ರುದ್ರಭೂಮಿ ಜಾಗವನ್ನು ಕಬಳಿಸಿದ ಖದೀಮರು, ಕಂಡು ಕಾಣದಂತೆ ಕುಳಿತ ಅಧಿಕಾರಿಗಳು, ಶಾಸಕರು
ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ವ್ಯಾಪ್ತಿಯ ಕಾಲ್ತೋಡು ಗ್ರಾಮದ ರುದ್ರಭೂಮಿಯನ್ನು ಕಬಳಿಸಿದ ಖದೀಮರು, ಕಂಡು ಕಾಣದಂತೆ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು ಮತ್ತು ಶಾಸಕರು

ಉಡುಪಿ (Udupi) ಜಿಲ್ಲೆಯ ಅತ್ಯಂತ ಹಿಂದುಳಿದ ಕ್ಷೇತ್ರವಾದ ಬೈಂದೂರು (Baindur) ತಾಲೂಕು ವ್ಯಾಪ್ತಿಯ ಕಾಲ್ತೋಡು ಗ್ರಾಮದ ಜನರಿಗೆ ಸತ್ತ ಮೇಲೆ ಮುಕ್ತಿ ಇಲ್ಲ. ಗ್ರಾಮದ 25-30 ಮನೆಗಳಿಗಾಗಿ ರುದ್ರಭೂಮಿ ಜಾಗ ಮೀಸಲಿರಿಸಿದ್ದು, ಸದ್ಯ ಆ ಜಾಗವು ಉಳ್ಳವರು ಕಬಳಿಕೆ ಮಾಡಿದ್ದಾರೆ. ಬೈಂದೂರು ತಾಲೂಕು ವ್ಯಾಪ್ತಿಯ ಕಾಲ್ತೋಡು ಗ್ರಾಮದ ಯಡೇರಿ ಜನತಾ ಸರ್ವೇ ನಂಬರ್ 293/* ರಲ್ಲಿ 0.50 ಎಕರೆ ಸ್ಥಳವು 1998 ರಂದು ಮಾನ್ಯ ಸಹಾಯಕ ಕಮೀಷನರ್ ಆದೇಶದಂತೆ ಹಿಂದೂ ರುದ್ರಭೂಮಿಗೆ ಕಾಯ್ದಿರಿಸಲಾಗಿತ್ತು. ಸದ್ಯ ಅದೇ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವುದು ಗ್ರಾಮದ ಜನರ ಸಮಸ್ಯೆಗೆ ಕಾರಣವಾಗಿದೆ. ಈ ಕುರಿತು ಸ್ಥಳೀಯರು ಈಗಾಗಲೇ ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರರಿಗೆ, ಗ್ರಾಮ ಪಂಚಾಯತ್ ಕಾಲ್ತೋಡು ಇವರಿಗೆ ಮನವಿ ನೀಡಿದ್ದಾರೆ. ಆದರೆ ಹಣಬಲ, ರಾಜಕೀಯ ಬಲ, ತೋಳ್ಬಲ ಇರುವ ವ್ಯಕ್ತಿಗಳು ಜಾಗ ಕಬಳಿಕೆಯಲ್ಲಿ ಶಾಮೀಲಾಗಿದ್ದು, ಯಾವ ಅಧಿಕಾರಿಗಳು ಕೂಡ ಸ್ಥಳೀಯರ ಸಮಸ್ಯೆಗೆ ಕ್ಯಾರೆ ಅನ್ನುತ್ತಿಲ್ಲಾ.
ಯಡೇರಿ ಜನತಾ ಕಾಲೋನಿಯಲ್ಲಿ 25-30 ಮನೆಗಳಿದ್ದು, ಕೇವಲ 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಇಲ್ಲಿನ ಸ್ಥಳೀಯರು ಮೃತಪಟ್ಟರೆ, ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಅಂಗೈ ಅಷ್ಟು ಜಾಗವು ಇಲ್ಲವಾಗಿದೆ. ಕಳೆದ ಬಾರಿ ನಡೆದ ಗ್ರಾಮ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡುತ್ತಿದ್ದಾಗ, ಕೆಲವು ಪುಡಾರಿಗಳು ರಾಜಕಾರಣಿಗಳೊಂದಿಗೆ ಗ್ರಾಮ ಸಭೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಅಲ್ಲದೇ ಜನತಾ ಕಾಲೋನಿಯ ಮಹಿಳೆಯರಿಗೆ ಗ್ರಾಮ ಸಭೆಯಲ್ಲಿ ಬೆದರಿಕೆಯೊಡ್ಡಿರುವ ಪ್ರಸಂಗ ಕೂಡ ನಡೆದಿತ್ತು ಎನ್ನುತ್ತಾರೆ ಸ್ಥಳೀಯರು. ಇದಷ್ಟೇ ಅಲ್ಲದೇ ಹೊರಗಿನಿಂದ ಜನ ಕರೆಯಿಸಿ ನಮಗೆ ರುದ್ರ ಭೂಮಿ ಬೇಡ ಎನ್ನುವ ಹೇಳಿಕೆಯನ್ನು ಹೇಳಿಸುವ ಮೂಲಕ ರುದ್ರಭೂಮಿ ಬೇಡಿಕೆಗೆ ತಣ್ಣೀರು ಎರೆಚುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಒಟ್ಟಾರೆಯಾಗಿ ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆಗೆ ಇದುವರೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ. ಬಡವರಾಗಿ ಹುಟ್ಟಿದ್ದು ತಪ್ಪೇ ಎನ್ನುವ ಸ್ಥಳೀಯರು, ಮನೆಯವರು ಮೃತಪಟ್ಟರೆ ಶವ ಸಂಸ್ಕಾರಕ್ಕೆ ಜಾಗ ಹುಡುಕುವ ಸ್ಥಿತಿ ಮುಂದುವರೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




