
ಉಡುಪಿ, ನವೆಂಬರ್ 27: ನವೆಂಬರ್ 28ರಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾಗವಹಿಸಲಿದ್ದು, ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೃಷ್ಣಮಠ ಭೇಟಿ ಹಿನ್ನೆಲೆ ಭಾರೀ ಸಿದ್ಧತೆಗಳು ನಡೆಯುತ್ತಿದೆ. ಪ್ರಧಾನಿಯವರು ಆದಿ ಉಡುಪಿ ಹೆಲಿಪಾಡ್‌ನಿಂದ ನಾರಾಯಣ ಗುರು ಸರ್ಕಲ್‌ವರೆಗೆ ರೋಡ್ ಶೋ ನಡೆಸಲಿದ್ದಾರೆ ಎಂದು ದೃಢಪಟ್ಟಿದೆ.
ಮೋದಿ ಆಗಮನಕ್ಕಾಗಿ ಪಟ್ಟಣದ ನಾರಾಯಣ ಗುರು ಸರ್ಕಲ್ ಬಳಿ ಹಾಗೂ ಜಯಲಕ್ಷ್ಮಿ ಸಿಲ್ಕ್ಸ್ ಮುಂಭಾಗದಲ್ಲಿ ಸಾಂಸ್ಕೃತಿಕ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಸಿಟಿ ಬಸ್ ನಿಲ್ದಾಣ ಪ್ರದೇಶದಲ್ಲೂ ವಿಶೇಷ ವ್ಯವಸ್ಥೆಗಳು ಮಾಡಲಾಗಿದೆ. ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಹಾಗೂ ಕಾರ್ಯಕರ್ತರು ರಸ್ತೆ ಬದಿಯಲ್ಲಿ ಜಮಾವಣೆ ಆಗುವ ನಿರೀಕ್ಷೆ ಇದೆ. ಮೂರು ಕಡೆಗಳಲ್ಲಿ ನಿಧಾನಗತಿಯಲ್ಲೇ ಸಾಗಲಿರುವ ಕಾರಿನಲ್ಲಿ ಪ್ರಧಾನಿಯವರು ಸಾರ್ವಜನಿಕರಿಗೆ ಕೈಬೀಸುತ್ತ ಸಾಗಲಿದ್ದಾರೆ. ಆದಿ ಉಡುಪಿ ಹೆಲಿಪಾಡ್‌ನಿಂದ ಕೃಷ್ಣಮಠದವರೆಗೆ ಎರಡು ಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಡಿವೈಡರ್‌ಗಳ ಮೇಲೆ ಕೇಸರಿ ಪತಾಕೆಗಳನ್ನು ಸಾಲು ಸಾಲಾಗಿ ಅಲಂಕರಿಸಲಾಗಿದೆ. ಕೃಷ್ಣಮಠ ಕೂಡ ಪ್ರಧಾನಿಯ ಸ್ವಾಗತದ ಸಿದ್ಧತೆಗಳಲ್ಲಿ ತೊಡಗಿದ್ದು, ಸಂಪೂರ್ಣ ರೋಡ್‌ಶೋ ಸುಮಾರು 15 ನಿಮಿಷಗಳವರೆಗೆ ಮುಂದುವರಿಯಲಿದೆ ಎನ್ನಲಾಗಿದೆ.
ಭದ್ರತಾ ವ್ಯವಸ್ಥೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ದಾವಣಗೆರೆ, ಮೈಸೂರು, ಬೆಂಗಳೂರು ಶಿವಮೊಗ್ಗ ಜಿಲ್ಲೆಗಳಿಂದ 3000ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದ್ದು, 10 ಎಸ್ಪಿ, 27 ಡಿವೈಎಸ್ಪಿ, 49 ಇನ್ಸ್ಪೆಕ್ಟರ್, 127 ಎಸ್ ಐ, 232 ಎ ಎಸ್ ಐ, 1608 ಪಿಸಿ, 39 ಡಬ್ಲ್ಯೂ ಪಿ ಸಿ , 48 ಬಿಡಿಡಿಎಸ್ ಟೀಂ, ಆರು ksrp, ಆರು ಕ್ಯೂಆರ್‌ಟಿ ಟೀಮ್ ನಿಯೋಜನೆ ಮಾಡಲಾಗಿದೆ. ರೋಡ್ ಶೋ ಮಾರ್ಗದುದ್ದಕ್ಕೂ ಪೊಲೀಸರಿಂದ ನಿರಂತರ ತಪಾಸಣೆ ನಡೆಯಲಿದ್ದು, ನಗರದ ಎಲ್ಲಾ ಕಡೆ ಬಾಂಬ್ ಸ್ಕ್ವಾಡ್ಗಳಿಂದ ಪರಿಶೀಲನೆ ನಡೆಯುತ್ತಿದೆ.
ಪೊಲೀಸ್ ಬಿಗಿ ಭದ್ರತೆಯ ದೃಶ್ಯ ಇಲ್ಲಿದೆ
ಇದನ್ನೂ ಓದಿ ಪ್ರಧಾನಿ ಮೋದಿ ಉಡುಪಿ ಭೇಟಿ: ಶ್ರೀ ಕೃಷ್ಣ ಮಠ ಸುತ್ತ ಬಿಗಿ ಬಂದೋಬಸ್ತ್, ದೇಗುಲಕ್ಕೆ ಬರುವವರು ಈ ಮಾರ್ಗಸೂಚಿ ಪಾಲಿಸಿ
ಶುಕ್ರವಾರ ಪ್ರಧಾನಿ ಮೋದಿ ಉಡುಪಿಗೆ ಭೇಟಿ ನೀಡುವ ಬಗ್ಗೆ ಪ್ರಧಾನಿ ಕಚೇರಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ವೇಳಾಪಟ್ಟಿಯ ಪ್ರಕಾರ, ಪ್ರಧಾನಿ ಮೋದಿ ಶುಕ್ರವಾರದ ಬೆಳಗ್ಗೆ 11.05ಕ್ಕೆ ದೆಹಲಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ತಕ್ಷಣವೇ 11.10ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಲಿದ್ದಾರೆ. ಅವರು ಬೆಳಿಗ್ಗೆ 11.35ಕ್ಕೆ ಉಡುಪಿಯ ಹೆಲಿಪ್ಯಾಡ್ ತಲುಪಲಿದ್ದಾರೆ. ಶ್ರೀಕೃಷ್ಣನ ದರ್ಶನ ಪಡೆದು ಲಕ್ಷಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮೋದಿ, ಭಗವದ್ಗೀತೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:15 am, Thu, 27 November 25