ಅವರು ರಾಮನನ್ನು ನೋಡಿದ್ದಾರಾ? ದಿಗ್ವಿಜಯ್ ಸಿಂಗ್ ಹೇಳಿಕೆಗೆ ಕಾಣಿಯೂರು ಶ್ರೀ ತಿರುಗೇಟು
ಮೂರ್ತಿ ರಾಮನಂತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ಸಿಂಗ್ ಹೇಳಿಕೆ ವಿಚಾರವಾಗಿ ಉಡುಪಿಯಲ್ಲಿ ಕಾಣಿಯೂರು ಮಠದ ಶ್ರೀವಿದ್ಯಾ ವಲ್ಲಭತೀರ್ಥ ಹೇಳಿಕೆ ನೀಡಿದ್ದು, ದಿಗ್ವಿಜಯ್ ಸಿಂಗ್ ರಾಮನನ್ನು ನೋಡಿದ್ದಾರಾ? ನೋಡಿದ್ದರೆ ಹೇಳಲಿ ಬೇಕಾದರೆ ಅದೇ ರೀತಿ ಮೂರ್ತಿ ಮಾಡೋಣ. ಹಿಂದೂಗಳು ಒಗ್ಗಟ್ಟಾಗಿದ್ದಾರೆ ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಉಡುಪಿ, ಜನವರಿ 20: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ಸಿಂಗ್ (Digvijaya Singh) ರಾಮನನ್ನು ನೋಡಿದ್ದಾರಾ? ನೋಡಿದ್ದರೆ ಹೇಳಲಿ ಬೇಕಾದರೆ ಅದೇ ರೀತಿ ಮೂರ್ತಿ ಮಾಡೋಣ. ಹಿಂದೂಗಳು ಒಗ್ಗಟ್ಟಾಗಿದ್ದಾರೆ ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಾಣಿಯೂರು ಮಠದ ಶ್ರೀವಿದ್ಯಾ ವಲ್ಲಭತೀರ್ಥ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ವೋಟ್ ಬ್ಯಾಂಕ್ ಬಗ್ಗೆ ಆತಂಕ ಶುರುವಾಗಿದೆ. ರಾಮನ ಬೊಂಬೆ ಇಟ್ಟವರು ಎಂದು ಯಾರೋ ಹೇಳಿದ್ದಾರೆ. ಇದು ನಿರಾಶೆಯ ಪ್ರತೀಕ, ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಹೇಳಿದ್ದಾರೆ.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಬೇಕೆಂಬ ಬಯಕೆ ಇತ್ತು
ಅಷ್ಟಮಠಾಧೀಶರಿಗೆ ಅಯೋಧ್ಯ ರಾಮ ಪ್ರಾಣ ಪ್ರತಿಷ್ಠೆ ವೇಳೆ ಆಹ್ವಾನದ ಹಿನ್ನೆಲೆಯಲ್ಲಿ ಕಾಣಿಯೂರು ಶ್ರೀ ಅಯೋಧ್ಯೆಗೆ ತೆರಳಿದ್ದಾರೆ. ಅಯೋಧ್ಯೆಗೆ ಆಹ್ವಾನ ಬಂದಿರುವುದು ಖುಷಿ ತಂದಿದೆ. ನಾನು ಈಗಲೇ ಅಯೋಧ್ಯೆಗೆ ಹೊರಟಿದ್ದೇನೆ. ಆಹ್ವಾನದ ಬಗ್ಗೆ ಮೊದಲು ಗೊಂದಲ ಇತ್ತು. ಪ್ರಾಣ ಪ್ರತಿಷ್ಠೆ ವೇಳೆ ಆಹ್ವಾನ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಟ್ರಸ್ಟ್ನಿಂದ ಆಹ್ವಾನ ಬಂದ ಬಳಿಕ ಖಚಿತಗೊಂಡಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ: ಅಯೋಧ್ಯೆಗೆ ಹೊರಟ ಕರ್ನಾಟಕದ ಪ್ರಮುಖ ಮಠಾಧೀಶರು
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಬೇಕು ಎಂಬ ಬಯಕೆ ಇತ್ತು. ರಾಮ ಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀಗಳ ಪ್ರಯತ್ನ ಬಹಳ ಇದೆ. ಟೆಂಟ್ನ ಒಳಗೆ ರಾಮನ ವಿಗ್ರಹ ಪ್ರತಿಷ್ಠೆ ಮಾಡಿದವರೇ ಪೇಜಾವರ ಶ್ರೀಗಳು. ಅನೇಕರ ಪ್ರಯತ್ನದಿಂದ ಈಗ ರಾಮಮಂದಿರ ನಿರ್ಮಾಣವಾಗುತ್ತಿದೆ. ಈಗ ಮೋದಿಜಿ ಅವರ ಕಾಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದಿದ್ದಾರೆ.
ರಾಮನ ಪ್ರತಿಮೆ ಮುಖ ಬಹಳ ಸುಂದರವಾಗಿದೆ. ಮಂದಸ್ಮಿತ ದೇಹ ಲಕ್ಷಣಗಳು ಆಕರ್ಷಕವಾಗಿದೆ. ರಾಮ ದೇವರನ್ನೇ ಕಣ್ಣಾರೆ ನೋಡಿದಂತಾಗುತ್ತದೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮನ ಪ್ರತಿಮೆ ಕರ್ನಾಟಕದಲ್ಲಿ ಆಗಿದ್ದು ಅನ್ನೋದು ಸಂತೋಷದ ವಿಚಾರ. ಇನ್ನು ಮುಂದೆ ಅಲ್ಲಿ ಶಾಶ್ವತವಾಗಿ ಆ ಪ್ರತಿಮೆ ಇರಲಿದೆ. ನಮ್ಮ ರಾಜ್ಯದ ಶಿಲ್ಪಿ ಕೆತ್ತಿರುವ ಪ್ರತಿಮೆ ಸುಂದರವಾಗಿ ಮೂಡಿಬಂದಿದೆ. ಅಯೋಧ್ಯೆಗೆ ಹೋದಾಗಲೆಲ್ಲ ಇದನ್ನು ನಾವು ನೆನಪು ಮಾಡಿಕೊಳ್ಳಬಹುದು.
ಆಹ್ವಾನ ಇದ್ದು ಹೋಗದವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆಹ್ವಾನ ಇದ್ದು ಹೋಗದವರ ಬಗ್ಗೆ ನೋ ಕಮೆಂಟ್ಸ್. ಅವರಿಗೆ ದೇವರೇ ಬುದ್ಧಿ ಕೊಡಬೇಕು. ದೇವರೇ ಅವರನ್ನು ಕರೆಸಿಕೊಳ್ಳುತ್ತಾರೆ ಅಷ್ಟೇ ಹೇಳಬಹುದು. ರಾಮದೇವರು ಯಾರಿಗೂ ಕನಸಲ್ಲಿ ಬಂದು ಬರಬೇಡ ಎಂದು ಹೇಳಿರುವುದಿಲ್ಲ. ಅದೆಲ್ಲ ಕೇವಲ ಅವರವರ ಕಲ್ಪನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.