ಉಡುಪಿ, ಜನವರಿ 24: ರಾಮ ಮಂದಿರ ಪ್ರಾಣ ಪ್ರತಿಷ್ಠೆ ದಿನ ರಾಮಧ್ವಜ ಅಳವಡಿಸದ ವಿಚಾರವಾಗಿ ಅನಾಮಿಕ ವ್ಯಕ್ತಿ ಓರ್ವ ಉಡುಪಿ ನಗರದ ಬನ್ನಂಜೆ ನಾರಾಯಣ ಗುರು ಮಂದಿರ (Narayana Guru Mandir) ಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವಂತಹ ಘಟನೆ ನಡೆದಿದೆ. ಸದ್ಯ ಈ ವಿಚಾರವಾಗಿ ಮಂದಿರದ ಆಡಳಿತ ಮಂಡಳಿಯಿಂದ ಉಡುಪಿ ಎಸ್‌ಪಿಗೆ ದೂರು ನೀಡಲಾಗಿದ್ದು, ಆರೋಪಿ ಯಾರೆಂದು ಕೂಡಲೇ ಪತ್ತೆ ಹಚ್ಚುವಂತೆ ಮನವಿ ಮಾಡಲಾಗಿದೆ. ಬನ್ನಂಜೆ ರಾಮಮಂದಿರ ಅಧ್ಯಕ್ಷ ಮಾಧವ ಬನ್ನಂಜೆ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಿಂದಿಸಿದ ವ್ಯಕ್ತಿ ಕ್ಷೇತ್ರಕ್ಕೆ ಬಂದು ಕ್ಷಮೆ ಯಾಚಿಸಬೇಕು. ನಿಂದಿಸಲು ಕಾರಣ ಏನು ಎಂಬುದನ್ನು ನಮಗೆ ಮನವರಿಕೆ ಮಾಡಬೇಕು ಎಂದು ಹೇಳಿದ್ದಾರೆ.
ಬನ್ನಂಜೆ ನಾರಾಯಣ ಗುರು ಸಂಘ 80 ವರ್ಷದಿಂದ ಸಾಮಾಜಿಕ ಚಟುವಟಿಕೆ ಮಾಡುತ್ತಿದೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡುವ ಕೆಲಸ ಮಾಡುತ್ತಿದೆ. ರಾಮಮಂದಿರ ಪ್ರತಿಷ್ಠಾಪನೆ ದಿನ ನಾವು ವಿಶೇಷ ಪೂಜೆ ನೆರವೇರಿಸಿದ್ದೇವೆ. ಆದರೆ ಮಂದಿರದ ಆವರಣದಲ್ಲಿ ಧ್ವಜ ಮಾತ್ರ ಅಳವಡಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಉಡುಪಿ ಎಸ್ಪಿ ಅರುಣ್ ಮಾತನಾಡಿ, ಬನ್ನಂಜೆ ನಾರಾಯಣ ಗುರು ಮಂದಿರದ ಆಡಳಿತ ಮಂಡಳಿ ಅವಾಚ್ಯ ಶಬ್ದ ಬಳಸಿ ನಿಂದಿಸಿರುವ ಬಗ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ. ದೂರಿನ ಆಧಾರದ ಮೇಲೆ ತಾಂತ್ರಿಕವಾಗಿ ತನಿಖೆ ನಡೆಸುತ್ತೇವೆ. ಈ ಬಗ್ಗೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಎಫ್ಐಆರ್ ಮಾಡುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಕೋಲಾರ: ಅಯೋಧ್ಯ ಶ್ರೀರಾಮನ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯ ಪೋಸ್ಟ್ ಮಾಡಿದ ಇಬ್ಬರು ಆರೋಪಿಗಳನ್ನ ಬೇತಮಂಗಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀರಾಮನ ಅವಹೇಳನ ಮಾಡಿದ ಇಬ್ಬರು ಪುಂಡರನ್ನ ಕೋಲಾರ ಜಿಲ್ಲೆಯ ಕೆಜಿಎಫ್‌ನ ಬೇತಮಂಗಲ ಪೊಲೀಸರು ವಶಕ್ಕೆ ಪಡೆದಿದ್ದು, ಶ್ರೀರಾಮನ ಪೋಟೊ ಹಾಕಿ ಅನ್ಯ ಧರ್ಮದ ಗುಂಬಜ್ ಫೊಟೊ ಹಾಕಿ ಅಶ್ಲೀಲವಾಗಿ ಕಾಮೆಂಟ್ ಮಾಡಿ ವಿಡಿಯೊ ಹರಿಬಿಟ್ಟಿದ್ದರು.
ಇದನ್ನೂ ಓದಿ: ರಾಯಚೂರು: 50 ಚೀಲ ಜೋಳ ಮಾರಿ ಅಯೋಧ್ಯೆಯ ರಾಮ ಮಂದಿರಕ್ಕೆ ದೇಣಿಗೆ ನೀಡಿದ ರೈತ
ಈ ಹಿನ್ನೆಲೆಯಲ್ಲಿ ಇಬ್ಬರನ್ನ ಹಿಡಿದು ಪೊಲೀಸರಿಗೆ ಬೇತಮಂಗಲದ ಹಿಂದೂ ಸಂಘಟನೆ ಮುಖಂಡರು ಒಪ್ಪಿಸಿದ್ದಾರೆ. ಇನ್ನೂ ಜುಬೇರ್ ಹಾಗೂ ಮುಬಾರಕ್ ಇಬ್ಬರು ಯುವಕರು ಪೊಲೀಸರು ವಶಕ್ಕೆ ಪಡೆದಿದ್ದು, ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಯುವಕರಿಬ್ಬರ ಮೇಲೆ ಕಾನೂನು ಕ್ರಮಕ್ಕೆ ಹಿಂದೂ ಸಂಘಟನೆ ಮುಖಂಡರ ಒತ್ತಾಯ ಮಾಡಿದ್ದು, ಬೇತಮಂಗಲ ಪೊಲೀಸರಿಂದ ಇಬ್ಬರ ಯುವಕರನ್ನ ಗೌಪ್ಯ ಸ್ಥಳದಲ್ಲಿರಿಸಿ ವಿಚಾರಣೆ ಮಾಡಲಾಗುತ್ತಿದೆ ಎಂದು ಕೆಜಿಎಫ್ ಎಸ್ಪಿ ಶಾಂತರಾಜು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:48 pm, Wed, 24 January 24