ಉಡುಪಿ: ಆಝಾನ್ ವಿರುದ್ಧ ಶ್ರೀರಾಮಸೇನೆಯು ಅಭಿಯಾನವನ್ನು ಚುರುಕುಗೊಳಿಸಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉಡುಪಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶ್ರೀರಾಮಸೇನೆ ಕಾರ್ಯಕರ್ತರು ದೂರು ನೀಡಿದರು. ಮಸೀದಿಗಳಲ್ಲಿ ಆಝಾನ್ ಶಬ್ದಕ್ಕೆ ನಿಯಂತ್ರಣ ಹೇಳಬೇಕು. ನ್ಯಾಯಾಲಯದ ತೀರ್ಪು ಪಾಲಿಸಲು ಆಗ್ರಹಿಸಿ ಮೇ 9ರಿಂದ ಹೋರಾಟ ತೀವ್ರಗೊಳಿಸಲು ಶ್ರೀರಾಮಸೇನೆ ನಿರ್ಧರಿಸಿದ್ದು, ಆಝಾನ್ ಕೂಗುವ ಹೊತ್ತಿಗೆ ದೇವಾಲಯಗಳಲ್ಲಿ ಸುಪ್ರಭಾತ ಹಾಕಲು ಶ್ರೀರಾಮಸೇನೆ ಚಿಂತನೆ ನಡೆಸಿದೆ. ಸಂಘರ್ಷಕ್ಕೆ ಅವಕಾಶ ಇಲ್ಲದಂತೆ ಆಝಾನ್ಗೆ ವಿರೋಧ ವ್ಯಕ್ತಪಡಿಸಲು ಶ್ರೀರಾಮಸೇನೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ.
ದೇವಾಲಯಗಳಿಗೆ ಮೈಕ್ಗಳನ್ನು ಅಳವಡಿಸಿ, ಸುಪ್ರಭಾತ ಹಾಕಲು ಮನವಿ ಮಾಡಲು ಶ್ರೀರಾಮಸೇನೆ ನಿರ್ಧರಿಸಿದೆ ಎಂದು ಶ್ರೀರಾಮಸೇನೆಯ ಮುಖಂಡ ಮೋಹನ್ ಭಟ್ ಹೇಳಿದರು. ಸುಪ್ರೀಂಕೋರ್ಟಿನ ತೀರ್ಪು ಸ್ಪಷ್ಟವಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಲೌಡ್ಸ್ಪೀಕರ್ ಬಳಕೆಗೆ ನಿರ್ಬಂಧವಿದೆ. ಅಲಹಾಬಾದ್ ಹೈಕೋರ್ಟ್ ಕೂಡ ಅದೇ ರೀತಿ ತೀರ್ಪು ನೀಡಿದೆ. ಕರ್ನಾಟಕ ಸರ್ಕಾರವು ಕೋರ್ಟ್ ಆದೇಶಗಳನ್ನು ಕಿಂಚಿತ್ತೂ ಪರಿಪಾಲನೆ ಮಾಡುತ್ತಿಲ್ಲ. ಸಾಕಷ್ಟು ಹೋರಾಟಗಳು ನಡೆದರೂ ಕ್ರಮ ಕೈಗೊಳ್ಳುತ್ತಿಲ್ಲ. ಸುಪ್ರೀಂಕೋರ್ಟ್ ಸೂಚನೆಯನ್ನು ಸರ್ಕಾರ ಪಾಲಿಸುತ್ತಿಲ್ಲ. ಒಂದು ನಿರ್ದಿಷ್ಟ ಸಮುದಾಯದ ಬಗ್ಗೆ ಇಂಥ ಮೃದುಧೋರಣೆ ಏಕೆ ಎಂದು ಪ್ರಶ್ನಿಸಿದರು.
ಮಸೀದಿಗಳಲ್ಲಿ ಲೌಡ್ಸ್ಪೀಕರ್ ಸಹಿಸಿಕೊಳ್ಳುವ ಸರ್ಕಾರವು, ಮಠ-ಮಂದಿರಗಳಲ್ಲಿ ಮೈಕ್ ಶಬ್ದ ಹೆಚ್ಚಾದರೆ ಅಧಿಕಾರಿಗಳ ಬಂದು ಸೀಜ್ ಮಾಡುತ್ತಾರೆ. ಇದು ಯಾವ ನ್ಯಾಯ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಲೌಡ್ಸ್ಪೀಕರ್ಗಳ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಇಲ್ಲಿ ಏನೂ ಆಗಿಲ್ಲ. ನಾವೇನು ಕಾನೂನುಬಾಹಿರ ಬೇಡಿಕೆ ಇಟ್ಟಿಲ್ಲ. ನ್ಯಾಯಾಲಯದ ತೀರ್ಪು ಪಾಲಿಸಿ ಎಂದಷ್ಟೇ ಕೇಳುತ್ತಿದ್ದೇವೆ. ಮಕ್ಕಳ ಪರೀಕ್ಷೆಯ ಸಂದರ್ಭದಲ್ಲಿ ಶಬ್ದಮಾಲಿನ್ಯ ಏಕೆ ಬೇಕು? ತೀರ್ಪಿನ ಆದೇಶ ಧಿಕ್ಕರಿಸುವುದು ಸರಿಯಲ್ಲ. ಮೇ 9ರಂದು ನಾವು ದೇವಸ್ಥಾನಗಳಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಹಿಂದುಗಳಿಗೆ ಸುಪ್ರಭಾತ ಶ್ರೇಷ್ಠ. ಬೆಳಂಬೆಳಗ್ಗೆ ಸುಪ್ರಭಾತ ಕೇಳುವುದು ಪದ್ಧತಿ. ಆಝಾನ್ ನಿಲ್ಲದಿದ್ದರೆ ಕಾನೂನಿಗೆ ಗೌರವ ಕೊಟ್ಟು ನಮ್ಮ ಸಂಪ್ರದಾಯ ಪ್ರಾರಂಭಿಸುತ್ತೇವೆ ಎಂದರು.
ಹಿಂದೂಗಳಲ್ಲಿ ಸುಪ್ರಭಾತ ಕೇಳುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ. ಕಾನೂನಿಗೆ ಗೌರವ ಕೊಟ್ಟು ಈವರಿಗೆ ನಾವು ದೇಗುಲಗಳಲ್ಲಿ ಸುಪ್ರಭಾತ ಹಾಕಿರಲಿಲ್ಲ. ಹಿಂದೆ ಊರವರಿಗೆಲ್ಲಾ ಕೇಳುವ ಹಾಗೆ ಸುಪ್ರಭಾತ ಹಾಕುವ ಸಂಪ್ರದಾಯ ಚಾಲ್ತಿಯಲ್ಲಿತ್ತು. ರಾಜ್ಯದಲ್ಲಿ ಅವರಿಗೊಂದು ಕಾನೂನು, ನಮಗೊಂದು ಕಾನೂನು ಬೇಡ. 2005ರಲ್ಲಿಯೇ ಈ ಸಂಬಂಧ ನ್ಯಾಯಾಲಯದ ತೀರ್ಪು ಬಂದಿದೆ. ಯಾರಿಗೂ ಬೇಜಾರಾಗಬಾರದು ಎಂದು ವರ್ತಿಸಿದರೆ ಆಗುವುದಿಲ್ಲ. ದೇಶದ ಕಾನೂನು ಪಾಲನೆ ಆಗಬೇಕು. ಎಲ್ಲವೂ ಅವರಿಗೆ ಖುಷಿ ಬಂದಹಾಗೆ ನಡೆಸಲು ಸಾಧ್ಯವಿಲ್ಲ. ಮಸೀದಿಯ ಎದುರು ನಾವು ಭಜನೆ ಮಾಡುವುದಿಲ್ಲ. ದೇವಸ್ಥಾನಗಳಲ್ಲಿ ಮಾತ್ರ ಭಜನೆ ಹಾಕುತ್ತವೆ. ಸಂಘರ್ಷಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದರು.
ಈ ಸಂಬಂಧ ಉಡುಪಿಯ ಜಿಲ್ಲಾ ನ್ಯಾಯಾಲಯಕ್ಕೆ ಅಪೀಲು ಹಾಕುತ್ತೇವೆ. ಸುಪ್ರೀಂಕೋರ್ಟ್ ಆದೇಶ ಇದ್ದರೂ ಪಾಲಿಸುವುದಿಲ್ಲ ಎಂದು ಗಮನ ಸೆಳೆಯುತ್ತೇವೆ. ಪ್ರತಿದಿನ ಮೈಕ್ನಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಇಲ್ಲ ಎಂದು ನ್ಯಾಯಾಲಯವೇ ಹೇಳಿದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ, ಹದಿನೈದು ದಿನ ಮೀರದಂತೆ ಅನುಮತಿಗೆ ಮಾತ್ರ ಅವಕಾಶವಿದೆ. ಸುವಾರ್ತೆ ಕೇಳುವ ತಾಳ್ಮೆ ಇರುವರಿಗೆ ಮಾತ್ರ ತಲುಪಿಸಿ ಎಂದು ಕುರಾನ್ ಕೂಡಾ ಹೇಳುತ್ತದೆ. ನಿಮ್ಮ ನಂಬಿಕೆ ನಿಮಗೆ, ನಮ್ಮ ನಂಬಿಕೆ ನಮಗೆ ಎಂದು ಕುರಾನ್ ಸಹ ಹೇಳಿದೆ. ಇದನ್ನು ಪಾಲಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮಸೀದಿಗಳಿಂದ ಲೌಡ್ಸ್ಪೀಕರ್ ತೆರವುಗೊಳಿಸದ ಸರ್ಕಾರ, ಎಲ್ಲ ದೇಗುಲಗಳಿಂದ ಮೈಕ್ನಲ್ಲಿ ರಾಮ ನಾಮ: ಪ್ರಮೋದ್ ಮುತಾಲಿಕ್
ಇದನ್ನೂ ಓದಿ: ಮಸೀದಿಗಳಲ್ಲಿ ಲೌಡ್ಸ್ಪೀಕರ್ ವಿವಾದ: ಹೈಕೋರ್ಟ್-ಕಾನೂನು ಹೇಳುವುದೇನು? ಮಸೀದಿಗಳ ವಾದ ಏನಿದೆ?
Published On - 3:24 pm, Fri, 6 May 22