾಯಕ್​ ಅವರನ್ನು​ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣ ನಾಯಕ್ ಉಡುಪಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಉಡುಪಿ ನ್ಯಾಯಾಲಯ ಕೃಷ್ಣ ನಾಯಕ್ ಅವರ ಜಾಮೀನು ತಿರಸ್ಕರಿಸಿತ್ತು. ಜಾಮೀನು ತಿರಸ್ಕಾರ ಬೆನ್ನಲ್ಲೇ ಕೃಷ್ಣ ನಾಯಕ್ ತಲೆಮರೆಸಿಕೊಂಡಿದ್ದರು. ಇದೀಗ, ಕಾರ್ಕಳ ಠಾಣೆ ಪೊಲೀಸರು ಶಿಲ್ಪಿ ಕೃಷ್ಣ ನಾಯಕ್ ಅವರನ್ನು ಬಂಧಿಸಿದ್ದಾರೆ.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅಮಾನತು

ಪರಶುರಾಮ್ ಥೀಮ್ ಪಾರ್ಕ್​ನಲ್ಲಿ ನಕಲಿ ಪ್ರತಿಮೆಯನ್ನು ನಿರ್ಮಿಸಿದ್ದ ಆರೋಪ ಕೇಳಿ ಬಂದಿದೆ. ನಿರ್ಮಾಣದ ಗುಣಮಟ್ಟದ ಜೊತೆಗೆ ಧಾರ್ಮಿಕ ಭಾವನೆಗೆ ಅಪಚಾರ ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿ ಸಿಐಡಿ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಅಡ್ಡಿ ಉಂಟು ಮಾಡುವ ಮತ್ತು ಹಸ್ತಕ್ಷೇಪ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅಮಾನತು ಮಾಡಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದರು.

ಇದನ್ನೂ ಓದಿ: ಪರಶುರಾಮ ಥೀಮ್‌ ಪಾರ್ಕ್‌ ಹಗರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ ಸಿಎಂ

ಏನಿದು ನಕಲಿ ಪ್ರತಿಮೆ ನಿರ್ಮಾಣ

ಕಳೆದ ಬಿಜೆಪಿ ಸರಕಾರದ ಅಧಿಕಾರದ ಸಮಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಕಾರ್ಕಳ ಶಾಸಕ‌ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಉಮ್ಮಿಕಲ್ ಬೆಟ್ಟದ ಮೇಲೆ ಪರಶುರಾಮನ ಥೀಂ ಪಾರ್ಕ್ ನಿರ್ಮಿಸಲಾಗಿತ್ತು. ಚುನಾವಣಾ ಪೂರ್ವದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಅವರು ಈ ನೂತನ ಥೀಂ ಪಾರ್ಕ್ ಮತ್ತು ಪರಶುರಾಮನ‌ ಭವ್ಯ ಮೂರ್ತಿಯನ್ನು ಲೋಕಾರ್ಪಣೆ ಮಾಡಿದ್ದರು. ಬಳಿಕ, ಕೆಲ ದಿನಗಳ ಕಾಲ ಕಾಮಗಾರಿ ಬಾಕಿ ಇದೆ ಎನ್ನುವ ಕಾರಣಕ್ಕೆ ಥೀಂ ಪಾರ್ಕ್‌ಗೆ ಪ್ರವಾಸಿಗರ ನಿಷೇಧ ಹೇರಲಾಗಿತ್ತು.

ಇದು ಜನರಿಗೆ ಅನುಮಾನ ಬರುವಂತೆ ಮಾಡಿತ್ತು. ಹೀಗಾಗಿ ತನಿಖೆ ನಡೆಸಿದಾಗ ಮೂರ್ತಿ ಅಸಲಿಯತ್ತು ಹೊರಬಿದ್ದಿತ್ತು. ಹಿತ್ತಾಳೆ ಮೂರ್ತಿಯ ಬದಲು ಫೈಬರ್ ಮೂರ್ತಿ ಸ್ಥಾಪನೆ ಮಾಡಲಾಗಿದೆ ಎಂದು ಆರೋಪ ತಿಳಿದು ಬಂದಿತ್ತು. ಇದಾದ ನಂತರ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನಲ್ಲಿದ್ದ ಪರಶುರಾಮನ ಮೂರ್ತಿ ಏಕಾಏಕಿ ಕಾಣೆಯಾಗಿತ್ತು. ಈ ಕುರಿತು ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿ ತೀವ್ರ ಪ್ರತಿಭಟನೆ ನಡೆಸಿದ್ದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:48 am, Mon, 11 November 24