ಉಡುಪಿ, ಜು.24: ಕರಾವಳಿ ಜಿಲ್ಲೆ ಉಡುಪಿ(Udupi)ಯಲ್ಲಿ ಸಮೃದ್ಧ ಮಳೆಯಾಗಿದೆ. ನದಿ ಪಾತ್ರದಲ್ಲಿ ಮಳೆ ನೆರೆ ಸೃಷ್ಟಿಸಿ ಜನರನ್ನ ಆತಂಕಕ್ಕೂ ತಳ್ಳಿದೆ. ಜನವಸತಿ ಪ್ರದೇಶಗಳಿಂದ ನೆರೆ ಇಳಿಮುಖವಾದರೂ, ಮೈದುಂಬಿ ವ್ಯಾಪ್ತಿ ಮೀರಿ ಹರಿದ ನದಿ, ಗದ್ದೆ, ತೋಟ ಎಲ್ಲವನ್ನ ಆವರಿಸಿಕೊಂಡುಬಿಟ್ಟಿದೆ. ಬೈಂದೂರು, ಬ್ರಹ್ಮಾವರ, ಕಾಪು ತಾಲೂಕಿನಲ್ಲಿ ಅತಿ ಹೆಚ್ಚು ಭತ್ತದ ಬೇಸಾಯ ಮಾಡುವ ಗದ್ದೆಗಳು ನದಿಗಳಂತಾಗಿವೆ.
ಉಡುಪಿ ಜಿಲ್ಲೆಯಲ್ಲಿ ವಾರ್ಷಿಕ 36,000 ಹೆಕ್ಟೇರ್ ಭತ್ತ ಬೆಳೆಯಲಾಗುತ್ತದೆ. ಜೂನ್ ಮತ್ತು ಜುಲೈ ತಿಂಗಳ ಮಳೆಗೆ 1500 ಹೆಕ್ಟೇರ್ಗಿಂತ ಹೆಚ್ಚಿನ ಗದ್ದೆಗಳು ಜಲಾವೃತವಾಗಿದೆ. ಇದರಲ್ಲಿ ಬಿತ್ತಿದ ಪೈರು, ನಾಟಿ ಮಾಡಿದ, ಕೆಲ ಉಳುಮೆ ಮಾಡಿದ, ನಾಟಿಗೆ ಸಿದ್ಧವಾದ ಗದ್ದೆಗಳಿಗೆ ಮಳೆ, ನೆರೆ ನೀರು ಹರಿದು ನಷ್ಟವಾಗಿದೆ. ಬಿತ್ತನೆ ಮತ್ತು ನಾಟಿ ಮಾಡಿ 15 ರಿಂದ 20 ದಿವಸ ಕಳೆದು ಪೈರು ಜೀವ ಪಡೆಯುತ್ತಿದ್ದರೆ, ನೆರೆ ಬಂದರೂ ರೈತನಿಗೆ ಆತಂಕ ಇರುವುದಿಲ್ಲ. ಆದರೆ, ಪೈರಿನ ಮೇಲೆ ನೆರೆ ನೀರು ನಿಂತು ಸಂಪೂರ್ಣವಾಗಿ ಕೊಳೆತು ಹೋಗುತ್ತಿದೆ.
ಇದನ್ನೂ ಓದಿ:ಉಡುಪಿಯಲ್ಲಿ ನಿಲ್ಲದ ಮಳೆ, ಪಾಪಾನಾಶಿನಿ ನದಿಯಿಂದ ಊರುಗಳೊಳಗೆ ನುಗ್ಗಿದ ನೀರು
ಅದರಲ್ಲೂ ನದಿ ಪಾತ್ರದಲ್ಲಿ ಸುಮಾರು ದಿನ ನೀರು ಆವರಿಸಿರುವ ಕಾರಣ ರೈತರಿಗೆ ಬಹಳ ನಷ್ಟವಾಗಿದೆ. ಉಡುಪಿ ಜಿಲ್ಲೆಯ ಆರಂಭಿಕ ಸಮೀಕ್ಷೆಯ ನಷ್ಟಗಳನ್ನು ನೋಡುವುದಾದರೆ, ಸುಮಾರು 150 ಹೆಕ್ಟೇರ್ ಭತ್ತದ ಗದ್ದೆಯ ಪೈರು ಸಂಪೂರ್ಣ ನಾಶವಾಗಿದೆ. ಸುಮಾರು 90 ಹೆಕ್ಟೇರ್ ಗದ್ದೆಯಲ್ಲಿ ಭಾಗಶಃ ಹಾನಿಯಾಗಿದೆ. ಇಡೀ ಜಿಲ್ಲೆಯ ಪೂರ್ಣ ಲೆಕ್ಕಾಚಾರ ಇನ್ನಷ್ಟೇ ಸಿಗಬೇಕಾಗಿದೆ.
ಉಡುಪಿ ಜಿಲ್ಲೆಯಲ್ಲಿ ನೆರೆ ವೀಕ್ಷಣೆ ಮಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್ಗೆ, ಭತ್ತದ ಬೇಸಾಯಗಳು ಜಲಾವೃತ ಆಗಿರುವ ನೇರ ದರ್ಶನ ಆಗಿಲ್ಲ. ನೆರೆ ಸಂಪೂರ್ಣ ಇಳಿಕೆಯಾದ ನಂತರ ಜಿಲ್ಲೆಗೆ ಬಂದಿರುವುದರಿಂದ ಗುಡ್ಡ ಕುಸಿತದ, ಕಡಲ್ಕೊರೆತದ ಸಮಸ್ಯೆಯ ಪ್ರತ್ಯಕ್ಷ ದರ್ಶನವಾಗಿದೆ. ಸದ್ಯ ಒಂದು ಎರಡು ಬೆಳೆ ಮಾಡಿ ಜೀವನ ಕಟ್ಟಿಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ಸಿಗಬೇಕಾಗಿದೆ. ನೆರೆಗೆ ಪೈರು ನಾಶವಾಗಿರುವ ಬೇಸಾಯಗಾರರಿಗೆ ಕೃಷಿ ಇಲಾಖೆ ಮತ್ತೆ ಬಿತ್ತನೆ ಬೀಜವನ್ನು ಒದಗಿಸುವ ಅಗತ್ಯತೆಯಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ