AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ಮಾನ್ಯತೆ ಪಡೆದಿರುವ ಉಡುಪಿಯ ಮಟ್ಟು ಗುಳ್ಳ ಬೆಳೆಗೆ ತಟ್ಟಿದ ಚಂಡಮಾರುತ ಎಫೆಕ್ಟ್​​: ರೈತರು ಕಂಗಾಲು

ಉಡುಪಿಯ ಭೌಗೋಳಿಕ ಮಾನ್ಯತೆ ಪಡೆದ ಮಟ್ಟು ಗುಳ್ಳ ಬೆಳೆಗಾರರು ಮೊಂತಾ ಚಂಡಮಾರುತದ ಮಳೆಯಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಲಕ್ಷಾಂತರ ರೂ. ಹೂಡಿಕೆ ಮಾಡಿ ಬೆಳೆದ ಬದನೆ ಬೆಳೆ ಸಂಪೂರ್ಣ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ರೈತರು ಹತಾಶರಾಗಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಜಾಗತಿಕ ಮಾನ್ಯತೆ ಪಡೆದಿರುವ ಉಡುಪಿಯ ಮಟ್ಟು ಗುಳ್ಳ ಬೆಳೆಗೆ ತಟ್ಟಿದ ಚಂಡಮಾರುತ ಎಫೆಕ್ಟ್​​: ರೈತರು ಕಂಗಾಲು
ಮಟ್ಟು ಗುಳ್ಳ ಬದನೆ ಬೆಳೆ
ಪ್ರಜ್ವಲ್ ಅಮೀನ್​, ಉಡುಪಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 29, 2025 | 5:22 PM

Share

ಉಡುಪಿ, ಅಕ್ಟೋಬರ್​ 29: ಮೊಂತಾ ಚಂಡಮಾರುತದ (cyclone monta) ಅಡ್ಡ ಪರಿಣಾಮದಿಂದ ಕಂಗಾಲಾಗಿರುವ ರೈತರ ಕೈ ಹಿಡಿಯುವವರು ಮಾತ್ರ ಯಾರು ಇಲ್ಲ. ಅದರಲ್ಲೂ ಜಿಯೋಗ್ರಾಫಿಕಲ್ ಮಾನ್ಯತೆ ಪಡೆದಿರುವ ಉಡುಪಿಯ ವಿಶಿಷ್ಟ ತಳಿ ‘ಮಟ್ಟು ಗುಳ್ಳ’ (mattu gulla) ಎಂಬ ಅಪರೂಪದ ಬೆಳೆ ಬೆಳೆದ ರೈತರು ಮಳೆಯಿಂದ ಕಂಗಲಾಗಿದ್ದಾರೆ. ಭೂಮಿಯಲ್ಲಿರುವ ಸಾಮಾನ್ಯ ತೇವಾಂಶವನ್ನೇ ಹಿರಿಕೊಂಡು ಬೆಳೆಯುವ ಈ ಬೆಳೆ ಅತಿಯಾದ ಮಳೆ ನೀರಿನಿಂದ ನಾಶವಾಗುತ್ತಿದ್ದು, ರೈತರ ಸ್ಥಿತಿ ಮಾತ್ರ ಹೇಳತೀರದಾಗಿದೆ.

ಮೊಂತಾ ಚಂಡಮಾರುತದ ಬಿಸಿ ಕರಾವಳಿಯ ರೈತರಿಗೂ ತಟ್ಟಿದೆ. ಈ ಬಾರಿ ಸತತವಾಗಿ ಸುರಿದ ಮಳೆಯ ನಡುವೆಯೂ ಕಷ್ಟನೋ, ನಷ್ಟನೋ ಅಂತ ರೈತರು ಭತ್ತದ ಬೆಳೆ ಬೆಳೆದು ಮುಗಿಸಿದ್ದಾರೆ. ಇದೀಗ ತರಕಾರಿ ಧಾನ್ಯ ಬೆಳೆಸುವುದು ಉಡುಪಿ ಕೃಷಿಕರ ರೂಢಿ. ಅದರಲ್ಲೂ ಕಾಪು ತಾಲೂಕಿನ ಮಟ್ಟು ಗ್ರಾಮದ ನೂರಾರು ರೈತರು ಮಟ್ಟುಗುಳ್ಳ ವಿಶಿಷ್ಟ ತಳಿಯ ಬದನೆ ಬೆಳೆ ಬೆಳೆಯುತ್ತಾರೆ.

ಇದನ್ನೂ ಓದಿ: Karnataka Weather Today: ರಾಜ್ಯದಲ್ಲಿ ಹೆಚ್ಚಿದ ವರುಣಾರ್ಭಟ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಮಟ್ಟುಗುಳ್ಳು ಬೆಳೆ ಸೋತ ರೈತರ ಕೈ ಹಿಡಿಯುತ್ತೆ. ಜಿಯೋಗ್ರಾಫಿಕಲ್ ಮಾನ್ಯತೆ ಪಡೆದ ಮಟ್ಟು ಬದನೆ ಉತ್ತಮ ಬೇಡಿಕೆ ಉತ್ತಮ ಮಾರುಕಟ್ಟೆ ಕೂಡ ಇದೆ. ಹಾಗಾಗಿ ಭತ್ತದ ಕೃಷಿ ನಷ್ಟದಿಂದ ಚೇತರಿಸಿಕೊಳ್ಳಲು ವಾರ್ಷಿಕ ಜೀವನದ ಆದಾಯ ನಿರೀಕ್ಷೆ ಮಟ್ಟು ಗುಳ್ಳ ಕೃಷಿಯನ್ನು ಮಾಡುತ್ತಾರೆ. ಮಟ್ಟು ಗುಳ್ಳು ಬೆಳೆಯುವುದಕ್ಕೆ ಲಕ್ಷಾಂತರ ರೂ ಖರ್ಚು ಮಾಡಲಾಗುತ್ತದೆ. ಆದರೆ ಸದ್ಯ ಮಟ್ಟು ಪ್ರದೇಶದ ರೈತರ ಪರಿಸ್ಥಿತಿ ಮಾತ್ರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಮೊಂತಾ ಚಂಡಮಾರುತ ಪರಿಣಾಮ

ಮಳೆಗಾಲ ಬೇಸಾಯ ಮುಗಿಸಿ ಮಟ್ಟು ಗುಳ್ಳ ಬೆಳೆಯನ್ನು ಬೆಳೆಯುತ್ತಾರೆ‌. ಮಟ್ಟು ಗ್ರಾಮದ ರೈತರು ಇದೆ ಅವರ ಪಾಲಿಗೆ ಜೀವನಾಧಾರ ಕೂಡ. ಒಂದು ಒಂದೂವರೆ ತಿಂಗಳುಗಳ ಕಾಲ ಮಟ್ಟು ಬದನೆ ಕೃಷಿಯನ್ನು ಎಕರೆಗಟ್ಟಲೆ ಭೂಮಿಯಲ್ಲಿ ‌ಮಾಡಿದ್ದಾರೆ. ಆದರೆ ಬದನೆ ಗಿಡಗಳು ಬೆಳೆದು ಹೂ ಬಿಟ್ಟು ಫಸಲು ಬರುವ ಕಾಲಕ್ಕೆ ಸರಿಯಾಗಿ ಮೊಂತಾ ಚಂಡಮಾರುತ ಪರಿಣಾಮ ಉಡುಪಿ ಜಿಲ್ಲೆಯಲ್ಲಿ ಸತತ ಮಳೆ ಆಗಿದೆ.

ಗುಳ್ಳ ಗದ್ದೆಗಳಲ್ಲಿ ನೀರು ತುಂಬಿ ಬದನೆಯ ಗಿಡಗಳು ನೆಲಕಚ್ಚಿವೆ. ಬೇರುಗಳು ಕೊಳೆತು ಮಟ್ಟು ಗುಳ್ಳ ಬೆಳೆ ಸಂಪೂರ್ಣವಾಗಿ ನಾಶವಾದ ಪರಿಸ್ಥಿತಿ ಇದೆ. ಮಟ್ಟು ಗುಳ್ಳಕ್ಕೆ ಮಾರುಕಟ್ಟೆಯಲ್ಲಿ 90/100 ಇದ್ದರೂ ಮಟ್ಟು ಬದನೆ ಬೆಳೆ ನಾಶದಿಂದ ಮಟ್ಟು ಗುಳ್ಳ ಪೂರೈಕೆ ಕೊರತೆಯಾಗಿದೆ. ದರ ಹೆಚ್ಚಿದ್ದರೂ ರೈತರಿಗೆ ಪ್ರಯೋಜನವಾಗದ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಗಾಯದ ಮೇಲೆ ಬರೆ: ಸಂಕಷ್ಟದಲ್ಲಿರುವ ಧಾರವಾಡದ ರೈತರಿಗೆ ಬ್ಯಾಂಕ್​ನಿಂದ ನೋಟಿಸ್​!

ಒಟ್ಟಿನಲ್ಲಿ ರೈತರು ದೇಶದ ಬೆನ್ನೆಲುಬು ಎನ್ನುವ ವಾಕ್ಯ ಕೇವಲ ವಾಕ್ಯವಾಗಿಯೇ ಉಳಿದಿದೆ. ಬೆಳೆನಾಶಕ್ಕೆ ಸರ್ಕಾರದಿಂದ ಪರಿಹಾರ ಕೂಡ ದೊರಕಿಲ್ಲ, ಮುಂದೆಯೂ ಸಿಗೋದು ಅನುಮಾನ ಅನ್ನೋದು ರೈತರ ಆಕ್ರೋಶವಾಗಿದೆ. ಈ ಎಲ್ಲ ಕಾರಣದಿಂದ ರೈತರು ಕೃಷಿ ಬೇಡ ಎಂಬ ತೀರ್ಮಾನಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಯನ್ನೇ ನಂಬಿ ಜೀವನ ನಡೆಸುವ ರೈತರಿಗೆ ಪರಿಹಾರ ಒದಗಿಸುವ ಮೂಲಕ ರೈತರ ಬೆಂಬಲಕ್ಕೆ ಸರ್ಕಾರ ಮುಂದಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.