ರಾಜ್ಯಕ್ಕೆ ಕಲ್ಲಿದ್ದಲು ಸರಬರಾಜು ನಿರ್ವಹಣೆ ಚೆನ್ನಾಗಿದೆ; ಸಿದ್ದರಾಮಯ್ಯ ಆರೋಪಕ್ಕೆ ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ
ಕರ್ನಾಟಕದಲ್ಲಿ ಎಲ್ಲೂ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿಲ್ಲ. ರಾಜ್ಯಕ್ಕೆ ಕಲ್ಲಿದ್ದಲು ಸರಬರಾಜು ನಿರ್ವಹಣೆ ಚೆನ್ನಾಗಿದೆ. ಕೇಂದ್ರದ ಜತೆ ಸಮನ್ವಯ ಸಾಧಿಸಿ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ.
ಉಡುಪಿ: ಕಲ್ಲಿದ್ದಲು ಕೊರತೆಯಿಂದ ದೇಶದಲ್ಲಿ ಎದುರಾಗಿರುವ ವಿದ್ಯುತ್ ಬಿಕ್ಕಟ್ಟಿಗೆ ಬಿಜೆಪಿ ಸರ್ಕಾರದ ಕೆಟ್ಟ ಆಡಳಿತವೇ ಕಾರಣ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ ಎನ್ನುವ ಇಂಧನ ಸಚಿವರ ಹೇಳಿಕೆ ಪ್ರಸ್ತಾಪಿಸಿ ಕಲ್ಲಿದ್ದಲಿನ ಹೆಚ್ಚುವರಿ ಹಂಚಿಕೆ ಲಭ್ಯವಾಗುತ್ತಿಲ್ಲ. ಬಿಜೆಪಿಯವರು ಆಡಳಿತವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ತೊಂದರೆಯಾಗುತ್ತಿದೆ. ಕಲ್ಲಿದ್ದಲಿನ ಕೃತಕ ಅಭಾವ ಸೃಷ್ಟಿಯಾಗಿದೆ ಎಂದಿದ್ದರು. ಸದ್ಯ ಈಗ ಈ ಬಗ್ಗೆ ಇಂಧನ ಸಚಿವ ಸುನಿಲ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಇತರೆ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಉಡುಪಿಯಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಎಲ್ಲೂ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿಲ್ಲ. ರಾಜ್ಯಕ್ಕೆ ಕಲ್ಲಿದ್ದಲು ಸರಬರಾಜು ನಿರ್ವಹಣೆ ಚೆನ್ನಾಗಿದೆ. ಕೇಂದ್ರದ ಜತೆ ಸಮನ್ವಯ ಸಾಧಿಸಿ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಲ್ಲಿ ಮಳೆಯಾಗಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮೇಲೆ ಒತ್ತಡ ಕಡಿಮೆಯಾಗಿದೆ. ರಾಜ್ಯಕ್ಕೆ 13-15 ರೇಖ್ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ಮೇ 30 ಬೇಸಿಗೆಕಾಲ ಮುಗಿಯುವವರೆಗೆ ಸವಾಲುಗಳನ್ನ ನಿರ್ವಹಿಸ್ತ್ತೇವೆ. ಪ್ರತಿ ಎರಡು ದಿನಕ್ಕೊಂದು ಬಾರಿ ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ಚರ್ಚೆಗಳನ್ನು ಮಾಡುತ್ತಿದ್ದೇವೆ. ಕಲ್ಲಿದ್ದಲಿನ ಬಳಕೆ ಮತ್ತು ಪೂರೈಕೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆಯಾಗದಂತೆ ನಿರ್ವಹಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಇಂಧನ ಇಲಾಖೆಯಿಂದ ಹೊಸ ಅಭಿಯಾನ ಆರಂಭದ ಬಗ್ಗೆ ಇಂಧನ ಸಚಿವ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಮೇ 5ರಿಂದ 15ರವರೆಗೆ ರಾಜ್ಯಾದ್ಯಂತ ಅಭಿಯಾನ ನಡೆಯಲಿದೆ. 10 ದಿನದಲ್ಲಿ ಟ್ರಾನ್ಸ್ಫಾರ್ಮರ್ಗಳ ನಿರ್ವಹಣೆಗೆ ಸೂಚನೆ ನೀಡಲಾಗಿದೆ. ಕೆಲ ಕಡೆ ಟಿಸಿ ಸ್ಫೋಟಗೊಂಡು ಪ್ರಾಣ ಹಾನಿಯಾಗಿದೆ. ನಿರ್ವಹಣಾ ಸಮಸ್ಯೆಯಿಂದ ಇಂಥ ಘಟನೆಗಳು ನಡೆದಿವೆ. ಹೀಗಾಗಿ ಸಮಸ್ಯೆ ನಿವಾರಣೆ ಬಗ್ಗೆ ಚರ್ಚೆ ನಡೆಸಲಾಗಿದ್ದು ಎಲ್ಲಾ ಟಾನ್ಸ್ಫಾರ್ಮರ್ಗಳನ್ನು ತಪಾಸಣೆ ನಡೆಸಲು ಸೂಚಿಸಲಾಗಿದೆ ಎಂದರು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 1ಸಾವಿರ ವಿದ್ಯುತ್ ಚಾರ್ಜಿಂಗ್ ಸೆಂಟರ್ ಆರಂಭಿಸಲಾಗುವುದು. ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿರೋ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಬಿಜೆಪಿಯಿಂದ ಕೃತಕ ಕಲ್ಲಿದ್ದಲು ಅಭಾವ ಸೃಷ್ಟಿ: ಸಿದ್ದರಾಮಯ್ಯ ಗಂಭೀರ ಆರೋಪ
Published On - 12:49 pm, Mon, 2 May 22