ಬ್ರಹ್ಮಾವರ: ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ 7 ಯುವಕರ ಪೈಕಿ ನಾಲ್ವರು ನೀರುಪಾಲು
ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ವರು ನೀರುಪಾಲಾಗಿರುವಂತಹ ಘಟನೆ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕುಕ್ಕುಡೆ ಕಿಣಿಯರ ಕುದ್ರು ಬಳಿ ನದಿಯಲ್ಲಿ ದುರಂತ ನಡೆದಿದೆ.
ಉಡುಪಿ: ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ವರು ನೀರುಪಾಲಾಗಿರುವಂತಹ (drowned) ಘಟನೆ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕುಕ್ಕುಡೆ ಕಿಣಿಯರ ಕುದ್ರು ಬಳಿ ನದಿಯಲ್ಲಿ ದುರಂತ ನಡೆದಿದೆ. ಇಬಾಜ್, ಫಜಾನ್, ಸೂಫಾನ್, ಫರಾನ್ ಮೃತರು. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮೂಲದವರು ಎಂದು ಗುರುತಿಸಲಾಗಿದೆ. ರಂಜಾನ್ ಹಬ್ಬಕ್ಕೆ ಬ್ರಹ್ಮಾವರದ ಸಂಬಂಧಿಕರ ಮನೆಗೆ ಬಂದಿದ್ದರು. ದೋಣಿ ಮೂಲಕ ಮೀನು ಹಿಡಿಯಲು ಏಳು ಯುವಕರು ತೆರಳಿದ್ದರು. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರಿಂದ ಶೋಧ ಕಾರ್ಯ ನಡೆಯುತ್ತಿದೆ.
ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಮೂವರು ಸಹೋದರರು ನೀರುಪಾಲು
ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಮೂವರು ಸಹೋದರರು ನೀರುಪಾಲಾದ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಬಳಿ ನಡೆದಿದೆ. ಹಿರೇಗೋಣಿಗೆರೆ ಗ್ರಾಮದ ಕಿರಣ್ (14), ವರುಣ್ (15), ಪವನ್ (16) ಮೃತಪಟ್ಟ ಸಹೋದರರು. ಸ್ನಾನ ಮಾಡಲೆಂದು ನದಿಗೆ ಇಳಿದ ಮೂವರು ನೀರುಪಾಲಾಗಿದ್ದು, ಮಾಹಿತಿ ತಿಳಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಡೆತ್ನೋಟು ಬರೆದಿಟ್ಟು ಸರ್ಕಾರಿ ಆಸ್ಪತ್ರೆಯ ವೈದ್ಯ ನೇಣಿಗೆ ಶರಣು; ಕಾರಣ ಇಲ್ಲಿದೆ
ಸದ್ಯ ನೀರುಪಾಲಾದ ಮೂವರ ಪೈಕಿ ವರುಣ್ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂಪಿ ರೇಣುಕಾಚಾರ್ಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಒಂದೇ ಕುಟುಂಬದ ಮೂವರು ದುರ್ಮರಣ
ರಾಮನಗರ: ಕುರಿಗಳ ಮೈತೊಳೆಯಲು ಹೋಗಿದ್ದ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವಂತಹ ದಾರುಣ ಘಟನೆಯೊಂದು ಜಿಲ್ಲೆಯ ಮಾಗಡಿ ತಾಲೂಕಿನ ಮುತ್ತಸಾಗರ ಬಳಿ ಕೆರೆಯಲ್ಲಿ ನಡೆದಿದೆ. ನಾಗರಾಜು(30), ಜ್ಯೋತಿ(35) ಮತ್ತು ಲಕ್ಷ್ಮೀ(22) ಮೃತರು. ಇಬ್ಬರ ಮೃತದೇಹ ಹೊರತೆಗೆದ ಅಗ್ನಿ ಶಾಮಕ ಸಿಬ್ಬಂದಿ, ಮತ್ತೊಂದು ಶವ ಹೊರತೆಗೆಯಲು ಶೋಧಕಾರ್ಯ ನಡೆಸಿದ್ದಾರೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯಾದಗಿರಿ; ಸುಫಾರಿ ಪಡೆದು ಕೊಲೆಗೆ ಹೊಂಚು ಹಾಕಿದ್ದ ಕ್ಯಾಬ್ ಡ್ರೈವರ್; ಲಾಡ್ಜ್ ಪರಿಶೀಲನೆ ವೇಳೆ ಯುವಕ ಅಂದರ್
ಟಿಪ್ಪರ್ ಡಿಕ್ಕಿ: ದಂಪತಿ ಸ್ಥಳದಲ್ಲೇ ಸಾವು
ಕಲಬುರಗಿ: ಟಿಪ್ಪರ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಕಲಬುರಗಿ ನಗರದ ಉದನೂರು ಕ್ರಾಸ್ ಬಳಿ ನಡೆದಿದೆ. ರಾಣೋಜಿ ವಾಡಿ(42), ಪತ್ನಿ ರೇಣುಕಾ(35) ಮೃತರು. ಕಲಬುರಗಿ ತಾಲೂಕಿನ ಶರಣ ಸಿರಸಗಿ ಗ್ರಾಮದ ನಿವಾಸಿಗಳಾಗಿದ್ದಾರೆ. ಅಪಘಾತ ಬಳಿಕ ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:32 pm, Sun, 23 April 23