ಕಾಲೇಜು ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ಚಿತ್ರೀಕರಣ: ದಾಖಲೆ ಇದ್ದರೆ ನೀಡಿ ಸಹಕರಿಸಿ, ತಪ್ಪು ಮಾಹಿತಿ ನೀಡಿದರೆ ಕ್ರಮ -ಎಸ್ಪಿ ಅಕ್ಷಯ್ ಮಚ್ಚೀಂದ್ರ
ಉಡುಪಿಯ ನೇತ್ರ ಕಾಲೇಜು ಶೌಚಾಲಯದಲ್ಲಿ ಮೊಬೈಲ್ ಫೋನ್ ಇಟ್ಟು ಚಿತ್ರೀಕರಣ ಮಾಡಿದ ವಿಚಾರಕ್ಕೆ ಸಂಬಂಧಿಸಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ವೇಳೆ ದಾಖಲೆ ಇದ್ದರೆ ಪೊಲೀಸರಿಗೆ ನೀಡಿ ಸಹಕರಿಸಿ ಎಂದು SP ಅಕ್ಷಯ್ ಮನವಿ ಮಾಡಿದ್ದಾರೆ.
ಉಡುಪಿ, ಜುಲೈ 25: ಉಡುಪಿಯ ನೇತ್ರ ಕಾಲೇಜು ಶೌಚಾಲಯದಲ್ಲಿ ಕದ್ದಮುಚ್ಚಿ ಮೊಬೈಲ್ ಫೋನ್ ಇಟ್ಟು ಚಿತ್ರೀಕರಣ ಮಾಡಿದ ವಿಚಾರಕ್ಕೆ ಸಂಬಂಧಿಸಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಅವರು ಪತ್ರಿಕಾಗೋಷ್ಠಿ ನಡೆಸಿ ಘಟನೆಯ ವಿವರಣೆ ನೀಡಿದ್ದಾರೆ. ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ಯುವತಿಯರು ಶೌಚಾಲಯಕ್ಕೆ ತೆರಳಿದ್ದಾಗ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ತಿಳಿಸಿದ್ದಾರೆ.
ಕಳೆದ ವಾರ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜು ವಿಚಾರ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ವಿಚಾರದ ಜೊತೆ ಬೇರೆ ಬೇರೆ ಉದ್ದೇಶದಿಂದ ಮಾಹಿತಿಗಳು ಶೇರ್ ಆಗುತ್ತಿದೆ. ಹಿಡನ್ ಕ್ಯಾಮರಾ ಮೂಲಕ ವಿಡಿಯೋ ಚಿತ್ರೀಕರಿಸಿದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಬ್ಯ್ಲಾಕ್ಮೇಲ್ ಬಗ್ಗೆ ವಿಡಿಯೋ ಹರಿದಾಡಿದ ಬಗ್ಗೆ ಗಮನ ಹರಿಸಿದ್ದೇವೆ. ಬೇರೆ ಕಡೆ ವಿಡಿಯೋ ಶೇರ್ ಆಗುತ್ತಿದೆ, ವಾಯ್ಸ್ ಎಡಿಟ್ ಮಾಡಲಾಗಿದೆ. ಸತ್ಯಾಸತ್ಯತೆ ಗೊತ್ತಿಲ್ಲದೆ ಎಲ್ಲೆಡೆ ವಿಡಿಯೋ ಶೇರ್ ಮಾಡಿದ್ರೆ ತಪ್ಪಾಗುತ್ತೆ. ವೈರಲ್ ಆಗಿರುವ ಬಗ್ಗೆ ಫೇಸ್ಬುಕ್, ವಾಟ್ಸಾಪ್ ಮೇಲೆ ನಿಗಾ ಇರಿಸಲಾಗಿದೆ. ರಶ್ಮಿ ಸಾವಂತ್ ಹೆಸರಿನಲ್ಲಿ ಟ್ವೀಟ್ ಬಗ್ಗೆ ಅಕೌಂಟ್ ಪರಿಶೀಲಿಸಿದ್ದೇವೆ. ಇದೇ ವಿಚಾರದಲ್ಲಿ ಅವರ ಮನೆಯವರ ಬಳಿ ಮಾತನಾಡಿದ್ದೇವೆ. ಯಾವುದೇ ದುರುದ್ದೇಶದಿಂದ ಮಾಹಿತಿ ಪಡೆದುಕೊಂಡದ್ದಲ್ಲ ಎಂದು ಅಕ್ಷಯ್ ಮಚ್ಚೀಂದ್ರ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಹಿತಾಸಕ್ತಿಯಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಯಾವುದೇ ಸುಳಿವು ಸಿಗುತ್ತಿಲ್ಲ. ಯುವತಿಯರ ಮೊಬೈಲ್ನಲ್ಲಿ ಯಾವುದೇ ಫೋಟೋ, ವಿಡಿಯೋ ಸಿಗ್ತಿಲ್ಲ. ಕಾಲೇಜು ನಿಯಮಾವಳಿ ಪ್ರಕಾರ ಅವರು ವಿಚಾರಣೆ ನಡೆಸಿದ್ದಾರೆ. ಫನ್ಗೋಸ್ಕರ ಇದೆಲ್ಲ ನಡೆದಿದೆ ಎಂದು ವಿದ್ಯಾರ್ಥಿನಿಯರು ಬರೆದುಕೊಟ್ಟಿದ್ದಾರೆ. ಬೇಡದ ವಿಚಾರ ಹರಿಬಿಟ್ಟು ಜನರ ಮನಸ್ಸಿನಲ್ಲಿ ಗೊಂದಲು ಸೃಷ್ಟಿಸುವುದು ಬೇಡ. ದಾಖಲೆ ಇದ್ದರೆ ಪೊಲೀಸರಿಗೆ ನೀಡಿ ಸಹಕರಿಸಿ ಎಂದು SP ಅಕ್ಷಯ್ ಮನವಿ ಮಾಡಿದ್ದು ತಪ್ಪು ಮಾಹಿತಿ ನೀಡಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಲೇಡಿಸ್ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ: ಉಡುಪಿಯ ಪ್ರತಿಷ್ಠಿತ ಕಾಲೇಜಿನ 3 ವಿದ್ಯಾರ್ಥಿನಿಯರು ಸಸ್ಪೆಂಡ್
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣ ನಡೆದಾಗ ನಾನು ಅಧಿವೇಶನದಲ್ಲಿದ್ದೆ. ತಪ್ಪಿತಸ್ಥ ವಿದ್ಯಾರ್ಥಿನಿಯರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಉಡುಪಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಜಿಲ್ಲೆ. ಮಹಿಳೆಯರಿಗೆ ಗೌರವ ಕೊಡುವ ಜಿಲ್ಲೆ. ಈ ಮೂರು ಹುಡುಗಿಯರ ವರ್ತನೆಯಿಂದ ತಲೆತಗ್ಗಿಸುವಂತಾಗಿದೆ. ಇದರಿಂದ ಜಿಲ್ಲೆಯ ಜನತೆಗೆ ಅಪಮಾನವಾಗಿದೆ. ಈ ರೀತಿಯ ಹುಡುಗಾಟಿಕೆ ಮಾಡುವುದು ಸರಿಯಲ್ಲ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಈ ಘಟನೆಯ ಬಗ್ಗೆ ನನಗೆ ಸಂಶಯ ಇದೆ. ಟಾಯ್ಲೆಟ್ ನಲ್ಲಿ ವಿಡಿಯೋ ಕ್ಯಾಮೆರಾ ಇಟ್ಟಿರುವುದು ಸರಿಯಲ್ಲ. ಮೂರು ಯುವತಿಯರ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇನೆ. ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳ ಗಮನಕ್ಕೂ ತರುತ್ತೇವೆ. ಸಂಘಟನೆಯಲ್ಲಿ ಕೆಲಸ ಮಾಡುವವರನ್ನು ಗಡಿ ಪಾರು ಮಾಡುತ್ತಾರೆ. ಆದರೆ ಇಂತವರ ಬಗ್ಗೆ ಮಾತನಾಡುತ್ತಿಲ್ಲ. ಮೊಬೈಲ್ ದಾಖಲೆ ಕಲೆ ಹಾಕಿ ಸೂಕ್ತ ಕ್ರಮ ಜರುಗಿಸಿ ಎಂದರು.
ಉಡುಪಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:01 pm, Tue, 25 July 23