ಮಸೀದಿಗಳಲ್ಲಿ ಲೌಡ್​ಸ್ಪೀಕರ್ ವಿವಾದ: ಹೈಕೋರ್ಟ್-ಕಾನೂನು ಹೇಳುವುದೇನು? ಮಸೀದಿಗಳ ವಾದ ಏನಿದೆ?

ಮಸೀದಿಗಳಲ್ಲಿ ಲೌಡ್​ಸ್ಪೀಕರ್ ವಿವಾದ: ಹೈಕೋರ್ಟ್-ಕಾನೂನು ಹೇಳುವುದೇನು? ಮಸೀದಿಗಳ ವಾದ ಏನಿದೆ?
ಪ್ರಾತಿನಿಧಿಕ ಚಿತ್ರ (ಪಿಟಿಐ)

ಧರ್ಮಗಳು ಸ್ಥಾಪನೆಯಾದಾಗ ಲೌಡ್ ಸ್ಪೀಕರ್ ಇರಲಿಲ್ಲ. ಹೀಗಾಗಿ ಲೌಡ್ ಸ್ಪೀಕರ್ ಬಳಕೆ ಮೂಲಭೂತ ಹಕ್ಕಲ್ಲ ಎಂದಿದ್ದ ಹೈಕೋರ್ಟ್, ಶಬ್ದಮಾಲಿನ್ಯ ನಿಯಂತ್ರಣ ನಿಯಮ ಪಾಲಿಸದಿದ್ದದ್ದಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿತ್ತು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 04, 2022 | 4:04 PM


ಬೆಂಗಳೂರು: ಮಸೀದಿಗಳಲ್ಲಿ ಲೌಡ್​ಸ್ಪೀಕರ್​ ಬಳಕೆ ಇದೀಗ ಒಂದು ವಿವಾದವಾಗಿ ಬೆಳೆಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಮಸೀದಿಗಳ ಅಜಾನ್ ವೇಳೆ ರಾಮಭಜನೆ ಮೊಳಗಿಸುವುದಾಗಿ ಹಿಂದುತ್ವ ಪರ ಸಂಘಟನೆಗಳು ಹೇಳಿವೆ. ಇದರಿಂದ ಯಾರಿಗೂ ಒಳ್ಳೆಯದಲ್ಲ, ಚರ್ಚೆಯ ಮೂಲಕ ವಿವಾದ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಈ ವಿವಾದವು ಹಿಂದೆ ಹೈಕೋರ್ಟ್​ನಲ್ಲಿಯೂ ಸದ್ದು ಮಾಡಿತ್ತು. ಮಸೀದಿಗಳಲ್ಲಿ ಲೌಡ್​ಸ್ಪೀಕರ್ ಬಳಸಲು ವಕ್ಫ್​ ಮಂಡಳಿಯಿಂದ ಅನುಮತಿ ಪಡೆದಿದ್ದೇವೆ ಎಂದು ಮಸೀದಿಗಳ ಪರ ವಕೀಲರು ಹೇಳಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳಿತ್ತು. ‘ಯಾವ ಕಾನೂನಿನಡಿ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಗೆ ಅನುಮತಿ ನೀಡಲಾಗಿದೆ? ಶಬ್ದಮಾಲಿನ್ಯ ನಿಯಂತ್ರಣ ನಿಯಮ ಪಾಲಿಸಲು ಸರ್ಕಾರ ಕೈಗೊಂಡ ಕ್ರಮವೇನು? ಲೌಡ್ ಸ್ಪೀಕರ್​ ನಿರ್ಬಂಧಿಸಲು ಅನುಸರಿಸುತ್ತಿರುವ ನಿಯಮದ ಮಾಹಿತಿ ನೀಡಿ’ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಕುರಿತು ನವೆಂಬರ್ 16, 2021ರಂದು ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿತ್ತು.

ಡಿಸೆಂಬರ್ 22, 2020ರಲ್ಲಿ ಗೋವಿಂದರಾಜನಗರ ಮಸೀದಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ನೀಡಿದ್ದ ನಂತರ ಪೊಲೀಸರು ಅನುಮತಿ ಹಿಂದಕ್ಕೆ ಪಡೆದಿದ್ದರು. ಈ ವೇಳೆ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆಯಡಿ ದೂರು ಸಲ್ಲಿಸುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣಪತ್ರ ಸಲ್ಲಿಸಿತ್ತು. ಕರ್ನಾಟಕದಲ್ಲಿ ಶಬ್ದಮಾಲಿನ್ಯ ನಿಯಂತ್ರಣ ನಿಯಮ 2000 ಜಾರಿಯಾದ ನಂತರ ಅನುಮತಿಯಿಲ್ಲದೇ ಲೌಡ್ ಸ್ಪೀಕರ್ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ರಾತ್ರಿ ವೇಳೆ ಲೌಡ್ ಸ್ಪೀಕರ್ ಬಳಸುವಂತಿಲ್ಲ. ಆಡಿಟೋರಿಯಂ, ಮುಚ್ಚಿದ ಸಭಾಂಗಣಗಳಲ್ಲಿ ಮಾತ್ರ ಬಳಸಬಹುದು. ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಲೌಡ್ ಸ್ಪೀಕರ್ ಬಳಸಬಹುದು ಎಂದು ನಿಯಮಗಳು ಹೇಳುತ್ತವೆ.

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಲೌಡ್​ಸ್ಪೀಕರ್ ಬಳಕೆಗೆ ನಿರ್ಬಂಧವಿದೆ. ಕೆಲವು ಸಂದರ್ಭಗಳಲ್ಲಿ ಮಾತ್ರ ರಾಜ್ಯ ಸರ್ಕಾರವು ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಾಗಿ ರಾತ್ರಿ 10 ರಿಂದ 12 ಗಂಟೆಯವರೆಗೆ ಲೌಡ್​ಸ್ಪೀಕರ್ ಬಳಕೆಗೆ ಅನುಮತಿ ನೀಡಬಹುದು. ಈ ಅನುಮತಿ 15 ದಿನಗಳಿಗೆ ಸೀಮಿತವಾಗಿರುತ್ತದೆ. ಸುಪ್ರೀಂಕೋರ್ಟ್ ಸಹ ಈ ಶಬ್ದಮಾಲಿನ್ಯ ನಿಯಮವನ್ನು ಎತ್ತಿ ಹಿಡಿದಿದೆ. ಸ್ಥಳೀಯ ಪ್ರದೇಶದಲ್ಲಿ ನಿಗದಿಯಾದ ಮಟ್ಟಕ್ಕಿಂತ 10 ಡೆಸಿಬಲ್ ಮೀರಬಾರದು. ಗರಿಷ್ಟ 75 ಡೆಸಿಬಲ್ ಗಿಂತ ಹೆಚ್ಚಿನ ಧ್ವನಿವರ್ಧಕ ಬಳಸುವಂತಿಲ್ಲ ಎಂದು 2005ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್​ ಸಹ ಲೌಡ್ ಸ್ಪೀಕರ್ ಬಗ್ಗೆ ಆದೇಶ ನೀಡಿದೆ. ಗೋವಿಂದರಾಜನಗರ, ಥಣಿಸಂದ್ರದ ಮಸೀದಿಗಳಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸುವ ಸಂದರ್ಭದಲ್ಲಿ ಲೌಡ್ ಸ್ಪೀಕರ್ ಬಳಸಿ ಅಜಾನ್ ಕೂಗುವುದು ಮೂಲಭೂತ ಹಕ್ಕಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು. ಶಬ್ದಮಾಲಿನ್ಯ ನಿಯಂತ್ರಣ ನಿಯಮ ಪಾಲಿಸದಿದ್ದದ್ದಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಧರ್ಮಗಳು ಸ್ಥಾಪನೆಯಾದಾಗ ಲೌಡ್ ಸ್ಪೀಕರ್ ಇರಲಿಲ್ಲ. ಹೀಗಾಗಿ ಲೌಡ್ ಸ್ಪೀಕರ್ ಬಳಕೆ ಮೂಲಭೂತ ಹಕ್ಕಲ್ಲ. ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಶಬ್ದಮಾಲಿನ್ಯ ಮಾಪನ ಯಂತ್ರಗಳಿರಬೇಕು. ಶಬ್ದ ಮಾಲಿನ್ಯ ನಿಯಂತ್ರಣ ನಿಯಮ ಅನುಷ್ಠಾನಗೊಳಿಸಲು ಕೋರ್ಟ್ ಆದೇಶಿಸಿತ್ತು. ಗೋವಿಂದರಾಜನಗರ ಮಸೀದಿಗೆ ನೀಡಿದ್ದ ಅನುಮತಿ ಹಿಂಪಡೆಯಲಾಗಿತ್ತು. ಹೈಕೋರ್ಟ್ ಎಚ್ಚರಿಕೆ ನಂತರ ಎಲ್ಲೆಡೆ ಲೌಡ್ ಸ್ಪೀಕರ್ ಬಳಕೆ ನಿಲ್ಲಿಸಲಾಗಿತ್ತು.

ಬೆಂಗಳೂರಿನಲ್ಲಿಯೇ ಹೆಚ್ಚು ಸಮಸ್ಯೆ: ಇಮಾಮ್
ಬೆಂಗಳೂರಿನಲ್ಲಿ ಎತ್ತರದ ಕಟ್ಟಡಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಜಾನ್​ನಿಂದ ಜಾಸ್ತಿ ತೊಂದರೆ ಆಗುತ್ತಿದೆ. ನಮ್ಮ ಧರ್ಮದಲ್ಲಿ ಯಾರಿಗೂ ತೊಂದರೆ ಕೊಡಲು ಅವಕಾಶವಿಲ್ಲ. ಅದಕ್ಕೆ ನಾವೇ ಮುಂದೆ ಬಂದು ಡಿವೈಸ್ ರೆಡಿ ಮಾಡಿದ್ದೇವೆ. ಆ ಡಿವೈಸ್ ಸೌಂಡ್ ಕಂಟ್ರೋಲ್ ಮಾಡುತ್ತದೆ. ಈಗ ಕರ್ನಾಟಕದಲ್ಲಿರುವ ಎಲ್ಲ 12,000 ಮಸೀದಿಗಳಲ್ಲಿ ಈ ಉಪಕರಣ ಅಳವಡಿಕೆಗೆ ಸಿದ್ಧತೆ ಮಾಡಿದ್ದೇವೆ. ಲೌಡ್​ಸ್ಪೀಕರ್​ನಿಂದಾಗಿ ಬೆಂಗಳೂರು ನಗರದ ಜನರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಇಲ್ಲಿ ಇಂಥ ಉಪಕರಣಗಳನ್ನು ಆ್ಯಕ್ಟಿವೇಟ್ ಮಾಡಲಾಗಿದೆ ಎಂದು ಜಾಮಿಯಾ ಮಸೀದಿಯ ಮುಖ್ಯ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ಹೇಳಿದರು.

ನಮ್ಮ ಮಸೀದಿ ಮೇಲೆ ಹಾಕಿರುವ ಧ್ವನಿವರ್ಧಕ ತೆಗೆಯುವ ಬಗ್ಗೆ ಚರ್ಚೆ ಆಗುತ್ತಿದೆ. ಸುಪ್ರೀಂ ಕೋರ್ಟ್ ಈಗಾಗಲೇ ಮಸೀದಿ, ಮಂದಿರ, ಚರ್ಚ್, ಗುರುದ್ವಾರಕ್ಕೆ ಸಂಬಂಧಿಸಿದ ಆದೇಶ ಹೊರಡಿಸಿ ಯಾವ ಏರಿಯಾದಲ್ಲಿ ಎಷ್ಟು ಡಿಬಿಎಸ್ ಶಬ್ದ ಬರಲು ಅವಕಾಶ ಇದೆ ಎಂದು ಸ್ಪಷ್ಟಪಡಿಸಿದೆ. ಕೈಗಾರಿಕಾ ಪ್ರದೇಶದಲ್ಲಿ ಹಗಲು 75 ಡಿಬಿಎಸ್ ಇರಬೇಕು, ರಾತ್ರಿ ವೇಳೆ 70 ಡಿಬಿಎಸ್ ಇರಬೇಕು. ವಾಣಿಜ್ಯ ಪ್ರದೇಶಗಳಲ್ಲಿ ಹಗಲು 75 ಡಿಬಿಎಸ್ ಇರಬೇಕು, ರಾತ್ರಿ ವೇಳೆ 55 ಡಿಬಿಎಸ್ ಇರಬೇಕು. ಜನವಸತಿ ಪ್ರದೇಶಗಳಲ್ಲಿ ಹಗಲು 55 ಡಿಬಿಎಸ್, ರಾತ್ರಿ ವೇಳೆ 45 ಡಿಬಿಎಸ್ ಇರಬೇಕು. ಸೈಲೆಂಟ್ ಜೋನ್​ಗಳಲ್ಲಿ ಆಸ್ಪತ್ರೆ, ಶಾಲೆಗಳಿರುವ ಜಾಗದಲ್ಲಿ ಹಗಲು 50 ಡಿಬಿಎಸ್, ರಾತ್ರಿ ವೇಳೆ 40 ಡಿಬಿಎಸ್ ಇರಬೇಕು ಎಂದು ವಿವರಿಸಿದರು.

ಈ ಆದೇಶ ಪಾಲನೆಗಾಗಿಯೇ ನಾವು ಉಲೇಮಾಗಳೊಂದಿಗೆ ಸೇರಿ ಒಂದು ನಿಯಂತ್ರಣ ಉಪಕರಣ ರೂಪಿಸಿದ್ದೇವೆ. ಎಷ್ಟು ಡಿಬಿಎಸ್ ಇರಬೇಕು ಎಂದು ಸೆಟ್ ಮಾಡಿಕೊಂಡರೆ ಅದು ಅಷ್ಟರಲ್ಲಿಯೇ ಕೆಲಸ ಮಾಡುತ್ತದೆ. ಈ ಬಗ್ಗೆ ನಾವು ಡಿಜಿಪಿ ಕಚೇರಿಗೇ ಹೋಗಿ ಡೆಮೊ ಕೊಟ್ಟಿದ್ದೆವು. ಮಾವಳ್ಳಿ ಮಸೀದಿಯಲ್ಲಿ ಮಾಲಿನ್ಯ ನಿಯಂತ್ರನ ಮಂಡಳಿ ಅಧಿಕಾರಿಗಳು 24 ಗಂಟೆಗಳ ಕಾಲ ಎಷ್ಟು ಡಿಬಿಎಸ್​ನಲ್ಲಿ ಸೌಂಡ್ ಬರುತ್ತೆ ಅಂತ ಚೆಕ್ ಮಾಡಿದ್ದಾರೆ. ಈ ಡಿವೈಸ್ ಮಸೀದಿ ಮಾತ್ರವಲ್ಲ ಮಂದಿರ, ಚರ್ಚ್​​ಗೂ ಉಪಯುಕ್ತ ಎಂದರು.

ವೈಫಲ್ಯ ಮರೆಮಾಚಲು ಲೌಡ್​ಸ್ಪೀಕರ್ ವಿವಾದ: ರಾಮಲಿಂಗಾರೆಡ್ಡಿ
ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧಕ್ಕೆ ಆಗ್ರಹಿಸಿ ಅಭಿಯಾನ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಭಷ್ಟಾಚಾರ ಸೇರಿದಂತೆ ಆಡಳಿತ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಸಂಘಪರಿವಾರ ಈ ವಿವಾದ ಬಳಸಿಕೊಳ್ಳುತ್ತಿದೆ ಎಂದು ದೂರಿದರು. ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮವನ್ನು ಸುಪ್ರೀಂಕೋರ್ಟ್ ಒಪ್ಪಿದೆ. ಈಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ರಾಜಕೀಯಕ್ಕಾಗಿ ಮಸೀದಿ ಮೈಕ್​ ವಿಚಾರವನ್ನು ಮುಂದೆ ತಂದಿದ್ದಾರೆ. ಸಂವಿಧಾನಕ್ಕಿಂತ ದೊಡ್ಡವರಾದರೆ ಅವರು ಹೇಳಿದಂತೆ ಕೇಳೋಣ. ಮಸೀದಿ ಧ್ವನಿವರ್ಧಕ ವಿವಾದಕ್ಕೆ ಸಂವಿಧಾನದ ಮೂಲಕ ಉತ್ತರ ನೀಡಲಾಗುವುದು ಎಂದು ಹೇಳಿದರು.

ವೈಮನಸ್ಸು ಬೇಡ: ಖಾದರ್
ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಯು.ಟಿ.ಖಾದರ್, ಶಬ್ದಮಾಲಿನ್ಯದ ಸಮಸ್ಯೆ ಇದ್ದರೆ ಸಾಂವಿಧಾನಿಕವಾಗಿ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಇಂತಹ ವಿಚಾರಗಳ ಬಗ್ಗೆ ಜನರ ನಡುವೆ ಚರ್ಚೆ ನಡೆಸಲು ಕುಮ್ಮಕ್ಕು ನೀಡುವುದು, ವೈಮನಸ್ಸು ತರುವ ಕೆಲಸ ಸರಕಾರ ಕ್ಕೆ ಶೋಭೆ ನೀಡುವುದಿಲ್ಲ ಎಂದರು.

ಇದನ್ನೂ ಓದಿ: ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್​ಸ್ಪೀಕರ್​ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ

ಇದನ್ನೂ ಓದಿ: ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್​ ತಡೆಗೆ ಕ್ರಮಕೈಗೊಳ್ಳದ ಪೊಲೀಸರಿಗೆ ಹೈಕೋರ್ಟ್​ ತರಾಟೆ

Follow us on

Related Stories

Most Read Stories

Click on your DTH Provider to Add TV9 Kannada