ಉಡುಪಿ: ಕಾಲು ಸಂಕ ದಾಟುವಾಗ ಎರಡನೇ ತರಗತಿಯ ವಿದ್ಯಾರ್ಥಿನಿ ಕಾಲು ಜಾರಿ ನೀರಿಗೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ಸಮೀಪ ನಡೆದಿದೆ. ಚಪ್ಪರಿಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ 7 ವರ್ಷದ ಸನ್ನಿಧಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಸನ್ನಿಧಿ ಶಾಲೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ದುರಂತ ಸಂಭವಿಸಿದೆ. ನೀರುಪಾಲಾದ ವಿದ್ಯಾರ್ಥಿನಿ ಸನ್ನಿಧಿ ಬೊಳಂಬಳ್ಳಿ ಗ್ರಾಮದ ನಿವಾಸಿ. ಮಕ್ಕಿಮನೆ ಪ್ರದೀಪ್ ಪೂಜಾರಿ, ಸುಮಿತ್ರಾ ದಂಪತಿ ಪುತ್ರಿ. ಬಾಲಕಿ ನಿವಾಸಕ್ಕೆ ಶಾಸಕ ಸುಕುಮಾರ್ ಶೆಟ್ಟಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ಬೈಂದೂರು ತಹಶೀಲ್ದಾರ್ ಕಿರಣ್ ಗೋರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಿರಂತರ ಮಳೆಯಿಂದಾಗಿ ಕುಸಿದು ಬಿದ್ದ ಶಾಲಾ ಕಟ್ಟಡ
ನಿರಂತರ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದ ಬಳಿಯ ಶಾಲಾ ಕಟ್ಟಡ ಕುಸಿದು ಬಿದ್ದಿದೆ. ಶಾಲೆಯಲ್ಲಿ ಮಕ್ಕಳು ಇಲ್ಲದ್ದರಿಂದ ಭಾರಿ ಅನಾಹುತ ತಪ್ಪಿದೆ. ಭಾರಿ ಮಳೆಯಿಂದಾಗಿ ಬೈದುವಳ್ಳಿ ಸೇತುವೆಯೂ ಮುಳುಗಿದೆ. ಸೇತುವೆ ಮುಳುಗಡೆಯಿಂದ ಬೈದುವಳ್ಳಿ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.
Published On - 7:35 pm, Mon, 8 August 22