Udupi News: ಉಡುಪಿ ನೇತ್ರ ಕಾಲೇಜು ಪ್ರಕರಣ: ಜುಲೈ 27 ರಂದು ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ
ಉಡುಪಿ ಜಿಲ್ಲೆಯ ನೇತ್ರ ಜ್ಯೋತಿ ಕಾಲೇಜು ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಸಿಕ್ಕಿಬಿದ್ದಿದ್ದರು. ಇವರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಜುಲೈ 27 ರಂದು ಪ್ರತಿಭಟನೆ ನಡೆಸಲಿದೆ.
ಬೆಂಗಳೂರು, ಜುಲೈ 25: ಉಡುಪಿಯ ನೇತ್ರ ಜ್ಯೋತಿ ಕಾಲೇಜು (Udupi Netra Jyothi College) ಶೌಚಾಲಯದಲ್ಲಿ ವಿದ್ಯಾರ್ಥಿನಿಯ ಚಿತ್ರೀಕರಣ ಮಾಡಿದ ಪ್ರಕರಣ ಸಂಬಂಧ ಮೂವರು ವಿದ್ಯಾರ್ಥಿನಿಯರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ (BJP) ಮಹಿಳಾ ಮೋರ್ಚಾವು ಜುಲೈ 27 ರಂದು ಪ್ರತಿಭಟನೆ ನಡೆಸಲಿದೆ. ಈ ಬಗ್ಗೆ ಎಂಎಲ್ಸಿ ಎನ್ ರವಿಕುಮಾರ್ (N Ravikumar) ಬಿಜೆಪಿ ಕಚೇರಿಯಲ್ಲಿ ಮಾಹಿತಿ ನೀಡಿದರು.
ಹಿಜಾಬ್ ವಿಚಾರದ ವೇಳೆ ನಾವು ಇನ್ನೊಬ್ಬರಿಗೆ ಮುಖ ತೋರಿಸಬಾರದು ಎಂದು ಧರ್ಮ ಹೇಳುತ್ತದೆ ಅಂತ ಹೇಳಿದ್ದರು. ನಿಮ್ಮ ಮುಖ ಯಾರೂ ನೋಡಬಾರದು ಎಂದು ಹೇಳಿ ವಸ್ತ್ರಧಾರಣೆ ಮಾಡುವವರು ಉಡುಪಿ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯರ ಚಿತ್ರೀಕರಣ ಮಾಡಿದ್ದು ಸರಿಯೇ? ಸರ್ಕಾರ ಈ ಬಗ್ಗೆ ಏನು ಹೇಳುತ್ತದೆ? ಎಂದು ಪ್ರಶ್ನಿಸಿದರು.
ಉಡುಪಿ ಘಟನೆಯನ್ನು ಖಂಡಿಸಿ ಹೋರಾಟಗಾರ್ತಿ, ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ರಶ್ಮಿ ಸಾಮಂತ್ ಅವರು ಟ್ವೀಟ್ ಮಾಡಿದ್ದರು. ಇದಾಗ ಬಳಿಕ ಪೊಲೀಸರು ರಶ್ಮಿ ನಿವಾಸಕ್ಕೆ ತೆರಳಿ ಅವರ ತಂದೆಯನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. “ಪೊಲೀಸರು ಭೇಟಿ ನೀಡಿದಾಗ ಮನೆಯಲ್ಲಿ ರಶ್ಮಿ ಮನೆಯಲ್ಲಿರಲಿಲ್ಲ. ಹೀಗಾಗಿ ಅವರ ತಂದೆಯನ್ನೇ ವಿಚಾರಣೆ ನಡೆಸಿ ಆಕೆಯ ಮಾಹಿತಿ ನೀಡುವಂತೆ ಪದೇಪದೇ ಕೇಳಿದ್ದಾರೆ” ಎಂದು ದೆಹಲಿ ಮೂಲದ ದಾವೆದಾರ ಆದಿತ್ಯ ಶ್ರೀನಿವಾಸನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಲೇಡಿಸ್ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ: ಉಡುಪಿಯ ಪ್ರತಿಷ್ಠಿತ ಕಾಲೇಜಿನ 3 ವಿದ್ಯಾರ್ಥಿನಿಯರು ಸಸ್ಪೆಂಡ್
“ತಮ್ಮ ಊರಿನಲ್ಲಿ ಬೆಳಕಿಗೆ ಬಂದಿರುವ ಅಪರಾಧದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನನ್ನ ಕಕ್ಷಿದಾರ ರಶ್ಮಿ ಸಾಮಂತ ಮತ್ತು ಅವರ ಕುಟುಂಬವನ್ನು ಪೊಲೀಸರು ಈ ರೀತಿ ನಡೆಸಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ” ಎಂದು ಆದಿತ್ಯ ಶ್ರೀನಿವಾಸನ್ ಹೇಳಿದ್ದಾರೆ.
ರಶ್ಮೀ ಸಾಮಂತ್ ಅವರ ಮೇಲೆ ಪೊಲೀಸರು ಒತ್ತಡ ಹಾಕಲು ಯತ್ನಿಸುತ್ತಿರುವ ಬಗ್ಗೆ ಮಾತನಾಡಿದ ಎಂಎಲ್ಸಿ ರವಿಕುಮಾರ್, ರಶ್ಮಿ ಸಾಮಂತ್ಗೆ ರಕ್ಷಣೆ ನೀಡಬೇಕು ಎಂದರು. ಅಲ್ಲದೆ, ವಿದ್ಯಾರ್ಥಿನಿಯ ವಿಡಿಯೋ ಹರಿಬಿಟ್ಟಿದ್ದಕ್ಕೆ ಏನು ಕ್ರಮ ಮಾಡುತ್ತೀರಿ ಎಂದು ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ
ರಾಜ್ಯದಲ್ಲಿ ಕಾಂಗ್ರೆಸ್ ಹಿಂದೂಗಳನ್ನು ವ್ಯವಸ್ಥಿತವಾಗಿ ಹಳಿಯುವ ಮತ್ತು ಅವರ ಮೇಲೆ ಸರ್ಕಾರಿ ಯಂತ್ರ ದುರ್ಬಳಕೆ ಮಾಡಿ ಆಕ್ರಮಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಉಡುಪಿಯ ಕಾಲೇಜಿನಲ್ಲಿ ನಡೆದ ಅಮಾನುಷ ಘಟನೆ ಬಗ್ಗೆ ಸುಮ್ಮನಿರುವ ಸರ್ಕಾರವನ್ನು ಪ್ರಶ್ನಿಸಿದ, ಹಿಂದೂ ವಿದ್ಯಾರ್ಥಿಗಳ ಪರ ಧ್ವನಿಯಾದ ಉಡುಪಿಯ ನಿವಾಸಿ ರಶ್ಮಿ ಸಾಮಂತ ಎಂಬುವವರ ಮನೆಗೆ ತುಘಲಕ್ ಸರ್ಕಾರವು ಪೊಲೀಸರನ್ನು ಕಳುಹಿಸಿ ಬೆದರಿಸುವ ಕೆಲಸ ಮಾಡಿದೆ ಎಂದು ಆರೋಪಿಸಿದೆ.
ಸುಳ್ಳು ಸುದ್ದಿ ಎಂಬ ವೃಥಾ ಆರೋಪ ಹೊರಿಸಿ ರಶ್ಮಿ ಸಾಮಂತರವರ ಮನೆಗೆ ರಾತ್ರೋ ರಾತ್ರಿ ಅಕ್ರಮವಾಗಿ ಪೊಲೀಸರು ನುಗ್ಗಿ ಕಿರುಕುಳ ನೀಡಲು ಯಾವ ಕಾನೂನಿನಲ್ಲಿ ಅವಕಾಶವಿದೆ? ಯಾವ ನ್ಯಾಯಾಲಯದ ಮೂಲಕ ವಾರೆಂಟ್ ಪಡೆದು ಪೊಲೀಸರು ಪರಿಶೀಲನೆ ಹೆಸರಲ್ಲಿ ದಬ್ಬಾಳಿಕೆ ನಡೆಸಿದ್ದಾರೆ? ಒಂದು ಟ್ವೀಟ್ ಮೂಲಕ ಸತ್ಯವನ್ನು ಬಹಿರಂಗಪಡಿಸಿದರೆ ತುಘಲಕ್ ಸರ್ಕಾರದ ಕಣ್ಣು ಕೆಂಪಾಗಿದ್ದು ಏಕೆ? ಎಂದು ಬಿಜೆಪಿ ಪ್ರಶ್ನಿಸಿದೆ.
ರಾಜ್ಯದಲ್ಲಿ @INCKarnataka ಹಿಂದೂಗಳನ್ನು ವ್ಯವಸ್ಥಿತವಾಗಿ ಹಳಿಯುವ ಮತ್ತು ಅವರ ಮೇಲೆ ಸರ್ಕಾರಿ ಯಂತ್ರ ದುರ್ಬಳಕೆ ಮಾಡಿ ಆಕ್ರಮಿಸುವ ಕೆಲಸಕ್ಕೆ ಕೈ ಹಾಕಿದೆ.
ಉಡುಪಿಯ ಕಾಲೇಜಿನಲ್ಲಿ ನಡೆದ ಅಮಾನುಷ ಘಟನೆ ಬಗ್ಗೆ ಸುಮ್ಮನಿರುವ ಸರ್ಕಾರವನ್ನು ಪ್ರಶ್ನಿಸಿದ, ಹಿಂದೂ ವಿದ್ಯಾರ್ಥಿಗಳ ಪರ ಧ್ವನಿಯಾದ ಉಡುಪಿಯ ನಿವಾಸಿ ರಶ್ಮಿ ಸಾಮಂತ ಎಂಬುವವರ ಮನೆಗೆ…
— BJP Karnataka (@BJP4Karnataka) July 25, 2023
ಸಿದ್ದರಾಮಯ್ಯ ಅವರ ಸರ್ಕಾರ ಜಿಹಾದಿ ಮನಸ್ಥಿತಿಯ ಪಟಾಲಂಗಾಗಿ ಖುದ್ದು ಪೊಲೀಸರನ್ನು ಛೂ ಬಿಟ್ಟಿತ್ತೇ? ರಶ್ಮಿ ಪೋಷಕರಿಗೆ ರಾತ್ರಿ ವೇಳೆ ಪದೇ ಪದೆ ಕರೆ ಮಾಡಿ ಕಿರುಕುಳ ನೀಡಿದ್ದು ಕಾನೂನುಬಾಹಿರ. ಒಲೈಕೆಗಾಗಿ ಸಿದ್ದರಾಮಯ್ಯರವರ ಸರ್ಕಾರ ಕಾನೂನು ಕೈಗೆತ್ತಿಕೊಂಡರೆ, ಯಾರೂ ಕೈಕಟ್ಟಿ ಕೂರುವುದಿಲ್ಲ. ನಿಮ್ಮ ವಿರುದ್ಧ ಹೋರಾಟ ಶತಸಿದ್ದ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
“ಉಡುಪಿ ಘಟನೆ ಸಾಮಾನ್ಯವಲ್ಲ ಮತ್ತು ತಪ್ಪಾಗಿ ನಡೆದಿರುವುದೂ ಅಲ್ಲ. ವಾಶ್ ರೂಂನಲ್ಲಿ ಹಿಂದೂ ಯುವತಿಯ ವಿಡಿಯೋವನ್ನು ರೆಕಾರ್ಡ್ ಮಾಡಿ ಅದನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಮೂವರು ಮುಸ್ಲಿಂ ಹುಡುಗಿಯರನ್ನು ಅಮಾನತುಗೊಳಿಸಲಾಗಿದೆ ಮತ್ತು ಪ್ರಕರಣ ದಾಖಲಿಸಲಾಗಿದೆ. ಇದು ಹಿಂದೂ ಹುಡುಗಿಯರ ವಿರುದ್ಧ ಪೂರ್ವಯೋಜಿತ ಪಿತೂರಿಯೇ? ಉಡುಪಿ ಎಸ್ಪಿ ಈ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ.
ಉಡುಪಿ ಪೊಲೀಸರೇ ಏನಾಗುತ್ತಿದೆ?
ರಾತ್ರಿ ರಶ್ಮಿಯವರ ಮನೆಗೆ ಪೊಲೀಸರನ್ನು ಭಯಪಡಿಸಲು ಕಳಿಸಿದ್ರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯ ಹೇಳಿದರೂ ಪೊಲೀಸ್ ಕಿರುಕುಳವಾ? ಉಡುಪಿ ಪೊಲೀಸರೇ ಏನಾಗುತ್ತಿದೆ? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ. ಅಲ್ಲದೆ, ಕರ್ನಾಟಕದ ಡಿಜಿಪಿಗೆ ಟ್ವಿಟರ್ನಲ್ಲಿ ಟ್ಯಾಗ್ ಮಾಡಿದ ಯತ್ನಾಳ್, “ನಿಮ್ಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ಕ್ರಮ ಕೈಗೊಳ್ಳಿ, ಅವರಿಗೆ ರಾಜಕೀಯ ಮಾಡಬೇಕಿದ್ರೆ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲ್ಲುವುದಕ್ಕೆ ಹೇಳಿ” ಎಂದು ಮನವಿ ಮಾಡಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Tue, 25 July 23