ಉಡುಪಿ: ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ನಾಯಕತ್ವ ವಹಿಸಿದೆ. ಕಾಲು ಕೆರೆದುಕೊಂಡು ಯಾರ ಜೊತೆಗು ಗಲಾಟೆ ತೆಗೆಯುವುದಿಲ್ಲ. ಭಾರತದ ತಂಟೆಗೆ ಬಂದರೆ ತಕ್ಕ ಉತ್ತರ ನೀಡುತ್ತೇವೆ. ಇಡೀ ಜಗತ್ತೇ ಭಾರತದ ಮಾತು ಕೇಳುವ ಕಾಲ ಬಂದಿದೆ ಎಂದು ಉಡುಪಿಯಲ್ಲಿ (Udupi) ಕೇಂದ್ರ ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್ (Rajnath Sing) ಹೇಳಿದ್ದಾರೆ.
ಉಡುಪಿ ಜಿಲ್ಲೆ ಮಣಿಪಾಲ ಪಟ್ಟದಲ್ಲಿರುವ ಮಾಹೆ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಹಾಗೆ 5 ಜನ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು ವಿಶ್ವದ 3ನೇ ಆರ್ಥಿಕ ದೇಶವಾಗಿ ಭಾರತ ಸದೃಢವಾಗಿ ನಿಂತಿದೆ. 2047ರ ವೇಳೆಗೆ ಭಾರತ ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ಗ್ಲೋಬಲ್ ಸಿಟಿಜನ್ ನಿರ್ಮಿಸಲು ಎನ್ಇಪೊ ಜಾರಿ ಮಾಡಿದ್ದೇವೆ. ಮಾಹೆ ವಿವಿಯ ಸತ್ಯ ನಾಡೆಲ್ಲಾ ಮೈಕೋಸಾಫ್ಟ್ನ ನೇತೃತ್ವ ವಹಿಸಿದ್ದಾರೆ ಎಂದು ತಿಳಿಸಿದರು.
ಮೈಕ್ರೋಸಾಫ್ಟ್ನ್ನು ಮೀರಿಸುವಂತಹ ಕಂಪನಿ ಭಾರತದಲ್ಲಿ ಸ್ಥಾಪನೆ ಆಗಬೇಕು. ಅಂತಾರಾಷ್ಟ್ರೀಯ ಕಂಪನಿ ಸಿಇಒಗಳು ಭಾರತ ಮೂಲದವರು ಎಂಬುವುದು ನಮ್ಮ ಹೆಗ್ಗಳಿಕೆ. ವಿದ್ಯಾರ್ಥಿಗಳಲ್ಲಿ ಜ್ಞಾನದ ಜೊತೆ ಬುದ್ದಿವಂತಿಕೆಯು ಅಗತ್ಯ. ರಾಮನಿಗಿಂತ ರಾವಣ ಜ್ಞಾನಿಯಾಗಿದ್ದನು. ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ. ಸಂಸ್ಕೃತಿ ಮತ್ತು ಸಂಪ್ರದಾಯ ಇಲ್ಲದ ನಾಗರಿಕ ಜೀವನಕ್ಕೆ ಅರ್ಥ ಇಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಹಲವಾರು ವರ್ಷಗಳಿಂದ ಸಾಧನೆ ಮಾಡಿಕೊಂಡು ಬಂದಿದೆ. ಈ ಬಗೆಗಿನ ನಮ್ಮ ಅಭಿಮಾನವನ್ನು ಕೆಲವರು ಹುಚ್ಚುಗಾರಿಕೆ ಎಂದು ಟೀಕಿಸುತ್ತಾರೆ. ಇತಿಹಾಸವನ್ನು ತಿಳಿದುಕೊಳ್ಳದ ವ್ಯಕ್ತಿಗಳು ಇಂತಹ ಟೀಕೆಗಳನ್ನು ಮಾಡುತ್ತಾರೆ. ಭಾರತೀಯರು ಕೊಟ್ಟ ಶೂನ್ಯ ಇರದ ಗಣಿತವನ್ನು ಊಹಿಸಲು ಸಾಧ್ಯವಿಲ್ಲ. ಪೈಥಾಗೋರಸನ ಪ್ರಮೇಯವನ್ನು ಬೋಧಾಯನ ಋಷಿ 300 ವರ್ಷಗಳ ಹಿಂದೆಯೇ ಪರಿಚಯಿಸಿದ್ದರು. ಭಾರತದಲ್ಲಿ ಆರ್ಥಿಕ ಸದೃಢತೆ ಗುಣಮಟ್ಟದ ಮಾನವ ಸಂಪನ್ಮೂಲಗಳಿವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Fri, 18 November 22