ಉಡುಪಿ: ಕಲಬುರಗಿ ಗಣೇಶೋತ್ಸವಕ್ಕೆ ತಮಗೆ ಪ್ರವೇಶ ನಿಷೇಧ ವಿಧಿಸಿರುವ ವಿಚಾರವಾಗಿ ಶ್ರೀರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಜಿಲ್ಲಾಧಿಕಾರಿಯ ಆದೇಶವಲ್ಲ, ಸರ್ಕಾರದ ಆದೇಶ. ಸರ್ಕಾರ ಅಂದ್ರೆ ಬಿಜೆಪಿ. ನನಗೆ ಪದೇಪದೆ ನಿರ್ಬಂಧ ಹೇರುವುದು ಬಿಜೆಪಿಗೆ ಶೋಭೆ ತರುವುದಿಲ್ಲ ಎಂದು ಉಡುಪಿ ಜಿಲ್ಲೆ ಗಂಗೊಳ್ಳಿಯಲ್ಲಿಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ನಿಷೇಧಿಸಿದಾಗ ಬಿಜೆಪಿ ವಿರೋಧ ಮಾಡಿತ್ತು!
ನೀವು ತಡೆಯುತ್ತಿರುವುದು ಮುತಾಲಿಕ್ನನ್ನು ಅಲ್ಲ; ಹಿಂದುತ್ವವನ್ನು! ಹಿಂದುತ್ವದ ಶಕ್ತಿ ಸೇರುವ ಜಾಗಕ್ಕೆ ತಡೆದು ದ್ರೋಹ ಮಾಡ್ತಿದ್ದೀರಿ. ಇದು ಸಂವಿಧಾನ ವಿರೋಧಿ ನಡೆ, ಸ್ವಾತಂತ್ರ್ಯ ಹರಣವೆಂದು ಮುತಾಲಿಕ್ ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ನಿಷೇಧಿಸಿದಾಗ ನೀವು ವಿರೋಧ ಮಾಡಿದ್ದೀರಿ! ಎಂದು ಉಡುಪಿ ಜಿಲ್ಲೆ ಗಂಗೊಳ್ಳಿಯಲ್ಲಿಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಮನೆಗೆ ಸಾಂತ್ವನ ಹೇಳುವಾಗಲೂ ನಿರ್ಬಂಧ ಮಾಡಿದ್ದೀರಿ. ಗಂಗೊಳ್ಳಿಯ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲೂ ಭಾಗವಹಿಸಲು ಬಿಟ್ಟಿಲ್ಲ. ನಾನು ಮಾತನಾಡಿದರೆ ಗಲಭೆ ಆಗುತ್ತೆ ಅನ್ನುತ್ತೀರಿ. ಗಲಾಟೆಯಾದರೆ ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿ. ಸಾಧ್ಯವಾದರೆ ಗಲಾಟೆ ಮಾಡುವವರನ್ನು ಹದ್ದುಬಸ್ತಿನಲ್ಲಿ ಇಡಿ. ಹಿಂದುಗಳಿಂದ ಯಾವತ್ತೂ ಗಲಭೆಯಾಗಿಲ್ಲ ತಿಳಿದಿರಲಿ ಎಂದು ಅವ ರು ಎಚ್ಚರಿಸಿದರು.
ಬಿಜೆಪಿ ಸರಕಾರದ ಮಾನ ಮರ್ಯಾದೆಯನ್ನು ಬೀದಿ ಬೀದಿ …ಮನೆ ಮನೆಗೆ ಹೋಗಿ ತೆಗಿತೀನಿ. ಪದೇಪದೇ ನಿರ್ಬಂಧ ಹೇರಿ ನಾಟಕ ಮಾಡ್ತಾ ಇದ್ದೀರಾ? ಮುಸ್ಲಿಮರನ್ನು, ಶತ್ರುಗಳನ್ನು, ದಂಗೆ ಕೋರರನ್ನು ನನ್ನ ಮೇಲೆ ಎತ್ತಿ ಕಟ್ಟುತ್ತೀರಾ? ಹಿಂದುಗಳ ಕೊಲೆಯಾಗುವಾಗ ಸಂಘಟನೆಗಳಿಗೆ ನೀವು ಬಲ ತುಂಬಬೇಕು. ನ್ಯಾಯಾಲಯದಿಂದ ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಿಸ್ತೀನಿ ಎಂದು ಪ್ರಮೋದ್ ಮುತಾಲಿಕ್ ಗುಡುಗಿದರು.
ಶಿವಮೊಗ್ಗ ಶಂಕಿತ ಭಯೋತ್ಪಾದಕರ ಬಂಧನ ವಿಚಾರ ಪ್ರಸ್ತಾಪಿಸಿದ ಪ್ರಮೋದ್ ಮುತಾಲಿಕ್, ಶಿವಮೊಗ್ಗ ಅಂದ್ರೆ ಹಿಂದುತ್ವದ ಭದ್ರಕೋಟೆ. ಮಲೆನಾಡಿನಲ್ಲಿ ಹಿಂದೂಗಳ ಜಾಗೃತ ಸಮಾಜವಿದೆ. ಮಲೆನಾಡಿನಲ್ಲಿ ಭಯೋತ್ಪಾದಕರ ಅಡಗು ತಾಣಗಳಾಗುತ್ತಿವೆ. ಸರಕಾರ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಹಿಂದೂ ಭದ್ರಕೋಟೆ ಶಿಥಿಲವಾಗುತ್ತಿದೆ, ಇದು ಅಪಾಯಕಾರಿ ಬೆಳವಣಿಗೆ. ಸರಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಭಯಾನಕ ಸ್ಥಿತಿ ನಿರ್ಮಾಣವಾಗುತ್ತೆ ಎಂದೂ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.
ಇರಾನ್ ನಲ್ಲಿ ಹಿಜಾಬ್ ವಿರುದ್ಧ ಮಹಿಳೆಯರ ಹೋರಾಟ ವಿಚಾರ ಪ್ರಸ್ತಾಪಿಸಿದ ಪ್ರಮೋದ್ ಮುತಾಲಿಕ್, ಇರಾನ್ ಒಂದು ಇಸ್ಲಾಮಿಕ್ ರಾಷ್ಟ್ರ. ಇಸ್ಲಾಮಿಕ್ ರಾಷ್ಟ್ರದಲ್ಲಿ ಹಿಜಾಬನ್ನ ಬ್ಯಾನ್ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಕಟ್ಟರ್ ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿದೆ. ಶಿಕ್ಷಣದಿಂದ ವಂಚಿಸಲು.. ಮನೆಯಿಂದ ಹೊರಗೆ ಬಿಡುತ್ತಿಲ್ಲ. ಪ್ರಾಣಿಗಳಂತೆ ಮಹಿಳೆಯರ ಜೊತೆ ವರ್ತಿಸಲಾಗುತ್ತಿದೆ. ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ಕೊಲ್ಲುವ ಮೂಲಕ ಇದು ಬಯಲಾಗಿದೆ. ಇರಾನಿನ ಮುಸ್ಲಿಂ ಮಹಿಳೆಯರು ಸಿಡಿದೆದ್ದಿದ್ದಾರೆ. ಇದರಿಂದ ಹಿಜಾಬ್ ಪರ ನಿಂತಿರುವ ಕರ್ನಾಟಕದ ವಿದ್ಯಾರ್ಥಿನಿಯರು ಇರಾನ್ ನಿಂದ ಪಾಠ ಕಲಿಯಬೇಕು. ಕರ್ನಾಟಕದಲ್ಲಿ ನಿಮಗೆ ಹಿಜಾಬ್ ಬ್ಯಾನ್ ಮಾಡಿಲ್ಲ. ನಿಮಗೆ ಎಲ್ಲಿ ಬೇಕಾದರೂ ಹಿಜಾಬ್ ಧರಿಸಿ ಹೋಗಬಹುದು. ಆದರೆ ಕ್ಲಾಸ್ ರೂಮ್ ಒಳಗಡೆ ಹಿಜಾಬ್ ಬೇಡ ಎಂದಷ್ಟೇ ನಿಯಮವಿದೆ. ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರು ಸಿಎಫ್ಐ, ಪಿಎಸ್ಐ ಬೊಂಬಡಾ ಬಡಿಯುತ್ತಿದೆ. ಇರಾನ್ ನಲ್ಲಿ ಏನಾಗ್ತಿದೆ ಹೋಗಿ ನೋಡಿ. ನಮ್ಮಲ್ಲಿ ಶೋಷಣೆ ಇಲ್ಲ ಸ್ವಾತಂತ್ರ ಕೊಟ್ಟಿದ್ದೇವೆ. ನ್ಯಾಯಾಲಯದ ಆದೇಶವನ್ನು ಪರಿಪಾಲನೆ ಮಾಡಿ. ನಮ್ಮಲ್ಲಿ ಶರಿಯಾ, ಕುರಾನ್, ಹದೀಸ್ ನಡೆಯಲ್ಲ. ನಿಮ್ಮನ್ನು ಶೋಷಣೆ ಮಾಡುತ್ತಿರುವ ಮುಸ್ಲಿಂ ಪುರುಷ ಸಮಾಜದ ಬಗ್ಗೆ ಎಚ್ಚರವಿರಲಿ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.