ಉಡುಪಿ, ಅಕ್ಟೊಬರ್ 14: ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು, ರಾಜ್ಯದಲ್ಲಿ ತುಂಬಾ ಸಮಸ್ಯೆ ಇದೆ. ಒಂದು ವಾರದ ಒಳಗೆ ಸಮಸ್ಯೆ ಬಗೆ ಹರಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಬಯಲು ಸೀಮೆ ಕಡೆ ಕೂಡಾ ಸಮಸ್ಯೆ ಬಹಳ ಇದೆ ಅದನ್ನು ಸರಿಪಡಿಸಬೇಕು ಎಂಬುದು ಸರ್ಕಾರದ ಉದ್ದೇಶ. ಶೀಘ್ರದಲ್ಲೇ ಲೋಡ್ ಶೆಡ್ಡಿಂಗ್ ಸಮಸ್ಯೆ ಸರಿಪಡಿಸುತ್ತೇವೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ (N chaluvaraya swamy) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರ ಜಿಲ್ಲೆಯಿಂದ ವಿದ್ಯುತ್ ಖರೀದಿ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ದುಬಾರಿಯಾದರೂ ವಿದ್ಯುತ್ ಖರೀದಿ ಮಾಡಲೇಬೇಕಾಗುತ್ತದೆ ಎಂದಿದ್ದಾರೆ.
ಸಚಿವ ಚೆಲುವರಾಯಸ್ವಾಮಿ ಪತ್ನಿಗೆ ಮಂಡ್ಯ ಎಂಪಿ ಟಿಕೆಟ್ ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನನ್ನ ಕುಟುಂಬದವರನ್ನು ರಾಜಕೀಯದಲ್ಲಿ ಸ್ಪರ್ಧೆಗಿಳಿಸುವ ಬಗ್ಗೆ ಆಲೋಚನೆ ಮಾಡಿಲ್ಲ. ಅಭ್ಯರ್ಥಿ ಯಾರೆಂದು ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡುತ್ತದೆ. ಸ್ನೇಹಿತರು ಪಕ್ಷದ ಮುಖಂಡರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ನಡೆಯುತ್ತಿರುವ ಕಮಿಷನ್ ಲಾಬಿಗಳು ಬಹಿರಂಗ: ಬಸವರಾಜ ಬೊಮ್ಮಾಯಿ
ಮಂತ್ರಿಗಳ ಕುಟುಂಬದಲ್ಲೇ ಒಬ್ಬರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ. ಅವರ ಅಭಿಪ್ರಾಯ ತಪ್ಪು ಎಂದು ನಾನು ಹೇಳಕ್ಕಾಗಲ್ಲ. ಕುಟುಂಬದ ಒಬ್ಬರಿಗೆ ಅಭ್ಯರ್ಥಿತನ ಕೊಡಬೇಕು ಎಂದು ಅವರ ಅಭಿಪ್ರಾಯ
ನಾನು ಈವರೆಗೆ ಆಲೋಚನೆ ಮಾಡಿಲ್ಲ. ಹೈಕಮಾಂಡ್ ಪಕ್ಷದ ಲೀಡರ್ಗಳು ಎಲ್ಲರೂ ಕುಳಿತು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.
ಬ್ರಹ್ಮಾವರ ಶುಗರ್ ಫ್ಯಾಕ್ಟರಿ ಗುಜುರಿ ಗೋಲ್ ಮಾಲ್ ವಿಚಾರವಾಗಿ ಮಾತನಾಡಿ, ಗುಜರಿ ವಿಲೇವಾರಿ ವಿಚಾರದಲ್ಲಿ ಗೋಲ್ ಮಾಲ್ ನಡೆದಿರುವೆ ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಗಮನಕ್ಕೆ ತರಲಾಗಿದೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಬ್ರಹ್ಮಾವರದಲ್ಲಿ ಹೊಸ ಶುಗರ್ ಫ್ಯಾಕ್ಟರಿ ಆರಂಭದ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರಕರಣ ತನಿಖೆಗೆ ಆದೇಶ ಮಾಡುವ ಹಂತದಲ್ಲಿ ಇದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಇದನ್ನೂ ಓದಿ: ಕಲಾವಿದರ ಬಳಿ ಕಮಿಷನ್ ಕೇಳಿದವರು ಲಕ್ವಾ ಹೊಡೆದು ಸಾಯುತ್ತಾರೆ: ಕೆಎಸ್ ಈಶ್ವರಪ್ಪ
ರಾಜ್ಯದ ಎಲ್ಲಾ ಜಿಲ್ಲೆಯಿಂದ 15 ಕಡೆ ಕೃಷಿ ಕಾಲೇಜಿಗೆ ಬೇಡಿಕೆ ಇದೆ. ಕೃಷಿ ಕಾಲೇಜಿಗೆ ಸಂಶೋಧನಾ ಕೇಂದ್ರ, ಜಮೀನು -ಕಟ್ಟಡ ಎಲ್ಲವೂ ಉಡುಪಿಯಲ್ಲಿದೆ. ಕೃಷಿ ಕಾಲೇಜಿಗೆ ಉಡುಪಿ ಉತ್ತಮ ಜಿಲ್ಲೆ ಎಂದು ಅನಿಸುತ್ತಿದೆ. ಕೃಷಿ ವಿವಿ ಮತ್ತು ಸರ್ಕಾರದ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸಚಿವ ಚಲುವರಾಯಸ್ವಾಮಿ ಲೇವಡಿ ಮಾಡಿದ್ದು, ಬಿಜೆಪಿ, ಜೆಡಿಎಸ್ನವರಿಗೆ ಈ ಹಿಂದಿನ ಒಂದು ಕಹಿ ಅನುಭವವಾಗಿದೆ. ಕಾಂಗ್ರೆಸ್, ಜೆಡಿಎಸ್ ಈ ಹಿಂದೆ ದೋಸ್ತಿ ಮಾಡಿಕೊಂಡಿದ್ದೆವು. ಬಿಜೆಪಿಗೆ ಈಗ ಒಂದು ಹೊಸ ಅನುಭವ. ದೇವೇಗೌಡರ ಮಾತನ್ನು ಕೇಳದೆ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಪಕ್ಷದ ಭಿನ್ನಾಭಿಪ್ರಾಯ ಬದಿಗೊತ್ತಿ ಮೈತ್ರಿ ಮಾಡಿಕೊಂಡಿದ್ದಾರೆ. ಈ ಮೈತ್ರಿಯಿಂದ ಬಿಜೆಪಿ ಹಾಗೂ ಜೆಡಿಎಸ್ಗೆ ಉಪಯೋಗ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 20 ಸೀಟ್ ಗೆಲ್ಲಲಿದೆ. ಉಳಿದ 8ರಲ್ಲಿ ಯಾರಿಗೆ ಎಷ್ಟು ಎಂದು ಅವರೇ ಲೆಕ್ಕ ಹಾಕಿಕೊಳ್ಳಲಿ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.