ಉಡುಪಿ, ಅಕ್ಟೋಬರ್ 04: ಉಡುಪಿ (Udupi) ಜಿಲ್ಲೆಯ ಉಚ್ಚಿಲ ದಸರಾಕ್ಕೆ ಚಾಲನೆ ದೊರೆತಿದೆ. ಸತತ ಮೂರು ವರ್ಷಗಳಿಂದ ಕಾಪು ತಾಲೂಕಿನ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಿಯ ದಸರಾ ಉತ್ಸವಕ್ಕೆ (Uchil Dasara-2024) ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಉಚ್ಚಿಲ ಮಹಾಲಕ್ಷ್ಮಿ ಮೊಗವೀರ ಸಮುದಾಯದ ಪ್ರಮುಖ ದೇವಿಯಾಗಿದ್ದಾಳೆ. ಹೀಗಾಗಿ ಮೊಗವೀರ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉಚ್ಚಿಲ ದಸರಾದಲ್ಲಿ ಭಾಗವಹಿಸುತ್ತಾರೆ.
ಕಳೆದ ಎರಡು ವರ್ಷಗಳಿಂದ ಇಲ್ಲಿ ದಸರಾ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿದ್ದ, ಕರ್ನಾಟಕದ ಕೊಲ್ಲಾಪುರ ಎಂಬ ಖ್ಯಾತಿ ಪಡೆದಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಆಚರಿಸಲಾಗುತ್ತದೆ.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮೂರನೇ ವರ್ಷದ ದಸರಾ ಮಹೋತ್ಸವಕ್ಕೆ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಚಾಲನೆ ನೀಡಿದರು. ಶ್ರೀಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ನವದುರ್ಗೆಯರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ಕೆವಿ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪುರೋಹಿತರಾದ ಕೆ.ವಿ ರಾಘವೇಂದ್ರ ಉಪಾಧ್ಯಾಯರು ಗೊಂಬೆಗಳಿಗೆ ಪೂಜೆ ನೆರವೇರಿಸಿದರು.
ಇದನ್ನೂ ಓದಿ: ಈ ಪಟ್ಟಣದಲ್ಲಿದೆ ಮಹಿಷ ದೇವಸ್ಥಾನ: ಇಲ್ಲಿ ನಿತ್ಯವೂ ನೆರವೇರುತ್ತೆ ಮಹಿಷಾಸುರನಿಗೆ ಪೂಜೆ!
ಇದೇ ಸಂದರ್ಭದಲ್ಲಿ, ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನುಗಳ ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನಗಳ ಉದ್ಘಾಟನೆ ನೆರವೇರಿತು. ಪ್ರತಿದಿನ ಬೆಳಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಭಜನೆ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಾವಿರು ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಶ್ರೀದುರ್ಗಾ ಕಲೊಕ್ತ ಪೂಜೆ, ಪ್ರಸಾದ ವಿತರಣೆ, ಆಕರ್ಷಕ ಲೇಸರ್ ಶೋ ಮತ್ತು ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆಯಲಿವೆ.
ದಸರಾ ಕೊನೆಯ ದಿನ ಅ.12ರಂದು ಸಂಜೆ ಉಚ್ಚಿಲ ಎರ್ಮಾಳು, ಉಚ್ಚಿಲ ಮೂಳೂರು ದೇವರ ವೈಭವದ ಶೋಭಾಯಾತ್ರೆ ಕಾಪುವಿನವರೆಗೆ ನಡೆಯಲಿದೆ. ಕಾಪು ಲೈಟ್ ಹೌಸ್ ಬಳಿಯ ಕಡಲ ಕಿನಾರೆಯಲ್ಲಿ ಸುಮಂಗಲೆಯರಿಂದ ಮಹಾಮಂಗಳಾರತಿ, ಬೃಹತ್ ಗಂಗಾರತಿ, ಲೇಸರ್ ಶೋ, ಮ್ಯೂಸಿಕಲ್ ನೈಟ್ ನಡೆಯುತ್ತದೆ. ಕೊನೆಗೆ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಜಲಸ್ತಂಭನ ನಡೆಯಲಿದೆ.
ಒಟ್ಟಾರೆಯಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ನಡೆಯುವ 3ನೇ ವರ್ಷದ ಉಚ್ಚಿಲ ದಸರಾ ಉತ್ಸವ ಪ್ರಯುಕ್ತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮ ಆಗಲಿದೆ. ದಸರಾ ಉತ್ಸವವನ್ನು ನೋಡಲು ಮೈಸೂರುಗೆ ತೆರಳಿ ಕಣ್ತುಂಬಿಕೊಳ್ಳುವ ಭಕ್ತರು ಉಡುಪಿಯ ಉಚ್ಚಿಲ ದಸರಕ್ಕೂ ಭೇಟಿ ನೀಡಿ ಭಾಗವಹಿಸಿ ಎಂದು ಆಯೋಜಕರು ವಿನಂತಿಸಿದ್ದಾರೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Fri, 4 October 24