ಶಾಸಕಾಂಗ ಸಭೆ ಕರೆಯುವಂತೆ ಒತ್ತಾಯಿಸಿದ್ಯಾರು? ಸಿಎಂಗೆ ಪತ್ರ ಬರೆದಿದ್ಯಾರು? ಪತ್ರದಲ್ಲೇನಿದೆ? ಎಲ್ಲಾ ಅಂಶ ಬಿಚ್ಚಿಟ್ಟ ರಾಯರೆಡ್ಡಿ
ಕಾಂಗ್ರೆಸ್ ಶಾಸಕರ ಅಸಮಾಧಾನ ಸ್ಫೋಟಗೊಂಡಿದ್ದು, ಸಚಿವರ ವಿರುದ್ಧ ಸಿಎಂಗೆ ದೂರು ನೀಡಿದ್ದಾರೆ. ಹಾಗಾದ್ರೆ, ಮುಖ್ಯಮಂತ್ರಿಗೆ ಪತ್ರ ಬರೆದಿದ್ಯಾರು? ಪತ್ರದಲ್ಲೇನಿದೆ? ಎನ್ನುವ ಎಲ್ಲಾ ಅಂಶಗನ್ನು ಸ್ವತಃ ಬಸವರಾಜ ರಾಯರೆಡ್ಡಿ ಬಿಚ್ಚಿಟ್ಟಿದ್ದಾರೆ.
ವಿಜಯನಗರ, (ಜುಲೈ 25): ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಸಚಿವರು ಹಾಗೂ ಕಾಂಗ್ರೆಸ್ (Congress) ಶಾಸಕರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು, ಈ ಬಗ್ಗೆ ಶಾಸಕರು ಸಿಎಂ ಸಿದ್ದರಾಮಯ್ಯಗೆ (Siddaramaiah) ದೂರು ನೀಡಿದ್ದಾರೆ. ಅಲ್ಲದೇ ಕೂಡಲೇ ಶಾಸಕಾಂಗ ಸಭೆ (CLP Meeting) ಕರೆದ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ(basavaraj rayareddy) ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ. ಇದೀಗ ಈ ಬಗ್ಗೆ ಸ್ವತಃ ಬಸವರಾಜ ರಾಯರೆಡ್ಡಿ ವಿಜಯನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಸಿಎಂಗೆ ಪತ್ರ ಬರೆದಿದ್ಯಾರು? ಪತ್ರದಲ್ಲೇನಿದೆ? ಯಾಕೆ ಪತ್ರ ಬರೆಯಲಾಗಿದೆ? ಶಾಸಕಾಂಗ ಸಭೆ ಕರೆಯುವಂತೆ ಒತ್ತಾಯಿಸಿದ್ಯಾಕೆ ಎನ್ನುವುದರ ಬಗ್ಗೆ ಎಲ್ಲಾ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಸಚಿವರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಶಾಸಕರು: ಶಾಸಕಾಂಗ ಸಭೆ ಬಗ್ಗೆ ಸಿಎಂ, ಡಿಸಿಎಂ ಹೇಳಿದ್ದಿಷ್ಟು
ಸರ್ಕಾರದ ಬಗ್ಗೆ ನನಗೆ ವ್ಯಯಕ್ತಿಕವಾಗಿ ಅಸಮಾಧಾನ ಇಲ್ಲ. ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡಿಲ್ಲ ಅಂದ್ರೆ ಯಾರು ಮೆಚ್ಚಲ್ಲ. ನನ್ನ ವ್ಯಯಕ್ತಿಕ ಆಸೆಗಳು ಬೇರೆ. ಶಾಸಕಾಂಗ ಪಕ್ಷದ ಸಭೆ ಕರಿಯಬೇಕು ಎನ್ನುವುದು ಶಾಸಕರ ಒತ್ತಾಯ ಇತ್ತು. ಆಳಂದ ಶಾಸಕ ಬಿ ಆರ್ ಪಾಟೀಲರು ಸಭೆ ಕರೆದು ಚರ್ಚೆ ಆಗಲಿ ಎಂದು ಹೇಳಿದ್ದರು. ಅದರಂತೆ ಅವರು ಪತ್ರ ರೆಡಿ ಮಾಡಿಕೊಂಡು ಬಂದು ಸಹಿ ಮಾಡಿ ಅಂದ್ರು. ಅದಕ್ಕಾಗಿ ನಾನು ಸಹ ಸಹಿ ಮಾಡಿದೆ ಎಂದು ಸ್ಪಷ್ಟಪಡಿಸಿದರು.
ಪತ್ರದಲ್ಲಿ ಬೇರೇನು ಇಲ್ಲ. ಶಾಸಕಾಂಗ ಪಕ್ಷದ ಸಭೆ ಕರಿಯಬೇಕು, ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಯಬೇಕು ಎಂದು ಬರೆದಿದ್ದಾರೆ. ಅದರ ಬಗ್ಗೆ ಚರ್ಚೆ ಆಗಬೇಕು ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಅದರ ಬಗ್ಗೆ ಮುಕ್ತವಾಗಿ ಚರ್ಚೆ ಆಗಬೇಕು. ಸರ್ಕಾರ ಶಾಸಕರ ಮಧ್ಯೆ ಸೌದಾರ್ಹಯುತವಾಗಿ ಚರ್ಚೆ ಆಗಬೇಕು ಅಂದಿದ್ದಾರೆ. ಹೊಸದಾಗಿ ಶಾಸಕರು ಆಗಿದ್ದಾರೆ. ಸಚಿವರು ಆಗಿದ್ದಾರೆ. ಅವರ ಅವರ ಮಧ್ಯೆ ಸೌದಾರ್ಹಯುತ ಚರ್ಚೆ ಆಗಬೇಕು. ಸುಮಾರು 35 ಶಾಸಕರು ಸಹಿ ಮಾಡಿದ್ದಾರೆ. ಅದಕ್ಕಾಗಿ ಸಿಎಂ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಇದರಲ್ಲಿ ಅಸಮಾಧಾನ ಇದೆ ಎನ್ನುವುದು ಸರಿ ಅಲ್ಲ. ನಾನು ಸಿದ್ದರಾಮಯ್ಯ ಆಪ್ತ. ಪಕ್ಷದ ಶಾಸಕ ಎಂದು ಹೇಳಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ