ಅಯೋಧ್ಯೆ ರಾಮಮಂದಿರಕ್ಕೆ 1300 ಕೋಟಿ ವೆಚ್ಚದ ಅಂದಾಜು: ನೀಲಿ ಛಾಯೆಯ ಶ್ವೇತ ಶಿಲೆಯಲ್ಲಿ ಕಂಗೊಳಿಸಲಿದ್ದಾನೆ ಶ್ರೀರಾಮ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 12, 2022 | 10:01 AM

ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸುವ ಬಯಕೆಯಿದ್ದು, ನಾಡಿನ ಅಸಂಖ್ಯ ಭಕ್ತರ ಇಂಗಿತವನ್ನು ಸಭೆಯಲ್ಲಿ  ಪೇಜಾವರ ಶ್ರೀ ಮಂಡಿಸಿದರು.

ಅಯೋಧ್ಯೆ ರಾಮಮಂದಿರಕ್ಕೆ 1300 ಕೋಟಿ ವೆಚ್ಚದ ಅಂದಾಜು: ನೀಲಿ ಛಾಯೆಯ ಶ್ವೇತ ಶಿಲೆಯಲ್ಲಿ ಕಂಗೊಳಿಸಲಿದ್ದಾನೆ ಶ್ರೀರಾಮ
Ram temple (ಸಂಗ್ರಹ ಚಿತ್ರ)
Follow us on

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಮಾರು 400 ಕೋಟಿ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿತ್ತು. ಆದರೆ ಜಿಎಸ್​ಟಿ, ರಾಯಲ್ಟಿ ಮೊದಲಾದ ಅನೇಕ ಕಾರಣಗಳಿಂದ ನಿರ್ಮಾಣ ವೆಚ್ಚ 1300 ಕೋಟಿ ತಗಲಬಹುದೆಂದು ಅಂದಾಜಿಸಲಾಗಿ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸಭೆಯಲ್ಲಿ ಹೇಳಿಕೆ ನೀಡಿದರು. ಅಯೋಧ್ಯೆಯಲ್ಲಿ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಪ್ರಮುಖರ ಮಹತ್ವದ ಸಭೆ ನಿನ್ನೆ ಭಾನುವಾರ ನಡೆದಿದ್ದು, ಈ ನಿರ್ಣಯ ಕೈಗೊಳ್ಳಲಾಗಿದೆ. ಅಯೋಧ್ಯ ರಾಮ ಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ವಿಗ್ರಹ ನಿರ್ಮಾಣಕ್ಕೆ ಸಮಿತಿ ನಿರ್ಣಯಿಸಿದೆ. ಶಿಲ್ಪಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪನೆಗೆ ತೀರ್ಮಾನ ಮಾಡಲಾಗಿದೆ. ಮಂದಿರ ನಿರ್ಮಾಣ ವೆಚ್ಚದಲ್ಲಿ ಹೆಚ್ಚಳ ಸಾಧ್ಯತೆಯಿದ್ದು, ಮಂದಿರ ನಿರ್ಮಾಣಕ್ಕೆ ದೇಣಿಗೆಯ ಮಹಾಪೂರವೇ ಹರಿದು ಬಂದಿದೆ ಎನ್ನಲಾಗುತ್ತಿದೆ.

ಮಂದಿರಕ್ಕಾಗಿ ದೇಶಾದ್ಯಂತ ಭಕ್ತರಿಂದ ಉತ್ತಮ ದೇಣಿಗೆ ಪಡೆಯಲಾಗಿದ್ದು, ಪ್ರತಿ ತಿಂಗಳು 50 ಲಕ್ಷಕ್ಕೂ ಅಧಿಕ ದೇಣಿಗೆ ಸಂಗ್ರಹವಾಗಿದ್ದು, ಕೆಲವೊಮ್ಮೆ ಈ ಮೊತ್ತ ಕೋಟಿಗೂ ಮೀರಿದೆ. ಈವರೆಗೆ ಅಂದಾಜು 300 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಸಾರ್ವಜನಿಕ ದೇಣಿಗೆಯಿಂದಲೇ ಖರ್ಚು ಮಾಡಲಾಗುತ್ತಿದೆ ಎಂದು ನಿರ್ವಾಹಕರು ಸಭೆಯಲ್ಲಿ ಮಾಹಿತಿ ನೀಡಿದರು. ದೇಣಿಗೆ ಸಂಗ್ರಹ ಅಭಿಯಾನದಿಂದ ಬಂದ‌ ಮೂಲಧನ ಸಾವಿರ ಕೋಟಿಗೂ ಮೀರಿದ್ದು, ಮೂಲಧನದ ಸಮ್ಯಕ್ ನಿರ್ವಹಣೆ ಮಾಡಬೇಕಾದ ಕುರಿತಾಗಿಯೂ ಸಭೆ ಗಂಭೀರ ಚರ್ಚೆ ನಡೆಸಿದೆ.

ಮಂದಿರ ನಿರ್ಮಾಣಕ್ಕೆ ಮಹಾರಾಷ್ಟ್ರದಿಂದ ಸಾಗುವಾನಿ ಮರ ತರಿಸಿಕೊಳ್ಳಲು ತೀರ್ಮಾನ ಮಾಡಿದ್ದು, ಇದರ ಖರ್ಚು ವೆಚ್ಚಗಳ ವಿವರಗಳನ್ನು ಸಭೆಗೆ ಸಲ್ಲಿಸಿ ಅನುಮೋದನೆ ಪಡೆಯಲಾಯಿತು. ಕರ್ನಾಟಕದ ಭಕ್ತರಿಂದ ಸ್ವರ್ಣ ಶಿಖರಕ್ಕೆ ಬೇಡಿಕೆ ಇಟ್ಟಿದ್ದು, ಭಕ್ತರ ಬೇಡಿಕೆಯನ್ನು ಪೇಜಾವರ ಶ್ರೀ ಸಭೆಯಲ್ಲಿ ಮಂಡಿಸಿದರು. ಭವ್ಯ ರಾಮ ಮಂದಿರದ ಪ್ರಧಾನ ಗರ್ಭಗುಡಿಯ ಶಿಖರಕ್ಕೆ ಕರ್ನಾಟಕದಿಂದ ಚಿನ್ನದ ಶಿಖರವನ್ನು ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸುವ ಬಯಕೆಯಿದ್ದು, ನಾಡಿನ ಅಸಂಖ್ಯ ಭಕ್ತರ ಇಂಗಿತವನ್ನು ಸಭೆಯಲ್ಲಿ  ಪೇಜಾವರ ಶ್ರೀ ಮಂಡಿಸಿದರು.

ಮಂದಿರದ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಸ್ವರ್ಣ ಶಿಖರ ನಿರ್ಮಾಣದ ಇಚ್ಛಿಸಲಾಗಿದ್ದು, ರಾಜ್ಯದ ಭಕ್ತರ ಸಹಕಾರದಿಂದ ನಿರ್ಮಿಸಿ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ನೀಡುವ ಯೋಜನೆಯಿದೆ. ಕರ್ನಾಟಕದ ಹಂಪೆಯಿಂದ ಸ್ವರ್ಣ ಶಿಖರ ಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಿ ಅಯೋಧ್ಯೆಗೆ ತಲುಪಿಸುವ ಇರಾದೆ ಹೊಂದಲಾಗಿದೆ. ಇನ್ನೂ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಜೀ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಟ್ರಸ್ಟಿನ ವಿಶ್ವಸ್ಥ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದ ಗಿರಿ ಮಹಾರಾಜ್, ಸದಸ್ಯರುಗಳಾದ ವಿಶ್ವಸ್ಥರಾದ ಹಿರಿಯ ನ್ಯಾಯವಾದಿ ಪರಾಶರನ್ ಆನ್ ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:56 am, Mon, 12 September 22