ಉಕ್ಕಿ ಹರಿಯುವ ನದಿಯಲ್ಲಿ ದೋಣಿ ನಡೆಸುವ ದಿಟ್ಟ ಮಹಿಳೆ: ಶಾಲಾ ಮಕ್ಕಳಿಗೆ ಇವರೇ ನಾವಿಕೆ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕುದ್ರು ದ್ವೀಪದ ಮಹಿಳೆಯರು ಪ್ರವಾಹದಲ್ಲಿ ದೋಣಿ ನಡೆಸುವ ಮೂಲಕ ತಮ್ಮ ಕುಟುಂಬಗಳನ್ನು ಪೋಷಿಸುತ್ತಿದ್ದಾರೆ. ಅವೈಜ್ಞಾನಿಕ ಡ್ಯಾಮ್ ನಿರ್ಮಾಣದಿಂದ ಉಂಟಾಗುವ ವಾರ್ಷಿಕ ಪ್ರವಾಹದ ಹೊರತಾಗಿಯೂ, ಈ ಮಹಿಳೆಯರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಮತ್ತು ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ದೋಣಿ ನಡೆಸುತ್ತಾರೆ. ಅವರ ಸಾಹಸ ಮತ್ತು ದೃಢನಿಶ್ಚಯಕ್ಕೆ ಸಲ್ಲಿಸುವ ಗೌರವ.

ಉಡುಪಿ, ಜೂನ್ 16: ಬೈಂದೂರು (Baindur) ತಾಲೂಕಿನ ನಡು ಪಡುಕೋಣೆ ಗ್ರಾಮದಲ್ಲಿನ ಕುದ್ರು (Kudru) ದ್ವೀಪದಲ್ಲಿ ಸರಿ ಸುಮಾರು ಎಂಟರಿಂದ ಹತ್ತು ಕುಟುಂಬಗಳು ವಾಸವಾಗಿವೆ. ಈ ನಡು ಪಡುಕೋಣೆ ಗ್ರಾಮವು ಸೌಪರ್ಣಿಕಾ ನದಿಯ ದಡದಲ್ಲಿದೆ. ಕುದ್ರುನಲ್ಲಿ ತಲೆಮಾರುಗಳಿಂದ ವಾಸವಾಗಿರುವ ಪ್ರತಿಯೊಂದು ಕುಟುಂಬದ ಸದಸ್ಯರಿಗೂ ದೋಣಿ ನಡೆಸುವುದು ಅನಿವಾರ್ಯವಾಗಿದೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಎನ್ನುವ ಭೇದವಿಲ್ಲದೆ ಏಕಾಂಗಿಯಾಗಿ ದೋಣಿ ನಡೆಸುವುದನ್ನು ಕಲಿತುಕೊಳ್ಳುತ್ತಾರೆ. ಮಳೆಗಾಲದಲ್ಲಿ ಸೌಪರ್ಣಿಕಾ ನದಿ ಉಕ್ಕಿ ಹರಿದಾಗ ದೈನಂದಿನ ಕೆಲಸ ಕಾರ್ಯಗಳಿಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಮಹಿಳೆಯರು ಏಕಾಂಗಿಯಾಗಿ ನದಿಯಲ್ಲಿ ದೋಣಿ ನಡೆಸುತ್ತಾರೆ.
ಕಳೆದ ಕೆಲವು ದಿನಗಳಿಂದ ಬೈಂದೂರು ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ನದಿಗಳು ಉಕ್ಕಿ ಹರಿಯುತ್ತಿವೆ. ಅದರಲ್ಲೂ ಪಶ್ಚಿಮ ಘಟ್ಟದ ತಪ್ಪಲಿನಿಂದ ಹರಿದು ಬರುವ ಸೌಪರ್ಣಿಕಾ ನದಿ ಗಟ್ಟದ ಮೇಲಿನ ಮಳೆಯ ನೀರನ್ನು ಕೂಡ ಹೊತ್ತು ತರುತ್ತದೆ. ವೇಗಾವಗಿ ಹರಿಯುವ ನದಿಯನ್ನು ನೋಡಿದರೆ ಎಂತವರ ಎದೆ ಝಲ್ಲೆನ್ನುತ್ತದೆ. ಆದರೆ ನಡು ಪಡುಕೋಣೆ ದ್ವೀಪದ ಮನೆಯಲ್ಲಿರುವ ವಯೋವೃದ್ಧರ ಔಷಧೋಪಚಾರ, ಮಕ್ಕಳ ಶಿಕ್ಷಣ ಸಲುವಾಗಿ ಕುದ್ರು ದ್ವೀಪದಲ್ಲಿ ವಾಸಿಸುವ ಮಹಿಳೆಯರು ದೋಣಿ ನಡೆಸಲು ಕಲಿಯುತ್ತಾರೆ.
ಪುರುಷರು ತುತ್ತಿನ ಚೀಲ ತುಂಬವ ಸಲುವಾಗಿ ಕೆಲಸಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಮಹಿಳೆಯರೇ ತುಂಬಿ ಹರಿಯುವ ನದಿಯಲ್ಲಿ ದೋಣಿ ನಡೆಸಿ ಮಕ್ಕಳನ್ನು ಶಾಲೆಯವರೆಗೆ ಬಿಟ್ಟು ಬರುತ್ತಾರೆ. ನಡು ಪಡುಕೋಣೆಯಲ್ಲಿ ವಾಸಿಸುವ ಜ್ಯೋತಿ ಎಂಬುವರು ಎಂತಹ ಮಳೆ, ಗಾಳಿ ಇರಲಿ ದೋಣಿ ನಡೆಸುತ್ತಾರೆ.
ಕಳೆದ 10-15 ವರ್ಷಗಳಿಂದ ಇಲ್ಲಿ ನೆರೆ ಹಾವಳಿಯಾಗುತ್ತಿದೆ. ಬಂಟ್ವಾಡಿ ಎಂಬ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಡ್ಯಾಮ್ನಿಂದಾಗಿ ನೆರೆ ಉಂಟಾದರೆ, ನೀರು ಕಡಿಮೆಯಾಗಲು ಸರಿಸುಮಾರು ಒಂದು ವಾರ ಕಾಯಬೇಕು.
ಇದನ್ನೂ ಓದಿ: ಶರವೇಗದ ನದಿಯಲ್ಲಿ ದೋಣಿ ನಡೆಸುವ ಧೀರ ಮಹಿಳೆ: ಹೊರ ಜಗತ್ತಿನ ಸಂಪರ್ಕಕ್ಕೆ ಇವರೇ ನಾವಿಕೆ
ಅವೈಜ್ಞಾನಿಕವಾಗಿ ನಿರ್ಮಿಸಿರುವ ಡ್ಯಾಮ್ನಿಂದಾಗಿ ಈ ಭಾಗದಲ್ಲಿ ಪ್ರತಿವರ್ಷವೂ ಕೂಡ ವಾರಗಳ ಕಾಲ ನೆರೆ ಹಾವಳಿ ಉಂಟಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗುತ್ತಿದೆ. ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲೂ ಕೂಡ ಜೀವದ ಹಂಗು ತೊರೆದು ಮನೆಯ ಜವಾಬ್ದಾರಿಗೋಸ್ಕರ ದೋಣಿ ನಡೆಸುವ ಇಂತಹ ಮಹಿಳೆಯರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Wed, 18 June 25