ಪ್ರಧಾನಿ ಮೋದಿ ಉಡುಪಿ ಭೇಟಿ: ಶ್ರೀ ಕೃಷ್ಣ ಮಠ ಸುತ್ತ ಬಿಗಿ ಬಂದೋಬಸ್ತ್, ದೇಗುಲಕ್ಕೆ ಬರುವವರು ಈ ಮಾರ್ಗಸೂಚಿ ಪಾಲಿಸಿ

PM Modi Udupi visit: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ರಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಈ ನಿಮಿತ್ತ ಜಿಲ್ಲಾಡಳಿತ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ಡ್ರೋನ್ ಹಾರಾಟ ನಿಷೇಧಿಸಿದೆ. ಅಂಗಡಿ ಮುಂಗಟ್ಟುಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚಿಸಿದೆ. ಸಾರ್ವಜನಿಕರಿಗೂ ಕೆಲವು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ವಿವರಗಳು ಇಲ್ಲಿವೆ.

ಪ್ರಧಾನಿ ಮೋದಿ ಉಡುಪಿ ಭೇಟಿ: ಶ್ರೀ ಕೃಷ್ಣ ಮಠ ಸುತ್ತ ಬಿಗಿ ಬಂದೋಬಸ್ತ್, ದೇಗುಲಕ್ಕೆ ಬರುವವರು ಈ ಮಾರ್ಗಸೂಚಿ ಪಾಲಿಸಿ
ಉಡುಪಿ ಶ್ರೀ ಕೃಷ್ಣ ದೇವರು ಹಾಗೂ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
Updated By: Ganapathi Sharma

Updated on: Nov 26, 2025 | 8:56 AM

ಉಡುಪಿ, ನವೆಂಬರ್ 26: ಉಡುಪಿ ಶ್ರೀ ಕೃಷ್ಣ ಮಠಕ್ಕೆ (Udupi Sri Krishna Matha) ಪ್ರಧಾನಿ ನರೇಂದ್ರ ಮೋದಿ (Narendra Modi ನವೆಂಬರ್ 28ಕ್ಕೆ ಭೇಟಿ ನೀಡಲಿರುವ ಕಾರಣ ವಿವಿಧ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಆದೇಶ ಹೊರಡಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 163 ಅನ್ವಯ ಈ ಆದೇಶ ಜಾರಿಗೊಳಿಸಲಾಗಿದೆ. ಪ್ರಧಾನಿಗಳ ಸಂಚಾರ ಮತ್ತು ಭೇಟಿ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಲಿಪ್ಯಾಡ್ ವಠಾರ, ಶ್ರೀ ಕೃಷ್ಣ ಮಠ ವಠಾರ ಹಾಗೂ ಪ್ರವಾಸಿ ಮಂದಿರದ ಸುತ್ತಮುತ್ತ ಇರುವ ಅಂಗಡಿ–ಮುಂಗಟ್ಟುಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚಿಸಲಾಗಿದೆ. ಇದೇ ರೀತಿ ಪ್ರಧಾನಿ ಸಂಚರಿಸುವ ಮಾರ್ಗದ ಎರಡೂ ಬದಿಯಲ್ಲಿರುವ ಅಂಗಡಿಗಳನ್ನೂ ನವೆಂಬರ್ 28ರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮುಚ್ಚುವಂತೆ ಜಿಲ್ಲಾಡಳಿತ ನಿರ್ದೇಶಿಸಿದೆ.

ಡ್ರೋನ್ ಹಾರಾಟ ನಿಷೇಧ

ನವೆಂಬರ್ 26 ಬೆಳಿಗ್ಗೆ 6 ಗಂಟೆಯಿಂದ ನವೆಂಬರ್ 28 ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ‘ನೋ ಫ್ಲೈ ಜೋನ್’ ಎಂದು ಘೋಷಿಸಲಾಗಿದೆ.

ಸಾರ್ವಜನಿಕರಿಗೆ ಏನೇನು ನಿರ್ಬಂಧ?

ಪ್ರಧಾನಿಯ ವೀಕ್ಷಣೆಗೆ ಬರುವ ಸಾರ್ವಜನಿಕರು ಬ್ಯಾಗ್, ನೀರಿನ ಬಾಟಲ್, ಧ್ವಜ, ಸ್ಟಿಕರ್, ಬಲೂನು, ಪಟಾಕಿ, ಲೂಸ್ ಪಾಲಿಥಿನ್ ವಸ್ತುಗಳನ್ನು ತರದಂತೆ ಸೂಚಿಸಲಾಗಿದೆ. ಆದೇಶ ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಉಡುಪಿಗೆ ಬರುತ್ತಿರೋದೇಕೆ ಪ್ರಧಾನಿ ಮೋದಿ?

ಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮಠದಲ್ಲಿ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ಮೋದಿ ಉಡುಪಿಗೆ ಆಗಮಿಸುತ್ತಿದ್ದಾರೆ. ನವೆಂಬರ್ 28ರಂದು ಬೆಳಿಗ್ಗೆ 11.05ಕ್ಕೆ ದೆಹಲಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ತಕ್ಷಣವೇ 11.10ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಲಿದ್ದಾರೆ. ಅವರು ಬೆಳಿಗ್ಗೆ 11.35ಕ್ಕೆ ಉಡುಪಿಯ ಹೆಲಿಪ್ಯಾಡ್ ತಲುಪಲಿದ್ದಾರೆ.

ಇದನ್ನೂ ಓದಿ: ನ.28ರಂದು ಉಡುಪಿಯಲ್ಲಿ ಮೋದಿ ರೋಡ್​ ಶೋ ರದ್ದು; ಪ್ರಧಾನಿ ಭೇಟಿಯ ವೇಳಾಪಟ್ಟಿ ಇಲ್ಲಿದೆ

ಪ್ರಧಾನಿ ಮೋದಿ ಅವರು ಕೃಷ್ಣ ಮಠದ ಸುವರ್ಣ ಮುಖಮಂಟಪ ಮತ್ತು ಕನಕನ ಕಿಂಡಿಯ ಸ್ವರ್ಣ ಕವಚವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಶ್ರೀಕೃಷ್ಣನ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ ಲಕ್ಷಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಭಗವದ್ಗೀತೆಯ 10 ಶ್ಲೋಕಗಳನ್ನು ಕೂಡ ಅವರು ಪಠಿಸಲಿದ್ದಾರೆ. ಈ ಧಾರ್ಮಿಕ ಉತ್ಸವದಲ್ಲಿ ಒಂದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:57 am, Wed, 26 November 25