ಉಡುಪಿ: ಕೇರಳದ ಪೆಟ್ ಶಾಪ್ ಒಂದರಿಂದ ನಾಯಿ ಮರಿಯನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಕರ್ನಾಟಕ ಮೂಲದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ನಿಖಿಲ್ ಮತ್ತು ಶ್ರೇಯಾ ಇಬ್ಬರೂ ಕರ್ನಾಟಕದ ಉಡುಪಿ ಮೂಲದವರಾಗಿದ್ದು ಬುಧವಾರ ಕೇರಳ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಹಾಗೂ ಶಿಹ್ ತ್ಸು ನಾಯಿ ಮರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಕ್ಷಿತ್ ಶೆಟ್ಟಿ ಅಭಿಯನದ ಚಾರ್ಲಿ ಸಿನಿಮಾ ಬಂದದ್ದೆ ತಡ ನಾಯಿ ಪ್ರಿಯರ ಸಂಖ್ಯೆ ಹೆಚ್ಚಾಗಿದೆ. ಜನ ನಾಯಿ ಸಾಕುವುದನ್ನು ಇಷ್ಟಪಡಲಾರಂಭಿಸಿದ್ದಾರೆ. ಆದ್ರೆ ಉಡುಪಿಯ ವಿದ್ಯಾರ್ಥಿಗಳು ನಾಯಿ ಮರಿ ಕದ್ದು ಪೊಲೀಸರ ಅತಿಥಿಯಾಗಿದ್ದಾರೆ. ನಿಖಿಲ್ ಮತ್ತು ಶ್ರೇಯಾ ಉಡುಪಿಯ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಕೊಚ್ಚಿಯ ಪನಂಗಾಡ್‌ನಲ್ಲಿರುವ ಪೆಟ್ ಶಾಪ್‌ನಿಂದ ಸುಮಾರು 25,000 ರೂಪಾಯಿ ಬೆಲೆ ಬಾಳುವ 45 ದಿನಗಳ ಶಿಹ್ ತ್ಸು ನಾಯಿಯನ್ನು ಕದ್ದಿದ್ದಾರೆ. ಶಿಹ್ ತ್ಸು ನಾಯಿ ಮರಿ ನಾಪತ್ತೆಯಾದ ಬಗ್ಗೆ ಪೆಟ್ ಶಾಪ್ ಮಾಲೀಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಉಡುಪಿಯ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಇನ್ನು ನಿಖಿಲ್ ಮತ್ತು ಶ್ರೇಯಾ ರಾತ್ರಿ 7 ಗಂಟೆ ಸಮಯಕ್ಕೆ ಪೆಟ್ ಶಾಪ್ಗೆ ಭೇಟಿ ನೀಡಿದ್ದಾರೆ. ಬಳಿಕ ಹೆಲ್ಮೆಟ್ ಒಳಗೆ ನಾಯಿ ಮರಿಯನ್ನು ಬಚ್ಚಿಟ್ಟುಕೊಂಡು ದ್ವಿಚಕ್ರ ವಾಹನದಲ್ಲಿ ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ಚಲನ-ವಲನಗಳು ಪೆಟ್ ಶಾಪ್ನ ಸಿಸಿ ಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಪೆಟ್ ಶಾಪ್ನಲ್ಲಿದ್ದ ಮೂರು ಶಿಹ್ ತ್ಸು ನಾಯಿ ಮರಿಗಳಲ್ಲಿ ಒಂದು ನಾಯಿ ಮರಿ ನಾಪತ್ತೆಯಾಗಿರುವುದನ್ನು ಸಿಬ್ಬಂದಿ ಗಮನಿಸಿ ಅದನ್ನು ಮಾಲೀಕನಿಗೆ ತಿಳಿಸಿದ್ದಾರೆ. ಈ ವೇಳೆ ಸಿಸಿ ಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆಗ ಶಾಪ್ ಮಾಲೀಕ ಪೊಲೀಸರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳ ಸಹಾಯದಿಂದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಆದ್ರೆ ಮೊದಲಿಗೆ ಆರೋಪಿಗಳನ್ನು ಕಂಡು ಹಿಡಿಯುವುದು ಪೊಲೀಸರಿಗೆ ಕಷ್ಟದ ಕೆಲಸವಾಗಿತ್ತು.
ಬಳಿಕ ನಿಖಿಲ್ ಮತ್ತು ಶ್ರೇಯಾ ಮತ್ತೊಂದು ಪೆಟ್ ಶಾಪ್‌ನಲ್ಲಿ ಇದೇ ರೀತಿ ಕಳ್ಳತನಕ್ಕೆ ಪ್ರಯತ್ನಿಸಿ ಅದರಲ್ಲಿ ವಿಫಲವಾದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣ ತಿಳಿಯುತ್ತಿದ್ದಂತೆ ಪೊಲೀಸರಿಗೆ ಲೀಡ್ ಸಿಕ್ಕಿದೆ. ನಿಖಿಲ್ ಮತ್ತು ಶ್ರೇಯಾ ಇಬ್ಬರೂ ನಾಯಿಗೆ ಆಹಾರವನ್ನು ಕದಿಯಲು ಶಾಪ್ಗೆ ಹೋಗಿ ಹಣ ನೀಡದೆ ನಾಯಿಯ ಆಹಾರವನ್ನು ಕದ್ದಿದ್ದರು. ಬಳಿಕ ಮಾಲೀಕನ ಬಳಿ ಇವರು ಸಿಕ್ಕಿ ಹಾಕಿಕೊಂಡಾಗ ಯುಪಿಐ ಮೂಲಕ ಹಣ ಪಾವತಿಸಿ ಜಾರಿ ಕೊಂಡಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆರೋಪಿಗಳ ಯುಪಿಐ ಐಡಿಯಿಂದ ಆರೋಪಿಯನ್ನು ಗುರುತಿಸಿದ್ದು, ಮೊಬೈಲ್ ಟವರ್ ಲೊಕೇಶನ್ ಉಡುಪಿಯಲ್ಲಿ ಪತ್ತೆಯಾಗಿದೆ. ನಂತರ ಕೇರಳ ಪೊಲೀಸರ ತಂಡ ಉಡುಪಿಗೆ ತೆರಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಬ್ಬರು ಕೇರಳದಲ್ಲಿ ಇಂತಹ ಹೆಚ್ಚಿನ ಕಳ್ಳತನ ಮಾಡಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಶಾಪ್ ಮಾಲೀಕ, ಇಬ್ಬರು ವಿದ್ಯಾರ್ಥಿಗಳು ತಾವು ಬೆಕ್ಕನ್ನು ಮಾರಾಟ ಮಾಡಲು ನೋಡುತ್ತಿರುವುದಾಗಿ ಹೇಳಿಕೊಂಡು ಅಂಗಡಿಯ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ. ಬಳಿಕ ಶಾಪ್ನಲ್ಲಿರುವ ಇತರೆ ನಾಯಿ ಮರಿಗಳನ್ನು ನೋಡಿದ್ದಾರೆ. ಬಳಿಕ ಶಿಹ್ ತ್ಸು ನಾಯಿ ಮರಿಯನ್ನು ಬಾಕ್ಸ್ನಿಂದ ಎತ್ತಿಕೊಂಡು ಹೆಲ್ಮೆಟ್ನಲ್ಲಿ ಹಾಕಿಕೊಂಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಶಾಪ್ ಮಾಲೀಕ ಮಾಹಿತಿ ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:23 am, Fri, 3 February 23