ಕೋಟಿಲಿಂಗೇಶ್ವರ ಅಭಯ: ನವದಂಪತಿಗೆ ಸುಖದಾಂಪತ್ಯದ ಕನಸು ಕಟ್ಟಿಕೊಡುವ ಕುಂದಾಪುರ ಕೊಡಿ ಹಬ್ಬ ಸಪ್ತಾಹ ಆರಂಭ

| Updated By: ಸಾಧು ಶ್ರೀನಾಥ್​

Updated on: Dec 09, 2022 | 5:52 PM

kodi habba: ಜಾತ್ರೆಗೆ ಬಂದವರೆಲ್ಲಾ ಕಬ್ಬಿನ ಜಲ್ಲೆ ತೆಗೆದುಕೊಂಡು ಹೋಗೋದು ಇಲ್ಲಿನ ಪದ್ಧತಿ. ಕಬ್ಬಿನ ಜಲ್ಲೆಯ ಕೊಡಿ ಕೊಂಡೊಯ್ಯುವುದರಿಂದಲೂ ಇದನ್ನು ಕೊಡಿ ಹಬ್ಬ ಎಂದು ಕರೆಯಲಾಗುತ್ತೆ.

ಕೋಟಿಲಿಂಗೇಶ್ವರ ಅಭಯ: ನವದಂಪತಿಗೆ ಸುಖದಾಂಪತ್ಯದ ಕನಸು ಕಟ್ಟಿಕೊಡುವ ಕುಂದಾಪುರ ಕೊಡಿ ಹಬ್ಬ ಸಪ್ತಾಹ ಆರಂಭ
ನವದಂಪತಿಗೆ ಸುಖದಾಂಪತ್ಯದ ಕನಸು ಕಟ್ಟಿಕೊಡುವ ಕುಂದಾಪುರ ಕೊಡಿ ಹಬ್ಬ ಸಪ್ತಾಹ ಆರಂಭ
Follow us on

ಕರಾವಳಿಯ ಅತಿ ದೊಡ್ಡ ಜಾತ್ರೆ ಆರಂಭವಾಗಿದೆ. ಉಡುಪಿ (Udupi) ಜಿಲ್ಲೆಯ ಕುಂದಾಪುರ (kundapura) ತಾಲೂಕಿನ (Koteshwara) ಕೊಡಿ ಹಬ್ಬ ಅಂದ್ರೆ ಹಲವು ನಂಬಿಕೆಗಳ ಪ್ರತೀಕ. ಮದುವೆಯಾಗದವರಿಗೆ ಕೋಟಿಲಿಂಗೇಶ್ವರ ಅಭಯ ನೀಡುವ ದೇವರು. ನವದಂಪತಿಗೆ ಸುಖದಾಂಪತ್ಯದ ಕನಸು ಕಟ್ಟಿಕೊಡುವ ಕೇಂದ್ರ. ಇಲ್ಲಿನ ರಥೋತ್ಸವ ಅಂದ್ರೆ ಅದ್ದೂರಿತನಕ್ಕೆ ಇನ್ನೊಂದು ಹೆಸರು.

ಹೊಸದಾಗಿ ಮದುವೆಯಾದವರಿಗೆ ತಮ್ಮ ಸುಖ ದಾಂಪತ್ಯದ ಬಗ್ಗೆ ಸಾವಿರ ಕನಸುಗಳಿರುತ್ತವೆ. ಈ ದೇವ ಸನ್ನಿಧಿಯಲ್ಲಿ (kotilingeshwara kodi habba) ದಾಂಪತ್ಯಗೀತೆ ಆರಂಭವಾದ್ರೆ ಪೂರ್ಣ ಜೀವನ ಸುಖವಾಗಿರುತ್ತೆ ಅನ್ನೋದು ಜನರ ವಿಶ್ವಾಸ. ಹಾಗಂತಲೇ ಸಾವಿರ ಸಾವಿರ ಮಂದಿ ಕುಂದಾಪುರದ ಕೋಟಿಲಿಂಗೇಶ್ವರ ದರ್ಶನಕ್ಕೆ ಬರುತ್ತಾರೆ. ಕರಾವಳಿ- ಮಲೆನಾಡು ಭಾಗದ ಅತೀದೊಡ್ಡ ಜಾತ್ರೆ ಅಂದ್ರೆ ಕೊಡಿ ಹಬ್ಬ.

ಏಳು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಮೊದಲ ದಿನ ನವದಂಪತಿಗಳ ಜಾತ್ರೆ ನಡೆಯುತ್ತೆ. ಹೊಸದಾಗಿ ಮದುವೆಯಾದ ದಂಪತಿ ಕೈ ಕೈಹಿಡಿದು ಬಂದು, ಮನದಲ್ಲಿ ನೂರು ಹರಕೆ ಹೊತ್ತು ದೇವರಿಗೆ ಕೈ ಮುಗಿಯುತ್ತಾರೆ. ಪುಷ್ಕರಣಿಗೆ ಪ್ರದಕ್ಷಿಣೆ ಬಂದು ಸುತ್ತಲೂ ಅಕ್ಕಿ ಚೆಲ್ಲಿ ಹರಕೆ ತೀರಿಸುತ್ತಾರೆ. ಇಲ್ಲಿಂದ ಮುಂದೆ ಹೊಸ ಜೀವನ ಆರಂಭಿಸುತ್ತಾರೆ ಎಂದು ವ್ಯವಸ್ಥಾಪನ ಸಮಿತಿ ಸದಸ್ಯೆ ಚಂದ್ರಿಕಾ ಧನ್ಯ ಮಾಹಿತಿ ಹಂಚಿಕೊಂಡಿದ್ದಾರೆ.

ಉತ್ತಮ ಸಂತಾನದ ಆಸೆ ಹೊತ್ತವರೇ ಹೆಚ್ಚು ಸಂಖ್ಯೆಯಲ್ಲಿ ಬರೋದ್ರಿಂದ ಇದನ್ನು ಕುಡಿ ಹಬ್ಬ ಅಂತಾನೂ ಕರೆಯಬಹುದು. ಜಾತ್ರೆಗೆ ಬಂದವರೆಲ್ಲಾ ಕಬ್ಬಿನ ಜಲ್ಲೆ ತೆಗೆದುಕೊಂಡು ಹೋಗೋದು ಇಲ್ಲಿನ ಪದ್ಧತಿ. ಕಬ್ಬಿನ ಜಲ್ಲೆಯ ಕೊಡಿ ಕೊಂಡೊಯ್ಯುವುದರಿಂದಲೂ ಇದನ್ನು ಕೊಡಿ ಹಬ್ಬ ಎಂದು ಕರೆಯಲಾಗುತ್ತೆ.

ಗಾತ್ರದಲ್ಲಿ ಅತೀದೊಡ್ಡ ಎನಿಸಿದ ಬ್ರಹ್ಮರಥವನ್ನು ಭಕ್ತರೆಲ್ಲಾ ಸೇರಿ ಎಳೆಯುತ್ತಾರೆ. ಇಲ್ಲಿ ಶಿವ ದೇವರು ಕೋಟಿ ಲಿಂಗ ಸ್ವರೂಪದಲ್ಲಿ ನೆಲೆ ನಿಂತಿದ್ದಾನೆ ಅನ್ನೋದು ನಂಬಿಕೆ. ಗ್ರಾಮೀಣ ಜನರು ಕೊಡಿ ಹಬ್ಬಕ್ಕಾಗಿ ವರ್ಷವೆಲ್ಲಾ ಕಾಯ್ತಾರೆ. ಏಳು ದಿನದ ಜಾತ್ರೆಯಲ್ಲಿ ನಿತ್ಯವೂ ಬಂದು ಪಾಲ್ಗೊಂಡು ಸಂಭ್ರಮಿಸ್ತಾರೆ.

Also Read: ಚಿನ್ನದಂತಹ ಬದುಕು ನಡೆಸಬೇಕಿದ್ದ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಜೀವನ ಮೂರಾಬಟ್ಟೆಯಾಗಿದೆ! ಲಾಭವೇ ತಂದುಕೊಟ್ಟರೂ ಸರ್ಕಾರದ ನಿರ್ಲಕ್ಷ್ಯ

ಒಟ್ಟಾರೆಯಾಗಿ ಕರಾವಳಿಯಲ್ಲಿ ನಂಬಿಕೆಗಳೇ ಆಚರಣೆಗಳ ಜೀವಾಳ ಅಂತಾರೆ. ಗ್ರಾಮೀಣ ಜನರ ಬದುಕಿನಲ್ಲಿ ಕೊಡಿ ಹಬ್ಬ ಅವಿನಾಭಾವ ಸ್ಥಾನ ಪಡೆದಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಹಬ್ಬದ ವೈಭವ ಹೆಚ್ಚುತ್ತಿದೆ. (ವರದಿ: ದಿನೇಶ್ ಯಲ್ಲಾಪುರ್, ಟಿವಿ 9, ಉಡುಪಿ)