ಜು.1ರಂದು ಧಾರವಾಡದಲ್ಲಿ ಹುತಾತ್ಮ ದಿನ ಆಚರಣೆ ಆಚರಿಸುವುದ್ಯಾಕೆ? ಇದಕ್ಕಿದೆ ಬ್ರಿಟಿಷರ ಲಿಂಕ್
ಅದು ಸ್ವಾತಂತ್ರ್ಯಾ ಪೂರ್ವದ ದಿನಗಳು. ಬ್ರಿಟಿಷರ ದಬ್ಬಾಳಿಕೆ ವಿರುದ್ಧ ದೇಶಾದ್ಯಂತ ನಿರಂತರವಾಗಿ ಹೋರಾಟ ನಡೆದ ದಿನಗಳವು. ಮಹಾತ್ಮಾ ಗಾಂಧಿಯವರು ಆರಂಭಿಸಿದ್ದ ಅಸಹಕಾರ ಚಳುವಳಿಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿತ್ತು. ಇಂಥ ದಿನಗಳಲ್ಲಿಯೇ ಧಾರವಾಡದಲ್ಲಿ ಹೋರಾಟವೊಂದು ನಡೆದು, ಬ್ರಿಟೀಷ್ ಗುಂಡಿಗೆ ಮೂವರು ರಾಷ್ಟ್ರಭಕ್ತರು ಹುತಾತ್ಮರಾಗಿದ್ದರು. ಈ ಹುತಾತ್ಮರನ್ನು ಸ್ಮರಿಸಲು ಇಂದಿಗೂ ಧಾರವಾಡದಲ್ಲಿ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ. ಇಲ್ಲಿದೆ ವಿವರ

ಧಾರವಾಡ, ಜುಲೈ 01: 1921ರ ಜುಲೈ 1 ರಂದು ಧಾರವಾಡದಲ್ಲಿ (Dharawad) ಬ್ರಹತ್ ಹೋರಾಟವೊಂದು ನಡೆದಿತ್ತು. ಬ್ರಿಟಿಷರ ವಿರುದ್ಧ ದೇಶದಾದ್ಯಂತ ಅಸಹಕಾರ ಚಳುವಳಿ ಆರಂಭವಾಗಿತ್ತು. ಮಹಾತ್ಮಾ ಗಾಂಧಿಯವರು (Mahatma Gandhi) ಅಸಹಕಾರ ಚಳುವಳಿಗೆ ಕರೆ ಕೊಟ್ಟಿದ್ದರಿಂದ ದೇಶದ ಕೋಟ್ಯಾಂತರ ಜನರು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಅನೇಕ ಕಡೆಗಳಲ್ಲಿ ರಸ್ತೆಗಿಳಿದ ಜನರು, ಬ್ರಿಟಿಷರ ವಿರುದ್ಧ ತೊಡೆ ತಟ್ಟಿದ್ದರು. ಇದಕ್ಕೆ ಧಾರವಾಡ ಜಿಲ್ಲೆ ಹೊರತಾಗಿರಲಿಲ್ಲ. ಅದಾಗಲೇ ದೇಶಾದ್ಯಂತ ಆರಂಭವಾಗಿದ್ದ ಅಸಹಕಾರ ಚಳುವಳಿಗೆ ಧಾರವಾಡದಲ್ಲೂ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ 1921 ಜುಲೈ 1ರಂದು ಧಾರವಾಡ ನಗರದ ಜಕಣಿ ಬಾವಿ ಬಳಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡಿದ ದಾಳಿ ನಡೆಸಿದ ಪರಿಣಾಮ ಮೂವರು ರಾಷ್ಟ್ರಭಕ್ತರು ಹುತಾತ್ಮರಾದರು.
ಮೂವರು ರಾಷ್ಟ್ರಭಕ್ತರು ಹುತಾತ್ಮರಾಗಿ 104 ವರ್ಷಗಳು ಕಳೆದಿವೆ. ಜಕಣಿ ಬಾವಿ ಬಳಿ ಇದ್ದ ಸಾರಾಯಿ ಅಂಗಡಿ ಎದುರು ಪಿಕೆಟಿಂಗ್ ಮಾಡುತ್ತಿದ್ದ ಅಸಹಕಾರ ಚಳುವಳಿಯ ಕಾರ್ಯಕರ್ತರಾದ ಮಲ್ಲಿಕಸಾಬ್ ಮರ್ದಾನ ಸಾಬ್, ಗೌಸುಸಾಬ್ ಖಾದರ್ ಸಾಬ್, ಅಬ್ದುಲ್ ಗಫಾರ್ ಚೌಕಥಾಯಿ ಬ್ರಿಟಿಷರ ಗುಂಡಿಗೆ ಬಲಿಯಾದರು. ಇವರನ್ನು ಸ್ಮರಿಸಲು ಜಕಣಿ ಬಾವಿ ಬಳಿ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಪ್ರತಿವರ್ಷ ಜುಲೈ 1 ರಂದು ಅವರಿಗೆ ಗೌರವ ಸಲ್ಲಿಸಲಾಗುತ್ತದೆ.
1920ರಲ್ಲಿ ಭಾರತೀಯರ ಸ್ವಾತಂತ್ರ್ಯದ ಕೂಗು ಬ್ರಿಟಿಷರ ನಿದ್ದೆಗೆಡಿಸಿತ್ತು. ಮಹಾತ್ಮಾ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಸಹಕಾರ ಚಳುವಳಿ ಹೊಸತೊಂದು ಶಕ್ತಿಯಾಗಿ ಸಂಗ್ರಾಮದ ಕಿಚ್ಚು ಹೆಚ್ಚಿಸಿತ್ತು. ಎಲ್ಲೆಡೆ ಪಿಕೆಟಿಂಗ್‌ಗಳು ನಡೆಯುತ್ತಿದ್ದವು. ಪತ್ರಿಕೆಗಳಲ್ಲಿ ಕೂಡ ಲೇಖನ, ವರದಿ ಪ್ರಕಟವಾಗುತ್ತಿದ್ದವು. ಇದರಿಂದ ವಿಚಲಿತರಾಗಿದ್ದ ಬ್ರಿಟಿಷ್ ಸರಕಾರ ತನ್ನ ಅಧಿಕಾರಿಗಳಿಗೆ ಇದನ್ನು ಹತ್ತಿಕ್ಕುವಂತೆ ಆದೇಶವನ್ನು ನೀಡಿತ್ತು.
ಹೀಗಾಗಿ, ಅಂದು ಜಿಲ್ಲಾಧಿಕಾರಿಯಾಗಿದ್ದ ಪೇಂಟರ್ ದಬ್ಬಾಳಿಕೆ ಆರಂಭಿಸಿದ್ದನು. ಪಿಕೆಟಿಂಗ್ ಸಂಬಂಧಿಸಿದಂತೆ ಇಬ್ಬರು ಅಸಹಕಾರ ಚಳುವಳಿ ಸ್ವಯಂ ಸೇವಕರಿಗೆ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿದ್ದನು. ಬ್ರಿಟಿಷರ ಈ ತೀರ್ಪನ್ನು ವಿರೋಧಿಸಿ 1921ರ ಜುಲೈ 1ರಂದು ನಗರದಲ್ಲಿ ಸತ್ಯಾಗ್ರಹ ಆರಂಭಗೊಂಡಿತ್ತು. ಆಗ ಸಾರಾಯಿ ಅಂಗಡಿಗೆ ಬೆಂಕಿ ಹಚ್ಚಲು ಹೋರಾಟಗಾರರು ಯತ್ನಿಸಿದರು. ಇದೇ ವೇಳೆ ಅವರೆಲ್ಲ ದೊಂಬಿ ಮಾಡಿದರು ಎಂದು ಆರೋಪ ಹೊರಿಸಿದ ಪೊಲೀಸರು, ಗೋಲಿಬಾರ್ ನಡೆಸಿ ಮೂವರನ್ನು ಕೊಂದರು. ಇದರಲ್ಲಿ 39 ಜನರಿಗೆ ಗಾಯವಾಯಿತು. ಈ ಕರಾಳ ದಿನದ ನೆನಪಿನಲ್ಲಿ ಇಂದಿಗೂ ಹುತಾತ್ಮ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿದ ಬಿಜೆಪಿ
ಅಂದು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ಶಿವಲಿಂಗಯ್ಯ ಲಿಂಬೆಣ್ಣದೇವರಮಠ ಅವರಿಗೆ ಹೊಟ್ಟೆಗೆ ಗಂಡು ತಗುಲಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ಕುರಿತು ಅಬ್ಬಾಸ್ ತಯಬ್ಬಿ, ಭವಾನಿ ಶಂಕರ್ ನಿಯೋಗಿ ಮತ್ತು ಎಸ್.ಎಸ್.ಸಟ್ಟೂರ್ ಅವರನ್ನು ಒಳಗೊಂಡ ವಿಚಾರಣಾ ಸಮಿತಿಯನ್ನು ಅಖಿಲ ಭಾರತ ಕಾಂಗ್ರೆಸ್ ನೇಮಿಸಿತು. ಈ ಘಟನೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು. ಪ್ರಕರಣ ನಂತರ ಲಾಲಾ ಲಜಪತ್ ರಾಯ್ ಅವರು ನಗರಕ್ಕೆ ಬಂದು ಬಂಧಿತರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದರು.
ಬಂಧಿತರಲ್ಲಿ 6 ರಿಂದ 7 ಜನ ಪತ್ರಕರ್ತರೇ ಇದ್ದರು. ಈ ಪ್ರಕರಣದಲ್ಲಿ ಹುತಾತ್ಮರಾದ ಮೂವರ ಸ್ಮರಣೆಗಾಗಿ 25ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಜಕಣಿ ಬಾವಿ ಬಳಿ ಸ್ಮಾರಕ ನಿರ್ಮಿಸಲಾಯಿತು. ಪ್ರತಿ ವರ್ಷದ ಜುಲೈ 1ರಂದು ಹುತಾತ್ಮರನ್ನು ತಪ್ಪದೇ ನೆನೆಯಲಾಗುತ್ತಿದೆ.








