ಉಡುಪಿ: ಆದರ್ಶ ಗ್ರಾಮ ಎಂದು ಕರೆಸಿಕೊಂಡ ಕೆರಾಡಿಯಲ್ಲಿ ಕಾಡುತ್ತಿದೆ ಮೂಲಭೂತ ಸೌಕರ್ಯದ ಕೊರತೆ

| Updated By: preethi shettigar

Updated on: Sep 28, 2021 | 8:43 AM

ಕೆರಾಡಿ ಗ್ರಾಮದ ಈ ಪ್ರದೇಶದಲ್ಲಿ ಕೆಲ ವರ್ಷಗಳ ಹಿಂದೆ ಹಲವಾರು ಮನೆಗಳಿದ್ದವು. ಆದರೀಗ ವಾಸ ಅಂತ ಇರುವುದು ಕೇವಲ ಮೂರೇ ಮೂರು ಮನೆಗಳು. ಮನೆಗೆ ಬಾಗಿಲು ಹಾಕಿ ದೂರದ ಪಟ್ಟಣ ಸೇರಿದ್ದಾರೆ.

ಉಡುಪಿ: ಆದರ್ಶ ಗ್ರಾಮ ಎಂದು ಕರೆಸಿಕೊಂಡ ಕೆರಾಡಿಯಲ್ಲಿ ಕಾಡುತ್ತಿದೆ ಮೂಲಭೂತ ಸೌಕರ್ಯದ ಕೊರತೆ
ಕೆರಾಡಿ ಗ್ರಾಮ
Follow us on

ಉಡುಪಿ: ಅದು ಮಾಜಿ ಮುಖ್ಯಮಂತ್ರಿಯೊಬ್ಬರ ಆದರ್ಶ ಗ್ರಾಮ. ಹಿಂಗಂತಾ ಘೋಷಣೆ ಆಗಿ, ಹಲವು ವರ್ಷ ಕಳೆದರೂ ಮೂಲಭೂತ ಸೌಕರ್ಯ ಮಾತ್ರ ಇನ್ನೂ ಮರಿಚಿಕೆ. ರಸ್ತೆಗಳು ಹೊಂಡಾಗುಂಡಿ, ವಿದ್ಯುತ್ ಸಂಪರ್ಕ ಕನಸಿನ ಮಾತು, ನೆಟ್ವರ್ಕ್ ಅಂತೂ ಇಲ್ಲವೇ ಇಲ್ಲ. ಹೀಗಾಗಿ ಹಲವು ಮನೆಗಳಿದ್ದ ಈ ಊರಲ್ಲಿ ಈಗ ವಾಸ ಇರುವುದು ಕೇವಲ ಮೂರೇ ಮೂರು ಮನೆಗಳು ಮಾತ್ರ. ಯಾವುದೂ ಈ ಗ್ರಾಮ ಎನ್ನುವವರು ಈ ವರದಿ ನೋಡಿ.

ಅದ್ಭುತ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಈ ಊರಿನ ಹೆಸರು ಕೆರಾಡಿ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕೇಂದ್ರದಿಂದ ಬಹುದೂರದ ಊರು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಸದರಾಗಿದ್ದಾಗ ಆದರ್ಶ ಗ್ರಾಮವಾಗಿ ಆಯ್ಕೆಯಾಗಿತ್ತು ಈ ಊರು. ಆಯ್ಕೆಯಾದಾಗ ಊರವರು ಇನ್ನೂದರೂ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂದು ಕನಸು ಕಂಡಿದ್ದರು. ಆದರೆ ಕಂಡ ಕನಸು ನನಸಾಗಲೇ ಇಲ್ಲ.

ಕೆರಾಡಿ ಗ್ರಾಮದ ಈ ಪ್ರದೇಶದಲ್ಲಿ ಕೆಲ ವರ್ಷಗಳ ಹಿಂದೆ ಹಲವಾರು ಮನೆಗಳಿದ್ದವು. ಆದರೀಗ ವಾಸ ಅಂತ ಇರುವುದು ಕೇವಲ ಮೂರೇ ಮೂರು ಮನೆಗಳು. ಮನೆಗೆ ಬಾಗಿಲು ಹಾಕಿ ದೂರದ ಪಟ್ಟಣ ಸೇರಿದ್ದಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಊರಿಗೆ ಬರಬೇಕಾದರೆ ಹೊಂಡಾಗುಂಡಿಯ ರಸ್ತೆ ಮೂಲಕವೇ ಬರಬೇಕು.

ಊರಿಗೆ ವಿದ್ಯುತ್ ಸಂಪರ್ಕ ಭರವಸೆ ಮಾತ್ರ, ಹೀಗಾಗಿ ಇಲ್ಲಿನ ಜನರು ರಾತ್ರಿಯಲ್ಲಿ ಬೆಳಕಿಗಾಗಿ ಸೋಲಾರ್ ಅಳವಡಿಕೆ ಮಾಡಿದ್ದಾರೆ. ಇನ್ನೂ ನೆಟ್ವರ್ಕ್ ಸಂಪರ್ಕ ಈ ಊರಲ್ಲಿ ಇಲ್ಲ. ಈ ಎಲ್ಲಾ ಸಮಸ್ಯೆ ಸಾಕಪ್ಪ ಸಾಕಪ್ಪ ಅಂತ, ಹಲವರು ದೂರದ ಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದಾರೆ. ಹಲವು ಮನೆಗಳಿದ್ದ ಈ ಪ್ರದೇಶದಲ್ಲಿ ಉಳಿದಿರುವುದು ಮೂರೇ ಮನೆಗಳು ಎಂದು ಸ್ಥಳೀಯರಾದ ಶಾಂತಾರಾಮ್ ಶೆಟ್ಟಿ ಹೇಳಿದ್ದಾರೆ.

ಇನ್ನೂ ಕೆರಾಡಿಯ ಈ ಪ್ರದೇಶದಲ್ಲಿ ಉತ್ತಮ ಕೃಷಿ ಭೂಮಿ ಇದ್ದು, ಬೇಸಿಗೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ನೀರು ಹಾಯಿಸುದಕ್ಕೆ ಸಮಸ್ಯೆ ಆಗುತ್ತಿದೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಕೊಂಡ್ಯೋಯಲು ಕಷ್ಟವೇ. ಇಷ್ಟೇ ಅಲ್ಲದೇ ಇದೇ ಪ್ರದೇಶದಲ್ಲಿ ಪ್ರಸಿದ್ಧ ಶ್ರೀ ಕೇಶವನಾಥೇಶ್ವರ ಉದ್ಭವ ಲಿಂಗ ದೇವಾಲಯ ಇದೆ. ಇಂತಹ ವಿಶೇಷ ಗುಹಾಂತರ ದೇಗುಲಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಿದ್ದು, ಆಗಮನಕ್ಕೆ ಸಾರಿಗೆ ಸಂಪರ್ಕವೇ ಕಷ್ಟವಾಗಿದೆ. ಕಚ್ಚಾ ರಸ್ತೆಯಲ್ಲಿ ಬರುವುದೇ ಒಂದು ದೊಡ್ಡ ಸವಾಲಾಗಿದೆ. ಪ್ರಾಚೀನ ದೇವಾಲಯದ ಅಭಿವೃದ್ಧಿಗೂ ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ ಎಂದು ಗ್ರಾಮಸ್ಥ ತೋಮಸ್ ತಿಳಿಸಿದ್ದಾರೆ.

ಅಂದಹಾಗೆ ಅರಣ್ಯ ಇಲಾಖೆ ಕೆಲವು ನಿಬಂಧನೆಗಳೊಂದಿಗೆ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಅಳವಡಿಸಲು ಅವಕಾಶ ನೀಡಿದೆ. ಆದರೆ ಜನ ಪ್ರತಿನಿಧಿಗಳು ಮಾತ್ರ ಮನಸ್ಸು ಮಾಡುತ್ತಿಲ್ಲ. ಮೂಲಭೂತ ಸೌಕರ್ಯ ಇದ್ದರೆ, ಬಿಟ್ಟು ಹೋದ ಮನೆಯವರು ಮತ್ತೆ ಬಂದು ವಾಸ್ತವ್ಯ ಮಾಡುತ್ತಾರೆ ಎನ್ನುವುದು ಕೆರಾಡಿ ಗ್ರಾಮದ ಜನರ ಮಾತು.

ಒಟ್ಟಿನಲ್ಲಿ ಒಂದು ಕಾಲದಲ್ಲಿ ನೂರಾರು ಮಕ್ಕಳಿದ್ದ ಈ ಊರಲ್ಲಿ ಇಂದು ಸ್ಮಶಾನ ಮೌನ ಉಂಟಾಗಿದೆ. ಆದರ್ಶ ಗ್ರಾಮ ಅಂತ ಆಯ್ಕೆ ಆಗಿ ಇನ್ನೂ ಅಭಿವೃದ್ಧಿ ಆಗದೇ ಇರುವುದು ದೊಡ್ಡ ವಿಪರ್ಯಾಸ. ಇನ್ನಾದರೂ ಸಂಬಂಧ ಪಟ್ಟವರು ಈ ಬಗ್ಗೆ ಗಮನ ಹರಿಸಬೇಕಿದೆ.

ವರದಿ:ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ:
ಚಿತ್ರದುರ್ಗ: ಟಿವಿ9 ವರದಿ ಪ್ರಸಾರವಾದ 2 ದಿನದಲ್ಲಿ ಬಸ್ ವ್ಯವಸ್ಥೆ; ಕಣಕುಪ್ಪೆ ಗ್ರಾಮದ ಜನರು, ವಿದ್ಯಾರ್ಥಿಗಳಲ್ಲಿ ಹರ್ಷ

ಕಾಡಿನ ನಡುವೆ ಇರುವ ಅತ್ಯಂತ ಹಿಂದುಳಿದ ಕುಗ್ರಾಮ ದಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಗೆ ತಾತ್ವಾರ

Published On - 8:36 am, Tue, 28 September 21