ಗಾಯದ ಮೇಲೆ ಬರೆ: ಸಂಕಷ್ಟದಲ್ಲಿರುವ ಧಾರವಾಡದ ರೈತರಿಗೆ ಬ್ಯಾಂಕ್ನಿಂದ ನೋಟಿಸ್!
ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ನವಲಗುಂದ ತಾಲೂಕಿನ ರೈತರ ಬೆಳೆ ಹಾನಿಯಾಗಿದೆ. ಈ ನಡುವೆ, ಮೊರಬ ಗ್ರಾಮದ ರೈತರಿಗೆ ಬ್ಯಾಂಕ್ ಆಫ್ ಬರೋಡಾ ಸಾಲ ಮರುಪಾವತಿ ನೋಟೀಸ್ ನೀಡಿದೆ. ಹೀಗಾಗಿ ರೈತರು ಸರ್ಕಾರದಿಂದ ಸಹಾಯ ಕೋರುತ್ತಿದ್ದಾರೆ. ಸರ್ಕಾರ ರೈತರ ಸಾಲ ಮನ್ನಾ ಮಾಡಿ ಅವರನ್ನು ಬೆಂಬಲಿಸಬೇಕೆಂಬುದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಧಾರವಾಡ, ಜುಲೈ 01: ಧಾರವಾಡ (Dharwad) ಜಿಲ್ಲೆಯಾದ್ಯಂತ ವಾಡಿಕೆಗಿಂತಲೂ ಅಧಿಕ ಮಳೆಯಾಗುತ್ತಿದೆ. ಇದರಿಂದ ನವಲಗುಂದ (Navalgund) ತಾಲೂಕಿನಾದ್ಯಂತ ಮಳೆಗೆ ಬೆಳೆ ಹಾಳಾಗಿದೆ. ಇದರ ಮಧ್ಯೆ ನವಲಗುಂದ ತಾಲೂಕಿನ ಮೊರಬ ಗ್ರಾಮದ ರೈತರಿಗೆ ಬ್ಯಾಂಕ್ ಆಫ್ ಬರೋಡಾ ಶಾಕ್ ನೀಡಿದೆ. ಮೊರಬ ಗ್ರಾಮದ ರೈತರಿಗೆ ಬ್ಯಾಂಕ್ನವರು ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡುತ್ತಿದ್ದಾರೆ. ಮೊರಬ ಗ್ರಾಮದ ರೈತರು ಕೃಷಿ ಚಟುವಟಿಕೆಗಾಗಿ ಬ್ಯಾಂಕ್ ಆಫ್ ಬರೋಡಾದಲ್ಲಿ ಸಾಲ ಪಡೆದಿದ್ದಾರೆ. ಕೆಲ ವರ್ಷ ಬಡ್ಡಿ ಸಹ ತುಂಬಿ ಬ್ಯಾಂಕಿನಲ್ಲಿ ತಮ್ಮ ವ್ಯವಹಾರಕ್ಕೆ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಆದರೆ, ಇತ್ತೀಚಿಗೆ ರೈತರು ಸಾಲ ಮರುಪಾವತಿ ಮಾಡಿರಲಿಲ್ಲ.
ಅತಿವೃಷ್ಟಿ ಮತ್ತು ಅನಾವೃಷ್ಟಿಯಾಗಿ ಬೆಳೆ ಬಾರದ ಹಿನ್ನೆಲೆಯಲ್ಲಿ ಹಣ ಇಲ್ಲದೆ ರೈತರು ಸಾಲ ಮರುಪಾವತಿ ಮಾಡಿಲ್ಲ. ಸಾಲ ಮರುಪಾವತಿ ಮಾಡುವಂತೆ ಹಾಗೂ ಬಾಕಿ ತುಂಬುವಂತೆ ಬ್ಯಾಂಕ್ನವರು ರೈತರಿಗೆ ನೋಟಿಸ್ ನೀಡುತ್ತಿದ್ದಾರೆ. ಹೀಗಾಗಿ, ಮೊರಬ ಗ್ರಾಮದ ರೈತರು ಆತಂಕಕ್ಕೀಡಾಗಿದ್ದಾರೆ. ಜೊತೆಗೆ ನೋಟಿಸ್ ವಾಪಸ್ ಪಡೆಯುವಂತೆ ಬ್ಯಾಂಕ್‌ಗೆ ನಿರ್ದೇಶನ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ನವಲಗುಂದ ಭಾಗದ ರೈತರು ಮಳೆಯಿಂದ ಬೆಳೆ ನಷ್ಟ ಅನುಭವಿಸಿದ್ದಾರೆ. ಬೆಳೆದ ಬೆಳೆ ನೀರು ಪಾಲಾಗಿದೆ. ಮತ್ತೆ ಬಿತ್ತಬೇಕು ಎಂದರೆ ಭೂಮಿ ಹದ ಇಲ್ಲ. ಇದರ ಜೊತೆಗೆ ಬೀಜ ಮತ್ತು ಗೊಬ್ಬರಕ್ಕಾಗಿ ರೈತರು ಮತ್ತೆ ಸಾಲ ಮಾಡಲೇಬೇಕು. ಹೀಗಿರುವಾಗ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ಬಂದಿರುವುದು ರೈತರನ್ನು ನಿಜಕ್ಕೂ ಆತಂಕಕ್ಕೀಡು ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿ ರೈತರ ಪರ ನಿಲ್ಲಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರೈತರಿಗಾಗಿ ಏನನ್ನೂ ಮಾಡಿಲ್ಲ. ಸದ್ಯ ಕಷ್ಟದಲ್ಲಿರುವ ರೈತರ ಸಾಲವನ್ನಾದರೂ ಮನ್ನಾ ಮಾಡಿ ರೈತರ ಪರ ನಿಲ್ಲಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಜು.1ರಂದು ಧಾರವಾಡದಲ್ಲಿ ಹುತಾತ್ಮ ದಿನ ಆಚರಣೆ ಆಚರಿಸುವುದ್ಯಾಕೆ? ಇದಕ್ಕಿದೆ ಬ್ರಿಟಿಷರ ಲಿಂಕ್
ಈಗಾಗಲೇ ಹಲವಾರು ಸಮಸ್ಯೆಗಳಿಂದ ಕಂಗೆಟ್ಟಿರುವ ರೈತರು ಇದೀಗ ಈ ಬ್ಯಾಂಕುಗಳ ನೋಟಿಸ್ಗಳಿಂದ ಆಕ್ರೋಶಗೊಂಡಿದ್ದಾರೆ. ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯ ರೈತರಿಗೆ ಬ್ಯಾಂಕ್ಗಳು ಅಕ್ಷರಶಃ ಗಾಯದ ಮೇಲೆ ಬರೆ ಎಳೆದಂತೆ ಮಾಡಿವೆ. ಇಂಥ ಸಂದರ್ಭದಲ್ಲಿ ಸರ್ಕಾರ ರೈತರ ಬೆನ್ನೆಲುಬಿಗೆ ನಿಲ್ಲುವ ಕೆಲಸ ಮಾಡಬೇಕಿದೆ.








