ಉಡುಪಿ: ಇಡ್ಲಿ-ಸಾಂಬಾರ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಹಬೆಯಲ್ಲಿ ಬೇಯಿಸುವ ಇಡ್ಲಿ ರುಚಿಯಷ್ಟೇ ಅಲ್ಲ. ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಉತ್ತಮ. ಅದರಲ್ಲೂ ಉಡುಪಿಯ ಇಡ್ಲಿ-ಸಂಬಾರ್ ಎಂದರೆ ಎಂತವರು ಕೂಡ ಒಮ್ಮೆ ಸವಿಯಬೇಕು ಎನ್ನುವ ಮಾತಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಇದೀಗ ಉಡುಪಿ ಇಡ್ಲಿಗೆ ಅಮೆರಿಕಾದಲ್ಲಿ ಟ್ರೇಡ್ಮಾರ್ಕ್ ಪಡೆಯಲಾಗಿದೆ. ಉಡುಪಿ ಹೋಟೆಲುಗಳ ಜನಪ್ರಿಯತೆಗೆ ಇದು ಮತ್ತಷ್ಟು ಹಿರಿಮೆ ತಂದುಕೊಡಲಿದೆ.
ಇಡ್ಲಿ ಅದರಲ್ಲೂ ಉಡುಪಿ ಇಡ್ಲಿಯ ರುಚಿ ತಿಂದವರಿಗೆ ಗೊತ್ತು. ತನ್ನದೇ ವಿಶಿಷ್ಟ ರುಚಿ ಹೊಂದಿರುವ ಉಡುಪಿ ಸಾಂಬಾರ್ ಅಥವಾ ತೆಂಗಿನಕಾಯಿ ಚಟ್ನಿಗೆ ಡಿಪ್ ಮಾಡಿದ ತುಂಡು ಇಡ್ಲಿಯನ್ನು ಬಾಯಿಗೆ ಇಟ್ಟರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು ಎಂದು ಅನಿಸುತ್ತದೆ. ಇದೀಗ ಉಡುಪಿ ಇಡ್ಲಿಗೆ 12,461ಕಿ. ಮೀ. ದೂರದ ಅಮೆರಿಕಾದಲ್ಲಿ ಬ್ರ್ಯಾಂಡ್, ಟ್ರೇಡ್ಮಾರ್ಕ್ನ ಗೌರವ, ಸ್ಥಾನಮಾನ ದೊರೆತಿದೆ.
ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ಉಡುಪಿ ಪ್ಯಾಲೇಸ್ ಹೋಟೆಲ್‌ನವರು ಉಡುಪಿ ಇಡ್ಲಿ ಬ್ರ್ಯಾಂಡ್‍ಗೆ ಟ್ರೇಡ್ಮಾರ್ಕ್ ಪಡೆದಿದ್ದು, ಆನ್‍ಲೈನ್ ಮೂಲಕ ವ್ಯವಹಾರ ನಡೆಯುತ್ತಿದೆ. ರೆಡಿ ಟು ಈಟ್ ಉದ್ದಿನ ಇಡ್ಲಿ, ರವೆ ಇಡ್ಲಿ, ಪ್ಯಾಕೆಟ್ ನಲ್ಲಿ ಚಟ್ನಿ, ಸಾಂಬಾರ್ ಅನ್ನು ಭಾರತೀಯರು ಮತ್ತು ಅಮೆರಿಕನ್ನರು ಮೈಕ್ರೊ ಓವನ್‍ನಲ್ಲಿ ಬಿಸಿ ಮಾಡಿ ತಿಂದು ಖುಷಿಪಡುತ್ತಿದ್ದಾರೆ.
ಕಾಲು ಕೆ.ಜಿ.(ಆರು) ಇಡ್ಲಿಗೆ 1.99ಡಾಲರ್(150ರೂ.), 24 ಇಡ್ಲಿಗಳ ಫ್ಯಾಮಿಲಿ ಪ್ಯಾಕಿಗೆ 4.99 ಡಾಲರ್(375ರೂ.) ದರವಿದ್ದು ಹಾಟ್ ಕೇಕ್ನಂತೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಬ್ರ್ಯಾಂಡ್, ಟ್ರೇಡ್ಮಾರ್ಕ್ ಆಯಾ ದೇಶಕ್ಕೆ ಸೀಮಿತವಾಗಿದ್ದರೂ ಜಾಗತಿಕ ಒಪ್ಪಂದಕ್ಕೆ ಅನುಗುಣವಾಗಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆಯೂ ಇದೆ ಎಂದು ಕಿರಣ್ ಆಚಾರ್ಯ ತಿಳಿಸಿದ್ದಾರೆ.
ನಮ್ಮ ಭಾರತೀಯ ಪರಂಪರೆಯಲ್ಲಿ ಆಹಾರ ಪದ್ಧತಿಯನ್ನು ಆರಾಧನೆಯ ರೀತಿಯಲ್ಲಿ ಗ್ರಹಿಸಲಾಗುತ್ತದೆ . ಒಂದು ಕಾಲದಲ್ಲಿ ಆಹಾರ ಮಾರಾಟ ಮಾಡುವುದೇ ತಪ್ಪು ಎಂಬ ಭಾವನೆಯೂ ಚಾಲ್ತಿಯಲ್ಲಿತ್ತು. ತಾನು ತಯಾರಿಸಿದ ಅಥವಾ ಅನ್ವೇಷಿಸಿದ ಆಹಾರದ ಮೇಲೆ ಹಕ್ಕು ಸ್ವಾಮ್ಯ ಸ್ಥಾಪಿಸುವ ಪರಿಪಾಠ ನಮ್ಮ ದೇಶದಲ್ಲಿ ಇಲ್ಲ. ಅಂತೆಯೇ ಉಡುಪಿಯ ಮಸಾಲೆ ದೋಸೆ, ಗೋಳಿ ಬಜೆ, ನೀರ್ ದೋಸೆ, ಮೂಡೆ, ಪತ್ರೊಡೆ, ಸುಕ್ರುಂಡೆ, ಅತಿರಸ, ಗಡ್‍ಬಡ್, ಈರೆಡ್ಡೆ(ಅರಶಿನ ಎಲೆ ಗಟ್ಟಿ) ಸಹಿತ ಸಾಂಪ್ರದಾಯಿಕ ಖಾದ್ಯ, ತಿಂಡಿಗಳಿಗೆ ಯಾವುದೇ ಬ್ರ್ಯಾಂಡ್, ಟ್ರೇಡ್ಮಾರ್ಕ್, ಪೇಟೆಂಟ್ ಈ ತನಕ ಪಡೆದಿಲ್ಲ. ಹಿರಿಯರ ಆಹಾರ ಸಂಶೋಧನೆ ಸಮಾಜಕ್ಕೆ ಅರ್ಪಿತವಾಗಿದ್ದರೆ ಈಗ ಎಲ್ಲದರಲ್ಲೂ ವ್ಯಾವಹಾರಿಕ, ವಾಣಿಜ್ಯಿಕ ದೃಷ್ಟಿ ಕೋನ ಹೆಚ್ಚಿದೆ.
ಅಮೆರಿಕದಲ್ಲಿ ಉಡುಪಿ ಇಡ್ಲಿಗೆ ಪಡೆದ ಬ್ರ್ಯಾಂಡ್, ಟ್ರೇಡ್ಮಾರ್ಕ್ ಅನ್ನು ಭಾರತದಲ್ಲಿ ಅರ್ಜಿ ಹಾಕಿ ಉತ್ಪಾದನೆ, ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿದರೆ ಆಗ ಉಡುಪಿ ಇಡ್ಲಿ ಹೆಸರಲ್ಲಿ ಅನ್ಯರು ಬ್ರ್ಯಾಂಡ್, ಟ್ರೇಡ್ಮಾರ್ಕ್ ಪಡೆವಂತಿಲ್ಲ. ಹೀಗಾಗಿ ಉಡುಪಿ ಮೂಲದ ಉತ್ಪನ್ನಗಳಿಗೆ ಬ್ರ್ಯಾಂಡ್, ಟ್ರೇಡ್ಮಾರ್ಕ್ ಪಡೆದುಕೊಳ್ಳಲು ಹಾಗೂ ರಫ್ತು ನಿಟ್ಟಿನಲ್ಲಿ ನೀಲ ನಕಾಶೆ ತಯಾರಿಸುವ ಚಿಂತನೆಯನ್ನು ಜಿಲ್ಲಾ ಆಡಳಿತ ಹೊಂದಿದೆ.
ಭಾರತ ಮೂಲದ ಹಲವಾರು ಆಹಾರ ಖಾದ್ಯಗಳಿಗೆ ಅನ್ಯ ರಾಷ್ಟ್ರಗಳು ಟ್ರೇಡ್ಮಾರ್ಕ್ ಪಡೆಯುತ್ತಿವೆ . ಈ ಕುರಿತಾದ ಅನೇಕ ವಿವಾದಗಳು ಕೋರ್ಟ್ನಲ್ಲಿಯೂ ಇವೆ. ಇಷ್ಟಾದರೂ ಇದು ನಮ್ಮದೆನ್ನುವ ಅಭಿಮಾನದ ಪ್ರದರ್ಶನ ನಮ್ಮಲ್ಲಿ ನಡೆದಿಲ್ಲ. ವಿಶ್ವಾದ್ಯಂತ ಉಡುಪಿ ಹೋಟೆಲುಗಳ ಜನಪ್ರಿಯತೆಯನ್ನು ಪಡೆದಿದ್ದರೂ, ನೆಟ್ಟಗೆ ಒಂದು ಉತ್ತಮ ಮೂಲ ಆಹಾರ ನೀಡುವ ಹೋಟೆಲ್ ಇಲ್ಲಿ ಸಿಗುವುದಿಲ್ಲ. ನಮ್ಮ ಆಹಾರ ಪದ್ಧತಿಯ ಬಗೆಗಿನ ಅಭಿಮಾನ ಶೂನ್ಯತೆ ನಿಜಕ್ಕೂ ದುರದೃಷ್ಟಕರ ಎನ್ನುವುದು ಮಾತ್ರ ಸತ್ಯ.
ವರದಿ: ಹರೀಶ್ ಪಾಲೇಚ್ಚಾರ್
ಇದನ್ನೂ ಓದಿ:
ಉಡುಪಿ ಕೃಷ್ಣಮಠದಲ್ಲಿ ಗೊಡ್ಡ ಮೊಗೇರ ಸಮುದಾಯದ ಕೌಶಲ ಪ್ರದರ್ಶನಕ್ಕೆ ಅವಕಾಶ; ನಶಿಸುತ್ತಿರುವ ಕಲೆಯ ಉಳಿವಿಗೆ ಆದ್ಯತೆ
ಉಡುಪಿ: ಕುಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯ ಗರಿ